ತುಮಕೂರು:

     ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಒದಗಿಸುವ ಸಲುವಾಗಿ ಸಿದ್ದಗಂಗಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊರೊನಾ ಚಿಕಿತ್ಸಾ ಕೇಂದ್ರವನ್ನು ತೆರೆಯಲು ತೀರ್ಮಾನಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ.

      ಸಿದ್ದಗಂಗಾ ಆಸ್ಪತ್ರೆಯು ವಿಷಮ ಪರಿಸ್ಥಿತಿಯ ಕೊರೊನಾ ಪೀಡಿತರನ್ನು ಉಪಚರಿಸಲು ಅವಶ್ಯವಿರುವ ಎಲ್ಲ ಅತ್ಯಾಧುನಿಕ ಸೌಲಭ್ಯ, ಹೆಚ್ಚು ರೋಗಿಗಳನ್ನು ಉಪಚರಿಸುವ ವ್ಯವಸ್ಥೆ, ಸಂಪನ್ಮೂಲಗಳನ್ನು ಹೊಂದಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಡಾ. ಜಿ.ಎಸ್. ಮಹೇಶ್ ತಿಳಿಸಿದ್ದಾರೆ.

      ಸಿದ್ದಗಂಗಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರು ಹಾಗೂ ಇತರ ರೋಗಿಗಳನ್ನು ಏಕಕಾಲಕ್ಕೆ ಶುಶ್ರೂಷೆ ಮಾಡುವಷ್ಯು ಸ್ಥಳಾವಕಾಶ ಮತ್ತು ಸಂಪನ್ಮೂಲ ಲಭ್ಯವಿದೆ ಎಂದು ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಪರಮೇಶ್ ತಿಳಿಸಿದ್ದಾರೆ.ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ತುರ್ತು ಚಿಕಿತ್ಸೆಗೆ ಅಂದರೆ ಹೃದ್ರೋಗ, ಮೂತ್ರಕೋಶ ಸಮಸ್ಯೆ, ನರರೋಗ ಸೇರಿದಂತೆ ಮತ್ತಿತರ ಸಮಸ್ಯೆಗಳನ್ನು ನಿರ್ವಹಿಸಲು ತಜ್ಞ ವೈದ್ಯರ ತಂಡ ಸದಾಕಾಲ ಲಭ್ಯ ಇರುತ್ತಾರೆ.

     ಈ ನಿರ್ಧಾರದಿಂದಾಗಿ ಸೋಂಕಿತರು ಎಲ್ಲ ಖಾಸಗಿ ನರ್ಸಿಂಗ್ ಹೋಂಗಳು ಮತ್ತು ಆಸ್ಪತ್ರೆಗಳಿಗೆ ಎಡತಾಕುವುದನ್ನು ನಿಲ್ಲಿಸಬಹುದು. ಅಲ್ಲದೆ ಈ ಅಲೆದಾಟದಲ್ಲಿ ಅವರು ಹೆಚ್ಚು ಸಾರ್ವಜನಿಕರ ಸಂಪರ್ಕಕ್ಕೆ ಬರುವುದುನ್ನು ತಪ್ಪಿಸಬಹುದು ಎಂದು ಅವರು ಹೇಳಿದ್ದಾರೆ.

    ಜಿಲ್ಲೆಯಲ್ಲಿ ಲಭ್ಯವಿರುವ ವೈದ್ಯರ ಶ್ರಮ, ಸಮಯ ಕೊರೊನಾ ಲಕ್ಷಣ ಇರುವವರ ಚಿಕಿತ್ಸೆಗೆ ಹಾಗೂ ಇತರೆ ತುರ್ತು ಚಿಕಿತ್ಸೆ ಅಗತ್ಯ ಇರುವವರಿಗೂ ಸಿಗುವಂತೆ ವಿವೇಚನೆಯಿಂದ ಬಳಸಬಹುದಾಗಿದೆ. ಇತರೆ ಆಸ್ಪತ್ರೆಗಳಲ್ಲಿ ಇರುವ ವೈದ್ಯಕೀಯ ಸಿಬ್ಬಂದಿ ಸೋಂಕಿಗೆ ಒಳಗಾಗದಂತೆ ಎಚ್ಚರ ವಹಿಸುವುದಕ್ಕೆ ಸಾಧ್ಯವಾಗುತ್ತದೆ. ಜತೆಗೆ ಸೋಂಕಿತರು ಬಯಸುವ ಸೌಲಭ್ಯ ಮತ್ತು ಚಿಕಿತ್ಸೆಯನ್ನು ಒಂದೇ ಸೂರಿನಡಿಯಲ್ಲಿ ಕಲ್ಪಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

     ಇದು ಖಾಸಗಿ ಚಿಕಿತ್ಸೆಯಾಗಿರುವುದರಿಂದ ರೋಗ ಚಿಕಿತ್ಸೆಯ ದರವು, ರೋಗಿಯ ಪರಿಸ್ಥಿತಿ, ರೋಗಿ, ಸಂಬಂಧಿಕರು ಅಪೇಕ್ಷಿಸುವ ಸೌಲಭ್ಯಗಳು ಮತ್ತು ಅವರು ಹೊಂದಿರುವ ಖಾಸಗಿ ವಿಮೆಯ ಸೌಲಭ್ಯಗಳ ಮೇಲೆ ನಿರ್ಧಾರವಾಗಲಿದೆ ಎಂದು ಅವರು ಹೇಳಿದ್ದಾರೆ. 

(Visited 208 times, 1 visits today)