ತುಮಕೂರು:
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ 2020-21ನೇ ಸಾಲಿನ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಗೌರವ ತೋರಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಆರ್.ರಾಮಚಂದ್ರಯ್ಯ, ಜಿಪಂ ಸದಸ್ಯರಾದ ಕಲ್ಲೇಶ್ ಮತ್ತು ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶನಿವಾರ ತಾಪಂ ಕೆಡಿಪಿ ಸಭೆ ಇದೆ ಎಂದು ಶುಕ್ರವಾರ ಸಂಜೆ ನಮಗೆ ಮಾಹಿತಿ ನೀಡಿದ್ದಾರೆ. ಒಂದು ದಿನದಲ್ಲಿ ನಾವು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅವಲೋಕನ ಮಾಡುವುದಾದರೂ ಹೇಗೆ? ವರದಿಯಲ್ಲಿರುವ ಮಾಹಿತಿ ತಿಳಿದುಕೊಳ್ಳಲು ನಮಗೆ ಸಮಯ ಬೇಡವೇ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಈ ಬಗ್ಗೆ ಸಚಿವರಾದ ಮಧುಸ್ವಾಮಿಯವರನ್ನು ಪ್ರಶ್ನೆ ಮಾಡಿದರೆ ಮೌನವಹಿಸುತ್ತಾರೆ. ನಮಗೆ ಅಗೌರವ ತೋರಿರುವ ಸಭೆಯಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಸಭೆಯಿಂದ ಹೊರ ನಡೆಯುತ್ತೇವೆ ಎಂದರೆ ಸಚಿವರು ಹೋಗಿ ಹೋಗಿ ಎನ್ನುತ್ತಾರೆ, ಆದ್ದರಿಂದ ನಾವು ಸಭೆ ಬಹಿಷ್ಕಾರ ಮಾಡಿ ಹೊರಬಂದೆವು. ಇದು ಸಚಿವರ ಸರ್ವಾಧಿಕಾರ ಧೋರಣೆ ಎಂದು ದೂರಿದರು.
ತಾಲ್ಲೂಕಿನಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮ, ಸಭೆ ನಡೆದರೂ ಜಿಲ್ಲಾ ಪಂಚಾಯತ್ ಸದಸ್ಯರಾದ ನಮಗೆ ತಾಲ್ಲೂಕು ಪಂಚಾಯಿತಿ ಇಒ ಆಗಲೀ, ತಹಶೀಲ್ದಾರರಾಗಲೀ ಮಾಹಿತಿಯೇ ನೀಡುವುದಿಲ್ಲ, ಚಿ.ನಾ.ಹಳ್ಳಿ ಕ್ಷೇತ್ರದಲ್ಲಿ ಜಿಪಂ ಸದಸ್ಯರಿದ್ದಾರೆ ಎಂಬುದನ್ನೇ ತಾಲ್ಲೂಕು ಅಧಿಕಾರಿಗಳು ಮರೆತಿದ್ದಾರೆ ಎಂದು ಆರೋಪಿಸಿದರು.
ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಲವಾರು ಸಮಸ್ಯೆಗಳ ಬಗ್ಗೆ ಅನುದಾನಗಳ ಬಗ್ಗೆ ಚರ್ಚೆಗೆ ಅವಕಾಶವಿರುತ್ತದೆ. ನಮ್ಮ ತಾಲ್ಲೂಕಿಗೆ ತಾಲ್ಲೂಕಿಗೆ ಇಲಾಖಾವಾರು ಅನುದಾನ ಎಷ್ಟು ಬಂತು. ಇಲಾಖಾವಾರು ಬಂದಂತಹ ಹಣ ಎಸ್ಸಿ, ಎಸ್ಟಿಗೆ ಎಷ್ಟು ಹಂಚಿಕೆ ಆಗಿದೆ. ಸಬ್ಸಿಡಿ ಹಣ ಯಾವುದಕ್ಕೆ ನೀಡುತ್ತೇವೆ. ಗಂಗಾ ಕಲ್ಯಾಣ ಯೋಜನೆಗೆ ಎಷ್ಟು ಅನುದಾನ ಮೀಸಲಿಡಲಾಗಿದೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಏನೇನು ಸೌಲಭ್ಯ ನೀಡುತ್ತಿದ್ದೇವೆ, ಇಲಾಖಾವಾರು ಹಣ ಹಂಚಿಕೆಯಾಗಿದೆಯೇ? ಅನುಷ್ಠಾನವಾಗಿದೆಯೇ, ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆಯಾ, ಲೋಪವಾಗಿದೆಯಾ ಎಂಬು ದನ್ನು ಸಭೆಯಲ್ಲಿ ಚರ್ಚಿಸಲು ಅವಕಾಶವಿರುತ್ತದೆ. ಈ ಎಲ್ಲಾ ಮಾಹಿತಿಯೂ ವರದಿಯಲ್ಲಿರುತ್ತದೆ. ತಾಪಂ ಇಓ ಅವರು ಶನಿವಾರ ಕೆಡಿಪಿ ಸಭೆ ಇದೆ ಶುಕ್ರವಾರ ಸಂಜೆ ವರದಿಯನ್ನು ಕಳುಹಿಸಿದರೆ ನಾವು ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಲು ಸಮಯವಕಾಶ ಬೇಡವೇ, ಒಂದು ವಾರದ ಮುಂಚೆ ವರದಿ ನೀಡಬೇಕಾದ ತಾಪಂ ಅಧಿಕಾರಿಗಳು ಒಂದು ದಿನ ಮುಂಚೆ ಕೊಟ್ಟರೆ ನಾವು ಲೆಕ್ಕಕ್ಕಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಚುನಾಯಿತ ಪ್ರತಿನಿಧಿಗಳು, ನಮ್ಮ ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಬಗ್ಗೆ ಸಾರ್ವಜನಿಕರು ಪ್ರಶ್ನಿಸುತ್ತಾರೆ. ಹೀಗಿರುವಾಗ ನಾವು ಸಾರ್ವಜನಿಕರಿಗೆ ಏನು ಉತ್ತರ ಕೊಡುವುದು, ನಮ್ಮನ್ನು ತಾಲ್ಲೂಕು ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ಸಚಿವರ ಕೈಗೊಂಬೆಯಾಗಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಇದೇ ರೀತಿ ಅಧಿಕಾರಿಗಳು ನಮ್ಮನ್ನು ನಿರ್ಲಕ್ಷಿಸುತ್ತಾ ಹೋದರೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿ ಅಧಿಕಾರಿಗಳ ಸರ್ವಾಧಿಕಾರ ಧೋರಣೆ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.