ಮಧುಗಿರಿ :
ತಾಲೂಕಿನಲ್ಲಿ ಮಳೆ ಬೀಳದೆ ಬೇಸಿಗೆಕಾಲ ಬೀಕರವಾಗಿದ್ದು ಅಂತರ್ಜಲ ಸಂಪೂರ್ಣ ಕುಸಿದಿರುವುದರಿಂದ ಜನ, ಜಾನುವಾರುಗಳಿಗೆ ಕುಡಿವ ನೀರಿಗೆ ತೊಂದರೆ ಆಗದಂತೆ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಪುರಸಭೆ ಹಾಗೂ ನಿರಾವರಿ ಇಲಾಖೆಯ ಅಧಿಕಾರಿಗಳು ಒಂದು ಮಾಸ್ಟರ್ ಪ್ಲಾನ್ ತಯಾರಿಸಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳುವಂತೆ ಶಾಸಕ ಎಂ.ವಿ.ವೀರಭದ್ರಯ್ಯ ಸಲಹೆ ನೀಡಿದರು.
ಶನಿವಾರ ಮಧುಗಿರಿ ಪುರಸಭೆಯಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ವತಿಯಿಂದ ಆಯೋಜಿಸಿದ್ದ ಪೌರ ಕಾಮಿರ್ರಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಬಾರಿ ಸಕಾಲದಲ್ಲಿ ಮಳೆ ಬಾರದೆ ಜಲ ಮೂಲಗಳಾದ ಕೆರೆ, ಕಟ್ಟೆಗಳು ಬತ್ತಿದ್ದು, ಕೊಳವೆ ಬಾವಿಗಳಲ್ಲಿ ನೀರು ಸಿಗದ ಕಾರಣ ಮತ್ತು ಈಗ ಸಿಗುವ ನೀರನ್ನೇ ಸಮರ್ಪಕವಾಗಿ ವಿತರಿಸುವ ಮೂಲಕ ಕುಡಿವ ನೀರಿಗೆ ಜನ, ಜಾನುವಾರುಗಳಿಗೆ ತೊಂದರೆ ಆಗದಂತೆ ಸದಾ ಕಾಲ ಪುರಸಭೆ ಮತ್ತು ನಿರಾವರಿ ಇಲಾಖೆಯ ಅಧಿಕಾರಿಗಳು ಕಾಳಾಜಿ ವಹಿಸಬೇಕು ಎಂದರು.
ಪಟ್ಟಣ ಸ್ವಚ್ಚವಾಗಿರಬೇಕಾದರೆ ಪೌರ ಕಾರ್ಮಿಕರ ಆರೋಗ್ಯ ರಕ್ಷಣೆ ಮತ್ತು ಕಲ್ಯಾಣಕ್ಕೆ ಮೊದಲ ಆದ್ಯತೆ ನೀಡಬೇಕು. ತಾವು ಮಾಡುವ ಕಾಯಕದಲ್ಲಿ ಶ್ರದ್ಧೆಯಿಂದ ಅಚ್ಚುಕಟ್ಟಾಗಿ ಕೆಲಸ ಮಾಡಿ ಸ್ವಚ್ಚತೆಯಲ್ಲಿ ಮಧುಗಿರಿಗೆ ಒಳ್ಳೆಯ ಹೆಸರು ತರಬೇಕು. ಆ ಕೆಲಸ ಮಾಡಿ ಮಾದರಿ ಪಟ್ಟಣವನ್ನಾಗಿ ಮಾಡಲು ಶ್ರಮಿಸಬೇಕು. ಆ ನಿಟ್ಟಿನಲ್ಲಿ ತಮಗೆ ನಿವೇಶನ, ಮನೆ ಸೇರಿದಂತೆ ಸರ್ಕಾದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಡಿ.ಲೋಹಿತ್ ಮಾತನಾಡಿ, ಹೇಮಾವತಿ ನೀರು ಸಂಗ್ರಹವಾಗುತ್ತಿರುವ ಸಿದ್ದಾಪುರ ಕೆರೆಯ ತೂಬಿನಲ್ಲಿ ನೀರು ಸೋರಿಕೆಯಾಗುತ್ತಿದ್ದನ್ನು ಮನಗಂಡ ನಾಲ್ವರು ಪೌರ ಕಾರ್ಮಿಕರು ತೂಬಿಗೆ ಮಣ್ಣು ತುಂಬಿ ನೀರು ಪೋಲಾಗದಂತೆ ತಡೆಗಟ್ಟಿರುವುದನ್ನು ಸ್ಮರಿಸಿ, ಶಾಸಕ ವೀರಭದ್ರಯ್ಯ ಅವರು ಆಸಕ್ತಿ ವಹಿಸಿ ಸಿದ್ದಾಪುರ ಕೆರೆಗೆ ಹೇಮಾವತಿ ನೀರು ಹರಿಸುತ್ತಿದ್ದಾರೆ ಎಂದು ತಿಳಿಸಿದ ಅವರು,ಮಧುಗಿರಿ ನಗರ ಸ್ವಚ್ಚವಾಗಿರಬೇರಾದರೆ ಪೌರ ಕಾರ್ಮಿಕರು ಆರೋಗ್ಯವಂತರಾಗಿರಬೇಕು ಎಂದರು.
ಪರಿಸರ ಅಭಿಯಂತರ ಸೌಮ್ಯ ಮಾತನಾಡಿ, 2010 ರಿಂದ ಸಫಾಯಿ ಕರ್ಮಚಾರಿ ಆಯೋಗ ರಚನೆ ಆದ ನಂತರ ಪೌರಕಾರ್ಮಿಕರಿಗೆ ನಿಗತ ವೇತನ, ಉದ್ಯೋಗ ಭದ್ರತೆ ಒದಗಿಸಿದೆ. ಆದ್ದರಿಂದ ಕಾರ್ಮಿಕರು ದುಶ್ಚಟಗಳಿಂದ ದೂರವಿದ್ದು ಉತ್ತಮ ಜೀವನ ನಡೆಸುವ ಮೂಲಕ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವಂತೆ ಸಲಹೆ ನೀಡಿದರು.
ಪುರಸಭೆ ಸದಸ್ಯೆ ಎಂ.ಗಂಗರಾಜು ಮಾತನಾಡಿ, ಪಟ್ಟಣ ಸ್ವಚ್ಚ ಮಾಡುವ ಕಾರ್ಮಿಕರು ವೈಯಕ್ತಿಕ ಬದುಕಿನಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ತಿಳಿಸಿದರು.ಇದೇ ಸಂದಭರ್ರದಲ್ಲಿ ಪೂರಸಭೆ ವತಿಯಿಂದ ಶಾಸಕ ಎಂ.ವಿ.ವೀರಭದ್ರಯ್ಯ ಮತ್ತು ಹಿರಿಯ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.