ಚಿಕ್ಕನಾಯಕನಹಳ್ಳಿ:
ಮದ್ಯವನ್ನು ಕಳ್ಳಹಾದಿಯಲ್ಲಿ ಗ್ರಾಮಕ್ಕೆ ತಂದು ಅಕ್ರಮವಾಗಿ ಮಾರುತ್ತಿದ್ದ ಕೃತ್ಯವನ್ನು ಮಾಲು ಸಮೇತ ಬಯಲಿಗೆಳೆದು ಕಾನೂನುಕ್ರಮ ಕೈಗೊಳ್ಳುವಂತೆ ತಾಲ್ಲೂಕಿನ ಜಾಣೇಹಾರ್ ಗ್ರಾಮದ ಮಹಿಳೆಯರು ದೂರು ಸಲ್ಲಿಸಿದ್ದಾರೆ.
ತಾಲ್ಲೂಕಿನ ಕಂದಿಕೆರೆ ಹೋಬಳಿ ಜಾಣೆಹಾರ್ ಗ್ರಾಮ ಹಿಂದುಳಿದ ಪ್ರದೇಶವಾಗಿದ್ದು, ಈ ಗ್ರಾಮದಲ್ಲಿ ಈಹಿಂದೆ ಧರ್ಮಲಿಂಗಯ್ಯ ಎಂಬುವನು ಅಕ್ರಮವಾಗಿ ಮದ್ಯಮಾರಾಟ ಮಾಡಿ ಗ್ರಾಮದ ಸ್ವಾಸ್ಥ್ಯಕ್ಕೆ ಧಕ್ಕೆಯನ್ನು ತಂದಿದ್ದನು. ಇದನ್ನು ಮನಗಂಡು ಗ್ರಾಮದ ಸ್ವಸಹಾಯ ಸಂಘದ ಸದಸ್ಯರು ಹಾಗೂ ಗ್ರಾಮದ ಮಹಿಳೆಯರು ಪ್ರತಿಭಟನೆ ಮಾಡಿ ದೂರುನೀಡಿ ಮದ್ಯಮಾರಾಟವನ್ನು ತಡೆಹಿಡಿದಿದ್ದರು.
ಆದರೆ ಆದೇ ವ್ಯಕ್ತಿ ಮತ್ತೆ ಈಚೆಗೆ ಸರಿರಾತ್ರಿಯಲ್ಲಿ ಗ್ರಾಮದ ಬೇಲಿಗಳಲ್ಲಿ ಮದ್ಯದ ದಾಸ್ತಾನನ್ನು ಬಚ್ಚಿಟ್ಟು, ನಂತರ ಗುಟ್ಟಾಗೆ ಬೀದಿಬದಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟವನ್ನು ಮತ್ತೆ ಆರಂಭಿಸಿದ್ದನು. ಈ ವಿದ್ಯಮಾನವನ್ನರಿತ ಗ್ರಾಮದ ಮಹಿಳೆಯರು ಕಳೆದ ಸೋಮವಾರ ರಾತ್ರಿ 11 ಗಂಟೆಗೆ ಹೊಂಚುಹಾಕಿ ಮಾಲುಸಮೇತ ಬರುತ್ತಿದ್ದವನ ಮೇಲೆ ಆಕ್ರಮಣ ಮಾಡಿದರು. ಇದರಿಂದ ಗಾಬರಿಗೊಂಡ ಧರ್ಮಲಿಂಗಯ್ಯನು ಮದ್ಯದ ಪೆಟ್ಟಿಗೆ ಹಾಗೂ ದ್ವಿಚಕ್ರವಾಹನವನ್ನು ಅಲ್ಲೇ ಬಿಟ್ಟು ಕತ್ತಲಲ್ಲಿ ಪರಾರಿಯಾದನು.
ನಂತರ ಮದ್ಯಹಾಗೂ ದ್ವಿಚಕ್ರವಾಹನವನ್ನು ಅಬಕಾರಿ ಇಲಾಖೆಗೆ ಒಪ್ಪಿಸಿದ ಮಹಿಳೆಯರು ಠಾಣೆಯಲ್ಲಿ ದೂರು ನೀಡಿದರು. ಈ ಹಿಂದೆ ಇದೇವ್ಯಕ್ತಿ ಮದ್ಯಮಾರಾಟ ಮಾಡುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಟ್ಟಿದ್ದರೂ ಅಕ್ರಮವಾಗಿ ಮದ್ಯಮಾರಾಟ ಮಾಡಲು ಮುಂದಾಗಿರುವುದು ಅಬಕಾರಿ ಇಲಾಖೆ ತಿಳಿದಿದೆ.
ಇದರಲ್ಲಿ ಇಲಾಖೆಯ ಪಾತ್ರವೂ ಇದೆ ಎಂದು ದೂರಿದ ಗ್ರಾಮದ ಮಹಿಳೆಯರು ಈ ಕೃತ್ಯದಲ್ಲಿ ಭಾಗಿಯಾದ ಧರ್ಮಲಿಂಗಯ್ಯನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.