ಬೆಂಗಳೂರು:
ಎಚ್1ಎನ್1 ಮಹಾಮಾರಿಗೆ ಶನಿವಾರ ಒಂದೇ ದಿನ ರಾಜ್ಯದಲ್ಲಿ ಬರೋಬ್ಬರಿ 12 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಮಾರಣಾಂತಿಕ ಕಾಯಿಲೆಯಿಂದ ಜೀವ ಕಳೆದುಕೊಂಡವರ ಸಂಖ್ಯೆ ರಾಜ್ಯದಲ್ಲಿ 31ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆತಂಕ ಮತ್ತಷ್ಟು ತೀವ್ರಗೊಂಡಿದೆ.
ಪ್ರಸಕ್ತ ಸಾಲಿನಲ್ಲಿ ಒಂದೇ ದಿನ ಅತಿ ಹೆಚ್ಚು ಎಚ್1ಎನ್1 ಸಾವು ವರದಿಯಾಗಿರುವುದು ಇದೇ ಮೊದಲು. ಅ.12ರಂದು ಒಂದೇ ದಿನ ಐದು ಮಂದಿ ಬಲಿಯಾಗಿದ್ದರು. ಈ ಮೂಲಕ ಮೃತರ ಸಂಖ್ಯೆ 13ಕ್ಕೆ ಹೆಚ್ಚಳವಾಗಿತ್ತು. ಬಳಿಕ ನವೆಂಬರ್ 16ರ ವೇಳೆಗೆ 19ಕ್ಕೆ ಏರಿಕೆಯಾಗಿದ್ದ ಮೃತರ ಸಂಖ್ಯೆ ನ.17ರಂದು ಒಂದೇ ದಿನ 31ಕ್ಕೆ ತಲುಪಿದೆ. ಈ ಮೂಲಕ ಅ.17ರಂದು ಒಂದೇ ದಿನ 12 ಮಂದಿ ಮೃತಪಟ್ಟಂತಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಎಚ್1ಎನ್1 ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಶನಿವಾರ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಎಲ್ಲಾ ಜಿಲ್ಲಾ ವೈದ್ಯಾಧಿಕಾರಿಗಳು ಹಾಗೂ ವಿಶೇಷ ವೈದ್ಯಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದಾರೆ. ಕೂಡಲೇ ಕಾಯಿಲೆ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಕಾಯಿಲೆಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಬೇಕು ಎಂದು ಆದೇಶ ನೀಡಿದ್ದಾರೆ.