ಗುಬ್ಬಿ:
ಸೀಲ್‍ಡೌನ್ ಪ್ರದೇಶದಲ್ಲಿನ ಜನರ ಸಂಕಷ್ಟಕ್ಕೆ ಸ್ಪಂದಿಸುವ ಜತೆಗೆ ಕೊರೋನಾ ವಾರಿಯರ್ಸ್‍ಗಳಾದ ಆಶಾ ಕಾರ್ಯಕರ್ತೆಯರ ಬವಣೆ ಆಲಿಸುವ ಕೆಲಸ ಸೇವೆಗೆ ಅರ್ಥ ನೀಡಿದೆ ಎಂದು ತಹಸೀಲ್ದಾರ್ ಡಾ.ಪ್ರದೀಪ್‍ಕುಮಾರ್ ಹಿರೇಮಠ ತಿಳಿಸಿದರು.
ತಾಲ್ಲೂಕಿನ ನಿಟ್ಟೂರು ಹೋಬಳಿ ದೊಡ್ಡಗುಣಿ ವಿಎಸ್‍ಎಸ್‍ಎನ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ವಿತರಿಸಲಾದ ದಿನಸಿ ಪದಾರ್ಥಗಳ ಕಿಟ್ ನೀಡಿ ಮಾತನಾಡಿದ ಅವರು ದೊಡ್ಡಗುಣಿ ಭಾಗದಲ್ಲಿ ಎರಡು ಕೊರೋನಾ ಪಾಸಿಟೀವ್ ಪ್ರಕರಣ ಪತ್ತೆಯಾಗಿತ್ತು. ಈ ಸಂದರ್ಭದಲ್ಲಿ ಈ ವಾರಿಯರ್ಸ್‍ಗಳ ಸೇವೆ ಸ್ಮರಣೀಯ. ಅವರ ಶ್ರಮದ ಫಲ ಮತ್ತೇ ಯಾವುದೇ ಪ್ರಕರಣ ಈ ಭಾಗದಲ್ಲಿ ಕಂಡಿಲ್ಲ ಎಂದು ಶ್ಲಾಘಿಸಿದರು.
ಕೊರೋನಾ ವೈರಸ್ ಗ್ರಾಮೀಣ ಭಾಗದಲ್ಲಿ ಕಾಡುತ್ತಿದೆ. ಮುಗ್ದ ಜನರ ಬದುಕಿನಲ್ಲಿ ಆವಾಂತರ ಹುಟ್ಟಿಸುವ ಈ ವೈರಾಣು ತಡೆಗೆ ಅಗತ್ಯ ಜಾಗೃತಿ ಕ್ರಮವನ್ನು ಸ್ವಯಂಪ್ರೇರಿತರಾಗಿ ಜನರು ಅನುಸರಿಸಬೇಕಿದೆ. ಈ ಸಂದರ್ಭದಲ್ಲಿ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಮಾಡುತ್ತಿದ್ದಾರೆ. ಆದರೆ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೂ ತೆರಳಿ ಜಾಗೃತಿ ಜತೆಗೆ ಮನದಟ್ಟು ಮಾಡಿ ಯಾವುದೇ ಕಾರ್ಯಕ್ರಮ, ಸಭೆ, ಸಮಾರಂಭ ನಡೆಯದಂತೆ ನೋಡಿಕೊಂಡಿದ್ದಾರೆ. ಕಂದಾಯ ಇಲಾಖೆಯ ಕೆಲಸಗಳಿಗೆ ಸಾಥ್ ನೀಡಿದ ಅವರು ಕಾರ್ಯವೈಖರಿ ಮೆಚ್ಚುವಂತಹದು ಎಂದರು.
ದೊಡ್ಡಗುಣಿ ವಿಎಸ್‍ಎಸ್‍ಎನ್ ಅಧ್ಯಕ್ಷ ಕಾರೇಕುರ್ಚಿ ಸತೀಶ್ ಮಾತನಾಡಿ ರೈತಪರ ಕೆಲಸ ಮಾಡುತ್ತಾ ಬೆಳದ ಈ ವಿಎಸ್‍ಎಸ್‍ಎನ್ 2.50 ಕೋಟಿ ರೂಗಳ ಬೆಳೆ ಸಾಲ ನೀಡಿ ಜಿಲ್ಲೆಯಲ್ಲಿ ಉತ್ತಮ ಸೊಸೈಟಿ ಎನಿಸಿಕೊಂಡಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸುವ ಜತೆಗೆ ಕೊರೋನಾ ಸಂದರ್ಭದಲ್ಲಿ ಕ್ವಾರಂಟೈನ್‍ಗೆ ಒಳಗಾಗುವ ಕುಟುಂಬಗಳ ಸಂಕಷ್ಟಕ್ಕೂ ಸ್ಪಂದಿಸಲಾಗಿದೆ. ಆದರೆ ಕನಿಷ್ಠ ವೇತನದಲ್ಲಿ ಬದುಕು ನಡೆಸುವ ಆಶಾ ಕಾರ್ಯಕರ್ತೆಯರ ಕುಟುಂಬ ಸಹ ಕಷ್ಟ ಅನುಭವಿಸುತ್ತಿವೆ. ಈ ಸಂದರ್ಭದಲ್ಲಿ ಗೌರವಧನ ಸಹ ನಿಗದಿತ ಸಮಯಕ್ಕೆ ದೊರೆಯದ ಕಾರಣ ಅವರ ಕುಟುಂಬಕ್ಕೂ ದಿನಸಿ ಕಿಟ್ ನೀಡುವ ಉದ್ದೇಶದಲ್ಲಿ ಎಲ್ಲಾ ಸದಸ್ಯರು ಒಗ್ಗೂಡಿ ನಿರ್ಧರಿಸಿ ದೊಡ್ಡಗುಣಿ ಆಸ್ಪತ್ರೆಗೆ ಸಂಬಂಧಿಸಿದ 30 ಮಂದಿ ಸಿಬ್ಬಂದಿಗಳಿಗೆ ಕಿಟ್ ನೀಡಲಾಗಿದೆ ಎಂದರು.
ತಾಲ್ಲೂಕಿನಲ್ಲಿ 30 ಪ್ರಕರಣ ಕಾಣಿಸಿಕೊಂಡಿದೆ. ಈಗಾಗಲೇ ಎಲ್ಲಾ ಹೋಬಳಿಯಲ್ಲೂ ಕಾಣಿಸಿಕೊಂಡ ಈ ವೈರಸ್ ತಡೆಗೆ ಆಶಾ ಕಾರ್ಯಕರ್ತೆಯರ ಪರಿಶ್ರಮ ಅತ್ಯಗತ್ಯವಾಗಿದೆ. ಪ್ರತಿ ಮನೆ ತಲುಪಿ ಗರ್ಭಿಣಿ ಸ್ತ್ರೀಯರು, ವಿವಿಧ ಕಾಯಿಲೆಗೆ ಒಳಪಟ್ಟವರು, ಮಕ್ಕಳು ಮತ್ತು ವೃದ್ದರು ಹೀಗೆ ಎಲ್ಲಾ ಮಾಹಿತಿ ಪಡೆದು ಕೊರೋನಾ ಜಾಗೃತಿಗೆ ನಿಗಾವಹಿಸಿದ್ದಾರೆ. ಆರೋಗ್ಯ ಇಲಾಖೆ ಜತೆಗೆ ನಿಕಟ ಸಂಪರ್ಕದಲ್ಲಿ ಪಾಸಿಟೀವ್ ಪ್ರಕರಣ ಕಂಡು ಹಿಡಿದು ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ವಿಳಾಸ ಕಂಡು ಹಿಡಿಯುವಲ್ಲಿ ಆಶಾ ಕಾರ್ಯಕರ್ತೆಯರ ಶ್ರಮ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ತಾಪಂ ಸದಸ್ಯ ರಾಜಣ್ಣ, ವಿಎಸ್‍ಎಸ್‍ಎನ್ ಉಪಾಧ್ಯಕ್ಷ ಡಿ.ಎಸ್.ಪರಶಿವಮೂರ್ತಿ, ಸದಸ್ಯರಾದ ಡಿ.ಎಸ್.ರೇಣುಕಾಪ್ರಸಾದ್, ಪಂಚಾಕ್ಷರಯ್ಯ, ಬಸವರಾಜು, ಮಂಜುನಾಥ್, ಕಂಚಿರಾಯ, ಗಂಗಾಧರಯ್ಯ, ಯೋಗೀಶ್, ಜಯಣ್ಣ, ಈರಣ್ಣ, ವೈದ್ಯ ಡಾ.ಕಿರಣ್, ಸಹಕಾರ ಅಭಿವೃದ್ಧಿ ಅಧಿಕಾರಿ ಸುರೇಶ್, ಪಿಡಿಓ ರಂಗಸ್ವಾಮಿ, ವಿಎಸ್‍ಎಸ್‍ಎನ್ ಸಿಇಓ ಓಂಕಾರಮೂರ್ತಿ ಇತರರು ಇದ್ದರು.