ತುಮಕೂರು:
ನಗರದಲ್ಲಿ ದಿನೇ ದಿನೇ ಕೊರೋನ ವೈರಸ್ ಸೋಂಕು ಹೆಚ್ಚುತ್ತಿರುವುದರಿಂದ ವಿತರಕರು ಹಾಗೂ ಸಿಬ್ಬಂದಿ ಹಿತದೃಷ್ಠಿಯಿಂದ ನಗರದಲ್ಲಿ ಒಂದು ವಾರಗಳ ಕಾಲ ಸ್ವಯಂ ಪ್ರೇರಿತ ಲಾಕ್‍ಡೌನ್ ಮಾಡಲು ನಿರ್ಧರಿಸಿ ತುಮಕೂರು ತಹಶೀಲ್ದಾರ್ ಮೋಹನ್‍ಕುಮಾರ್ ಅವರ ಮೂಲಕ ತುಮಕೂರು ವಿತರಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತುಮಕೂರು ವಿತರಕರ ಸಂಘದ ಅಧ್ಯಕ್ಷ ನವೀನ್‍ಕುಮಾರ್, ಕೊರೋನ ವೈರಸ್ ನಮ್ಮ ದೇಶದಲ್ಲೇ ಅಲ್ಲ, ಇಡೀ ವಿಶ್ವಕ್ಕೇ ವ್ಯಾಪಿಸಿದೆ. ಕಳೆದ ಮಾರ್ಚ್ 24 ರಿಂದ ಮೂರು ತಿಂಗಳ ಕಾಲ ಕರ್ನಾಟಕ ರಾಜ್ಯಾದ್ಯಂತ ಲಾಕ್ ಡೌನ್ ಮಾಡಿದ್ದರೂ ಸಹ ಸೋಂಕು ಹೆಚ್ಚುತ್ತಲೇ ಇದೆ. ಇತ್ತೀಚೆಗೆ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಕೊರೋನ ವೈರಸ್ ನಿಂದ ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದೆ ಈ ನಿಟ್ಟಿನಲ್ಲಿ ನಮ್ಮ ವಿತರಕರು ಮತ್ತು ಸಿಬ್ಬಂದಿ ವರ್ಗದ ಹಿತದೃಷ್ಠಿಯಿಂದ ಜು.19ರಿಂದ ಜು.26ರವರೆಗೆ ಸ್ವಯಂ ಪ್ರೇರಿತವಾಗಿ ಲಾಕ್‍ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದರು.
ಕೊರೋನ ವೈರಸ್ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು, ಮನೆಯಿಂದ ಹೊರಗೆ ಬಂದಾಗ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಆಗಾಗ ಕೈಗಳನ್ನು ಸಬೂನಿನಿಂದ ತೊಳೆದುಕೊಳ್ಳಬೇಕು, ವೃದ್ದರು ಮತ್ತು ಮಕ್ಕಳನ್ನು ಮನೆಯಿಂದ ಹೊರಗೆ ಕರೆ ತರಬಾರದು ಎಂದು ನಗರದ ಜನತೆಗೆ ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ಉಮೇಶ್ ಮಾತನಾಡಿ, ಪ್ರತಿನಿತ್ಯ ಚಿಲ್ಲರೆ ವ್ಯಾಪಾರಸ್ಥರಿಗೆ ವಿತರಿಸುತ್ತಿದ್ದ ದಿನ ಬಳಕೆ ವಸ್ತುಗಳನ್ನು ಒಂದು ವಾರಗಳ ಕಾಲ ಸ್ವಯಂ ಪ್ರೇರಿತವಾಗಿ ನಿಲ್ಲಿಸಿ ನಮ್ಮ ವಿತರಕರು ಹಾಗೂ ಸಿಬ್ಬಂದಿಯ ಆರೋಗ್ಯವನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಮುಂದಾಗಿದ್ದೇವೆ. ನಗರದಲ್ಲಿರುವ ಚಿಲ್ಲರೆ ಅಂಗಡಿ ಮಾಲೀಕರು ಸಹಕರಿಸಬೇಕು, ಜೊತೆಗೆ ಗ್ರಾಹಕರು ಸಹ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮೋಹನ್‍ಕುಮಾರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸಂಘದ ಖಜಾಂಚಿ ಪ್ರವೀಣ್, ನಿರ್ದೇಶಕರಾದ ನಟರಾಜ್, ಗಣೇಶ್, ಪ್ರತೀಕ್ ಜೈನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.