ತುಮಕೂರು:

      ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಹೆದರುತ್ತಿರುವ ಇಂದಿನ ದಿನಗಳಲ್ಲಿ ಶ್ರೇಯಸ್ ಎನರ್ಜಿ ಅಂಡ್ ಟೆಕ್ನಾಲಜಿಸ್ ಪ್ರವೈಟ್ ಲಿ ಕಂಪನಿಯವರು ಅಭಿವೃದ್ದಿ ಪಡಿಸಿರುವ ಸ್ಥಳಾಂತರಿಸಬಹುದಾದ ಐಸಿಯು ಜೊತೆಗಿನ ಐಸೋಲೇಷನ್ ವಾರ್ಡು ಅತ್ಯಂತ ಉಪಯುಕ್ತವಾಗಲಿದ್ದು, ಇದು ರೋಗಿಗಳ ಚಿಕಿತ್ಸೆಗೆ ಬಳಕೆಗೆ ಬರುವಂತಾ ಗಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷ ಶ್ರೀಶ್ರೀಸಿದ್ದಲಿಂಗಸ್ವಾಮೀಜಿ ತಿಳಿಸಿದ್ದಾರೆ.

      ಸಿದ್ದಗಂಗಾ ಕ್ಷೇತ್ರದಲ್ಲಿ ಶ್ರೇಯಸ್ ಎನರ್ಜಿ ಅಂಡ್ ಟೆಕ್ನಾಲಜಿಸ್ ಪ್ರವೈಟ್ ಲಿ ಕಂಪನಿಯವರಾದ ಮಂಜುನಾಥ್ ಮತ್ತು ಶ್ರೇಯಸ್ ಅವರು ಅಭಿವೃದ್ಧಿಪಡಿಸಿರುವ ಪೋರ್ಟಬಲ್ ಐಸೋಲೇಷನ್ ಕಂ ಐಸಿಯು ವಾರ್ಡು ಯೋಜನೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕಂಪನಿಯವರು ಹೇಳುವಂತೆ ಅತ್ಯಂತ ಅಧುನಿಕ ತಂತ್ರಜ್ಞಾನವನ್ನು ಬಳಸಿ, ಅತ್ಯಂತ ಗಂಭೀರ ಸ್ಥಿತಿಯಲ್ಲಿರುವ ಕೋವಿಡ್-19 ರೋಗಿಗಳನ್ನು ವೈದ್ಯರು ತಮಗೆ ಯಾವುದೇ ಸೋಂಕು ಹರಡದ ರೀತಿ ಚಿಕಿತ್ಸೆ ಮಾಡಬಹುದಾಗಿದೆ.

      ಈಗಾಗಲೇ ಸರಕಾರದ ಕೋವಿಡ್ ಟಾಸ್ಕಪೋರ್ಸ್‍ನಿಂದ, ಆರೋಗ್ಯ ಮಂತ್ರಿಗಳಿಂದ ತಾಂತ್ರಿಕವಾಗಿ ಶಿಫಾರಸ್ಸಾಗಿರುವ ಈ ಯೋಜನೆಯನ್ನು ಸರಕಾರ ಅಳವಡಿಸಿಕೊಂಡು ಅತ್ಯಂತ ಕಡಿಮೆ ದರದಲ್ಲಿ ರೋಗಿಗಳಿಗೆ ಚಿಕಿತ್ಸೆ ದೊರೆಯುವಂತೆ ಮಾಡಬೇಕೆಂದು ಸ್ವಾಮೀಜಿ ನುಡಿದರು.

      ಶ್ರೇಯಸ್ ಎನರ್ಜಿ ಅಂಡ್ ಟೆಕ್ನಾಲಜಿಸ್ ಪ್ರವೈಟ್ ಲಿನ ಮಂಜುನಾಥ್ ಮಾತನಾಡಿ, ಕೊರೊನ ಮಹಾಮಾರಿ ಇಂದು ಪ್ರಪಂಚವನ್ನೇ ತಲ್ಲಣಗೊಳಿಸಿದೆ.ಅತ್ಯಂತ ಗಂಭೀರ ಪರಿಸ್ಥಿತಯಲ್ಲಿರುವ ರೋಗಿಗಳ ಚಿಕಿತ್ಸೆಗೆ ವೈದ್ಯರೇ ಹೆದರುವಂತಹ ಸ್ಥಿತಿ ಉಂಟಾಗಿದೆ. ಇದರಿಂದ ಸಾವು, ನೋವುಗಳ ಸಂಖ್ಯೆ ಹೆಚ್ಚಳವಾಗಿದೆ. ಅಲ್ಲದೆ ಶೇ5ರಷ್ಟು ರೋಗಿಗಳ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಅತಿ ಕಡಿಮೆ ಸಂಖ್ಯೆಯ ಐಸಿಯುಗಳಿಂದ ಇಷ್ಟೊಂದು ದೊಡ್ಡ ಸಂಖ್ಯೆಯ ರೋಗಿಗಳ ಚಿಕಿತ್ಸೆ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಕೇವಲ ನಾಲ್ಕೈದು ದಿನಗಳಲ್ಲಿ ತೀರ ಕಡಿಮೆ ಅಂದರೆ ಕನಿಷ್ಠ 30*40 ಸ್ಥಳದಲ್ಲಿಯೂ ನಿರ್ಮಿಸಬಹು ದಾದ ಅತ್ಯಾಧುನಿಕ ಐಸಿಯು ಕಂ ಐಸೋಲೇಷನ್ ವಾರ್ಡುನ್ನು ಆಭಿವೃದ್ಧಿ ಪಡಿಸಿದ್ದು, ಸರಕಾರದ ಟಾಸ್ಕ್‍ಪೋರ್ಸ್ ಸಮಿತಿಯ ಮುಂದೆ ಪ್ರದರ್ಶಿಸಿದ್ದಾಗ ಜಯದೇವ ಆಸ್ಪತ್ರೆಯ ಡಾ.ಮಂಜುನಾಥ್, ಇದನ್ನು ಒಪ್ಪಿ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.

      ಸರಕಾರ ಒಂದು ವೇಳೆ ಒಪ್ಪಿಗೆ ಸೂಚಿಸದರೆ ಅತ್ಯಂತ ಕಡಿಮೆ ದರದಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ಐಸಿಯು ವಾರ್ಡನ್ನು ಸಿದ್ದಪಡಿಸಿ ನೀಡಲು ಸಿದ್ದವಿರುವುದಾಗಿ ತಿಳಿಸಿದರು.

      ನಮ್ಮ ಕಂಪನಿ ಅಭಿವೃದ್ಧಿ ಪಡಿಸಿರುವ ಪೋರ್ಟ್‍ಬಲ್ ಐಸಿಯು ಕಂ ಐಸೋಲೇಷನ್ ವಾರ್ಡನಲ್ಲಿ ಮೂರು ಪ್ರಮುಖ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ವಾರ್ಡಿನಲ್ಲಿ ಪ್ರೆಸ್‍ಎರ್(ಹೊಸಗಾಳಿ),ನೆಗೆಟಿವ್ ಪೋಸ್(ಎಗ್ಞಾಸ್ಟ್) ಮತ್ತು ಯುವಿ ಲ್ಯಾಂಪ್ ಕ್ಲೀನ್ ಎಂಬ ತಂತ್ರಜ್ಞಾನ ಬಳಸಲಾಗಿದೆ. ವಾರ್ಡಿನಲ್ಲಿ ರೋಗಿಗಳಿಗೆ ಮತ್ತು ಸಿಬ್ಬಂದಿಗೆ ಉಸಿರಾಟಕ್ಕೆ ಹೊಸ ಗಾಳಿ ಸರಬರಾಜಾಗುವಂತೆ ಮಾಡಲಾಗಿದೆ. ಅಲ್ಲದೆ ರೋಗಿಗಳು ಮತ್ತು ಸಿಬ್ಬಂದಿಗಳು ಕೆಮ್ಮಿದಾಗ,ಸೀನಿದಾಗ ರೋಗಿಗಳ ದೇಹದಿಂದ ಹೊರಬರುವ ರೋಗಾಣುಗಳು ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ತಗುಲದಂತೆ ನೆಗೆಟಿವ್ ಪೋರ್ಸ್ ಮೂಲಕ ಅದನ್ನು ಸೆಳೆದು,ಐದು ಹಂತದಲ್ಲಿ ಶುದ್ದಿಕರಿಸಿ, ರೋಗ ರಹಿತ ಗಾಳಿಯನ್ನು ಪರಿಸರಕ್ಕೆ ಬಿಡುಗಡೆ ಮಾಡುವಂತೆ ಟೆಕ್ನಾಲಜಿ ಅಳವಡಿಸಿಕೊಳ್ಳಲಾಗಿದೆ.ವಾರ್ಡು ನಿರ್ಮಾಣಕ್ಕೆ ಬಳಕೆ ಮಾಡಿರುವ ವಸ್ತುಗಳು 20 ವರ್ಷಗಳವರೆಗೆ ಬಾಳಿಕೆ ಬರುತ್ತವೆ. ಒಂದು ವೇಳೆ ಕೋವಿಡ್-19 ಮುಗಿದ ನಂತರವೂ ಐಸಿಯು ಆಗಿ ಬಳಕೆ ಮಾಡ ಬಹುದು. ಇಲ್ಲದಿದ್ದರೆ ಕೋಡ್ಲ್ ಸ್ಟೋರೆಜ್ ಆಗಿಯು ಬಳಕೆ ಮಾಡಬಹುದು.ಇತರೆ ಐಸಿಯುಗಳಿಗೆ ಹೊಲಿಕೆ ಮಾಡಿದರೆ ನಮ್ಮ ಕಂಪನಿಯ ಅಭಿವೃದ್ಧಿ ಪಡಿಸಿರುವ ಐಸಿಯು ಶೇ50ರಷ್ಟು ಕಡಿಮೆ ಹಣದಲ್ಲಿ ನಿರ್ಮಾಣವಾಗುತ್ತದೆ ಎಂದು ಮಂಜುನಾಥ್ ತಿಳಿಸಿದರು.
ಜಿಲ್ಲಾ ಸರ್ಜನ್ ಡಾ.ಟಿ.ಎ.ವೀರಭದ್ರಯ್ಯ ಮಾತನಾಡಿ ಶ್ರೇಯಸ್ ಸಂಸ್ಥೆ ಅಭಿವೃದ್ದಿ ಪಡಿಸಿರುವ ಐಸಿಯು ಕಂ ಐಸೋಲೇಷನ್ ವಾರ್ಡು ವೈದ್ಯ ಸ್ನೇಹಿಯಾಗಿದೆ.ನೆಗೆಟಿವ ಪೋರ್ಸ್‍ನಿಂದ ರೋಗಾಣುಗಳು ಚಿಕಿತ್ಸೆ ಮಾಡುವ ವೈದ್ಯರು ಮತ್ತು ಸಿಬ್ಬಂದಿಗೆ ಹರಡುವ ಪ್ರಮಾಣ ಅತ್ಯಂತ ಕಡಿಮೆ.ಅಲ್ಲದೆ ಕೇವಲ 4-5 ದಿನಗಳಲ್ಲಿ 9 ಬೆಡ್‍ಗಳಿರುವ ಒಂದು ವಾರ್ಡು ಸಿದ್ದಪಡಿಸಬಹುದು ಎಂದಾದರೆ, ಇದರಿಂದ ಹೆಚ್ಚು ಉಪಯೋಗವಾಗಲಿದೆ.ವೈದ್ಯರು ಅಂಜಿಕೆ ಇಲ್ಲದೆ ಪಿಪಿಇ ಕಿಟ್ ಧರಿಸಿ ರೋಗಿಗಳಿಗೆ ಚಿಕಿತ್ಸೆ ನೀಡಬಹುದು ಎಂದರು.

      ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ಸರಕಾರ ಕೋರೋನ ತಡೆಗಟ್ಟುವಲ್ಲಿ ಸಾಕಷ್ಟು ಶ್ರಮ ಪಡುತ್ತಿದೆ. ಆದರೂ ಬೆಡ್ ಇಲ್ಲ,ಐಸಿಯು ವಾರ್ಡು ಇಲ್ಲ ಈ ರೀತಿಯ ದೂರುಗಳು ಸರ್ವೆ ಸಾಮಾನ್ಯವಾಗಿವೆ. ಇದರಿಂದ ಹೊರಬರಲು ಶ್ರೇಯಸ್ ಸಂಸ್ಥೆ ಸಿದ್ದಪಡಿಸಿರುವ ಪೋರ್ಟ್‍ಬಲ್ ಐಸಿಯು ಕಂ ಐಸೋಲೇಷನ್ ವಾರ್ಡು ಉಪಯೋಗ ಕಾರಿಯಾಗಲಿದೆ. ಸರಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದರೆ, ಮುಂಬರುವ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಬಹುದಾಗಿದೆ ಎಂದರು.

      ಇದೇ ವೇಳೆ ಡಿಹೆಚ್‍ಓ ಡಾ.ನಾಗೇಂದ್ರಪ್ಪ,ಮುಖಂಡರಾದ ಹಾಲೆನೂರು ಅನಂತ, ಹಿರೇಹಳ್ಳಿ ಮಹೇಶ್ ಇದ್ದರು.

 

(Visited 22 times, 1 visits today)