ತುಮಕೂರು :

      ಪಶು ವೈದ್ಯರು ಹಳ್ಳಿಗಳಿಗೆ ತೆರಳಿ ರೈತರ ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕೆ ಮುಂದಾಗಿ ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಬಿ ಚವ್ಹಾಣ್ ಅವರು ಪಶು ವೈಧ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

      ತುಮಕೂರು ನಗರದಲ್ಲಿರುವ ಪಶುಪಾಲನ ಮತ್ತು ಪಶು ವೈದ್ಯ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿಂದು ನಡೆದ ಇಲಾಖೆಯ ಪ್ರಗತಿ ಪರೀಶೀಲನಾ ಸಭೆ ನಡೆಸಿ ಮಾತನಾಡಿದ ಅವರು ವೈದ್ಯರು ಹಳ್ಳಿಗಳಿಗೂ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಪರಿಹರಿಸಿ, ಪಶು ಸಂಗೋಪನೆ ಇಲಾಖೆಯಲ್ಲಿನ ಪಶುವೈದ್ಯರು ಬರೀ ಕೇಂದ್ರ ಸ್ಥಾನದ ಕಛೇರಿಯಲ್ಲಿ ಕುಳಿತು ಕೊಳ್ಳದೇ ಹಳ್ಳಿಗಳಿಗೆ ಭೇಟಿ ನೀಡಿ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕು ಎಂದು ಅವರು ಹೇಳಿದರು.

      ನಿತ್ಯ ಹಳ್ಳಿಗಳಿಗೆ ಭೇಟಿ ನೀಡಿದ ಕೆಲಸದ ಪೋಟೊ ಹಾಗೂ ವಿವರವನ್ನು ವಾಟ್ಸಾಪ್ ಮೂಲಕ ನನಗೆ ಕಳುಹಿಸಿ. ಸದ್ಯದಲ್ಲೆ ಪಶುಸಂಗೋಪನೆ ಇಲಾಖೆಯ ವಾರ್ ರೂಮ್ ಸ್ಥಾಪನೆ ಮಾಡುವ ಆಲೋಚನೆ ಇದೆ ಎಂದು ಹೇಳಿದರು. ಜಾನುವಾರುಗಳಿಗೆ ನಿಯಮಿತವಾಗಿ ವ್ಯಾಕ್ಸಿನ್ ನೀಡುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಜಾನುವಾರುಗಳ ಹೆಚ್ಚಿನ ಕಾಳಜಿ ವಹಿಸಿ ರೈತರ ಹಿತಾಸಕ್ತಿ ಕಾಪಾಡಬೇಕು ಎಂದು ಹೇಳಿದರು. ವೈದ್ಯರು ಹಳ್ಳಿಗಳಿಗೆ ಭೇಟಿ ನೀಡಿದಾಗ ಹಾಗೂ ಚಿಕಿತ್ಸೆ ನೀಡುವಾಗ ಕೋವಿಡ್ ಸೊಂಕು ಹರಡದಂತೆ ಎಚ್ಚರಿಕೆ ವಹಿಸಿ ಚಿಕಿತ್ಸೆ ನೀಡಲು ಎಲ್ಲಾ ಕ್ರಮ ಕೈಗೊಳ್ಳಬೇಕು. ಕಸಾಯಿಖಾನೆಗಳಿಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿರುವುದಾಗಿ ದೂರುಗಳು ಬಂದಿರುತ್ತವೆ. ಅಧಿಕಾರಿಗಳು ಜಿಲ್ಲೆಯಲ್ಲಿ ಹದ್ದಿನ ಕಣ್ಣಿಟ್ಟು ಅಕ್ರಮ ಸಾಗಣೆ ತಡೆಯುವ ನಿಟ್ಟಿನಲ್ಲಿ ಸದಾ ಸಜ್ಜಾಗಿರಬೇಕು ಎಂದು ತಿಳಿಸಿದರು.

      ಪ್ರತಿ ಜಿಲ್ಲೆಗೆ ಅಂಬುಲೆನ್ಸ್‍ಗಳನ್ನು ನೀಡುತ್ತಿದ್ದು ಈಗಾಗಲೇ ಅಂಬುಲೆನ್ಸ್‍ಗಳನ್ನು ಖರೀದಿಸಲಾಗಿದೆ. ಶೀಘ್ರದಲ್ಲಿ ಅಂಬುಲೆನ್ಸ್‍ಗಳನ್ನು ಜಿಲ್ಲೆಗಳಿಗೆ ನೀಡಲಾಗುವುದು ಎಂದು ತಿಳಿಸಿದರು.

      ವಧಾಗಾರಕ್ಕೆ ಬೇಟಿ ನೀಡಿ :

      ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಚೀಲನಹಳ್ಳಿಯಲ್ಲಿ ಆಧುನಿಕವಾಗಿ ನಿರ್ಮಣಗೊಳ್ಳುತ್ತಿರುವ ವಧಾಗಾರ(ಕುರಿ ಮತ್ತು ಮೇಕೆ ಮಾಂಸ ಉತ್ಪಾದನೆ ಮತ್ತು ಆಧುನಿಕ ಸಂಸ್ಕರಣಾ ಕೇಂದ್ರಕ್ಕೆ) ಇಂದು ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

      ಆನಂತರ ಮಾತನಾಡಿದ ಅವರು ನಿರ್ಮಾಣ ಹಂತದಲ್ಲಿರುವ ಕಟ್ಟಡದ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು 44.63ಕೋಟಿ ವೆಚ್ಚದಲ್ಲಿ ವಧಾಗಾರ ನಿರ್ಮಣವಾಗುತ್ತಿದ್ದು, ಮುಂಬರುವ ಡಿಸೆಂಬರ್-ಜನವರಿ ತಿಂಗಳಲ್ಲಿ ಕೇಂದ್ರದ ಕಾರ್ಯನಿರ್ವಹಣೆಗೆ ಹಸಿರು ನಿಶಾನೆ ತೋರಿಸಲಾಗುವುದು ಎಂದರು.

       ಪಶುಪಾಲನ ಹಾಗೂ ಪಶು ವೈದ್ಯಕೀಯ ಇಲಾಖೆಯಲ್ಲಿರುವ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ವೈದ್ಯರು ಹಳ್ಳಿಗಳಿಗೆ ತೆರಳಿ ಉತ್ತಮ ಚಿಕಿತ್ಸೆ ನೀಡಬೇಕು ಎಂಬುದೇ ನಮ್ಮ ಗುರಿಯಾಗಿದೆ ಎಂದು ಹೇಳಿದರು.
ತುಮಕೂರು ನಗರದಲ್ಲಿ ಹಂದಿಗಳ ಸಂಖ್ಯೆ ಹೆಚ್ಚಾಗಿದ್ದು, ಇಲಾಖೆಯ ವತಿಯಿಂದ ಅವುಗಳ ಪುನರ್ವಸತಿಗೆ ಕ್ರಮಕೈಗೊಳ್ಳುವಂತೆ ಶಾಸಕರಾದ ಜಿ.ಬಿ ಜ್ಯೋತಿ ಗಣೇಶ್ ಅವರು ಸಭೆಯಲ್ಲಿ ಸಚಿವರಿಗೆ ಮನವಿ ಮಾಡಿದರು.

      ಸಭೆಯಲ್ಲಿ ಉಪ ನಿರ್ದೇಶಕ ಡಾ.ನಂದೀಶ್, ಸಚಿವರ ಆಪ್ತ ಕಾರ್ಯದರ್ಶಿ ಸುರೇಶ್ ಗೌಡ, ಒ.ಎಸ್.ಡಿ ಜಯಪ್ರಕಾಶ್, ಡಾ.ನಾಗಣ್ಣ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ತುಮಕೂರು ಹಾಲು ಒಕ್ಕೂಟಕ್ಕೆ ಸಚಿವರ ಬೇಟಿ:

      ತುಮಕೂರು ನಗರದ ಹೊರವಲಯದಲ್ಲಿರುವ ತುಮಕೂರು ಹಾಲು ಒಕ್ಕೂಟದ ಹಾಲು ಸಂಸ್ಕರಣ ಹಾಗೂ ಪ್ಯಾಕಿಂಗ್ ಘಟಕಕ್ಕೆ ಬೇಟಿನೀಡಿ ಮಾಹಿತಿ ಪಡೆದರು ಈ ಸಂದರ್ಭದಲ್ಲಿ ಒಕ್ಕೂಟದ ಅದ್ಯಕ್ಷ ಮಹಾಲಿಂಗಯ್ಯ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಅಧಿಕಾರಿಗಳು ಹಾಜರಿದ್ದರು.

(Visited 24 times, 1 visits today)