ಕೊರಟಗೆರೆ:

      ಕೊರೊನಾ ಸೋಂಕಿತ ರೋಗಿಗಳಿಗೆ ಪೌಷ್ಟಿಕಾಂಶದ ಆಹಾರ, ಮೂಲಸೌಕರ್ಯ ಮತ್ತು ಸಮರ್ಪಕ ವೈದ್ಯಕೀಯ ಔಷಧಿ ಪೂರೈಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಹಗಲುರಾತ್ರಿ ಜಾಗೃತೆ ವಹಿಸಬೇಕಾಗಿದೆ ಕೊರಟಗೆರೆ ತಹಶೀಲ್ದಾರ್ ಮತ್ತು ತಾಲೂಕು ವೈದ್ಯಾಧಿಕಾರಿಗೆ ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಸೂಚನೆ ನೀಡಿದರು.

      ಕೊರಟಗೆರೆ ಪಟ್ಟಣದ ಕಂದಾಯ ಇಲಾಖೆಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಪ್ರತ್ಯೇಕ ಕೊವಿದ್ ತುರ್ತು ಚಿಕಿತ್ಸೆ ಕೇಂದ್ರ ಮತ್ತು ಕೊರೊನಾ ಸೊಂಕಿತ ರೋಗಿಗಳಿಗೆ ಮೂಲ ಸೌಲಭ್ಯದ ತುರ್ತುಸಭೆಯಲ್ಲಿ ಸರಕಾರಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

      ಆಡಳಿತ ವೈದ್ಯಾಧಿಕಾರಿ ಮತ್ತು ತಾಲೂಕು ವೈದ್ಯಾಧಿಕಾರಿ ಸಮನ್ವಯತೆ ಕಾಪಾಡಿಕೊಂಡು ಕೊರೊನಾ ರೋಗದ ವಿರುದ್ದ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ. ಕೊರೊನಾ ರೋಗದ ವಿರುದ್ದ ಪ್ರತಿಯೊಂದು ಇಲಾಖೆಯ ಸಹಕಾರ ಅಗತ್ಯವಾಗಿ ಬೇಕಾಗಿದೆ. ತುರ್ತು ಪರಿಸ್ಥಿತಿಯಲ್ಲಿ ನಾವೇಲ್ಲರೂ ಒಟ್ಟಾಗಿ ಕಾರ್ಯ ನಿರ್ವಹಣೆ ಮಾಡಬೇಕಾಗಿದೆ ಎಂದು ತಿಳಿಸಿದರು.

      ಕೊರಟಗೆರೆ ತಾಲೂಕಿನಲ್ಲಿ 19ಕೊರೊನಾ ಪ್ರಕರಣ ದೃಢಪಟ್ಟಿದೆ. ತುರ್ತು ಚಿಕಿತ್ಸೆಗಾಗಿ ಇಬ್ಬರನ್ನು ಮಾತ್ರ ತುಮಕೂರು ಕೊರೊನಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂಳಿದ 17ಜನ ಕೊರೊನಾ ರೋಗಿಗಳಿಗೆ ರೆಡ್ಡಿಕಟ್ಟೆ ಕೋವಿದ್ ಕ್ಲಿನಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಸಾಮಾಜಿಕ ಅಂತರದ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ತಿಳಿಸಿದರು.

      ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಈಗಾಗಲೇ ರೆಡ್ಡಿಕಟ್ಟೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿದ್ ಕ್ಲಿನಿಕ್ ಕೇಂದ್ರ ತೆರೆಯಲಾಗಿದೆ. ಹುಲೀಕುಂಟೆ ಕಿತ್ತೂರರಾಣಿ ಚೆನ್ನಮ್ಮ ಮತ್ತು ಏಕಲವ್ಯ ವಸತಿ ಶಾಲೆಯನ್ನು ಈಗಾಗಲೇ ಗುರುತಿಸಲಾಗಿದೆ. ಕೊರೊನಾ ಸೊಂಕಿತ ರೋಗಿ ಮತ್ತು ಪ್ರಥಮ ಸಂಪರ್ಕದ ವ್ಯಕ್ತಿಗಳು ಆರೋಗ್ಯ ಇಲಾಖೆಯ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗಿದೆ ಎಂದು ಹೇಳಿದರು.

      ಕೊರಟಗೆರೆ ಕಂದಾಯ ಇಲಾಖೆ ಆವರಣದಲ್ಲಿ ಸರಕಾರಿ ಅಧಿಕಾರಿಗಳ ಜೊತೆ ಕೊರೊನಾ ರೋಗದ ಮುಂಜಾಗ್ರತಾ ಕ್ರಮದ ಬಗ್ಗೆ ಸಭೆ ನಡೆಸಿದ ತುಮಕೂರು ಜಿಲ್ಲಾಧಿಕಾರಿ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊವಿದ್ ಕ್ಲಿನಿಕ್ ಕೇಂದ್ರ ತೆರೆಯುವ ಬಗ್ಗೆ ಆಡಳಿತ ವೈದ್ಯಾಧಿಕಾರಿ ಬಳಿ ಚರ್ಚಿಸಿ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿದರು. ನಂತರ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಚತೆ ಮತ್ತು ನೈರ್ಮಲ್ಯತೆ ಕಾಪಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

      ತುರ್ತುಸಭೆಯಲ್ಲಿ ಕೊರಟಗೆರೆ ಕೊರೊನಾ ನೊಡಲ್ ಅಧಿಕಾರಿ ಡಾ.ಚೇತನ್, ತಹಶೀಲ್ದಾರ್ ಗೋವಿಂದರಾಜು, ಟಿಎಚ್‍ಓ ವಿಜಯಕುಮಾರ್, ವೈದ್ಯಾಧಿಕಾರಿ ಡಾ.ಪ್ರಕಾಶ್, ಪಪಂ ಮುಖ್ಯಾಧಿಕಾರಿ ತಾಪಂ ಇಓ ಶಿವಪ್ರಕಾಶ್, ಕೃಷಿ ಸಹಾಯಕ ನಿರ್ದೇಶಕ ನಾಗರಾಜು, ಬೆಸ್ಕಾಂ ಎಇಇ ನಾಗರಾಜು, ಅಬಕಾರಿ ಇನ್ಸ್‍ಪೇಕ್ಟರ್ ರಾಮಮೂರ್ತಿ ಸೇರಿದಂತೆ ಇತರರು ಇದ್ದರು.

(Visited 41 times, 1 visits today)