ತುಮಕೂರು:

      ತುಮಕೂರು ಗ್ರಾಮಾಂತರ ಹಾಲಿ ಜೆಡಿಎಸ್‍ನ ಶಾಸಕ ಡಿ.ಸಿ.ಗೌರಿಶಂಕರ್ ವಿರುದ್ಧ ಜುಲೈ 18,2020 ರಂದು ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

      2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಕಲಿ ವಿಮಾ ಪಾಲಿಸಿಗಳನ್ನ ಸ್ವತಃ ತಯಾರು ಮಾಡಿ ಆ ಕ್ಷೇತ್ರದ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ವಿತರಿಸಿರುವ ಆರೋಪ ಕುರಿತು ಮೊಕದ್ದಮೆ ದಾಖಲು ಮಾಡಲಾಗಿದೆ.

       2018 ರ ಚುನಾವಣೆಯ ಸಂದರ್ಭದಲ್ಲಿ ಕರ್ತವ್ಯ ನಿರತ ಚುನಾವಣಾ ಅಧಿಕಾರಿಗಳು ನಕಲಿ ಬಾಂಡ್ ಹಂಚಿಕೆ ಮಾಡುತ್ತಿದ್ದ ಜೆಡಿಎಸ್‍ನ ಮುಖಂಡೆ ಗೌರಮ್ಮ ಎನ್ನುವವರಿಂದ ಬಾಂಡ್‍ಗಳನ್ನು ವಶಪಡಿಸಿಕೊಂಡು ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಆ ಸಮಯದಲ್ಲಿಯೇ ದೂರು ದಾಖಲು ಮಾಡಲಾಗಿತ್ತು. ನಂತರ ತನಿಖೆಯ ಹಂತದಲ್ಲಿರುವಾಗ ಉಚ್ಛಾ ನ್ಯಾಯಾಲಯದಲ್ಲಿ ತನಿಖೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಪ್ರಥಮ ವರ್ತಮಾನ ವರದಿಯನ್ನ ರದ್ದುಗೊಳಿಸುವಂತೆ ಆರೋಪಿತರ ಪರವಾಗಿ ಉಚ್ಛಾನ್ಯಾಯಾಲಯದಲ್ಲಿ ಮನವಿ ಮಾಡಿ ಮಾನ್ಯ ಉಚ್ಛಾನ್ಯಾಯಾಲ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿತ್ತು.

      ನಂತರ 2018ರ ಚುನಾಣೆಯಲ್ಲಿ ನಕಲಿ ಬಾಂಡ್‍ಗಳ ಆಮಿಷವೊಡ್ಡಿ ಮತದಾರರಿಗೆ ವಂಚಿಸಿ ಮತ ಪಡೆದಿರುವ ಕುರಿತು ಹಾಲಿ ಶಾಸಕ ಡಿ.ಸಿ.ಗೌರಿಶಂಕರ್‍ರವರ 2018 ರ ವಿಧಾನಸಭಾ ಸದಸ್ಯತ್ವವನ್ನು ವಜಾಗೊಳಿಸುವಂತೆ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು ಆ ಅರ್ಜಿಯು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುತ್ತದೆ. ಈ ಎಲ್ಲಾ ಬೆಳವಣಿಗಗಳ ನಡುವೆ ಮತ್ತೆ ಮತ್ತೊಂದು ದೂರನ್ನ ದೂರುದಾರರಾದ ರಮೇಶ್ ಬೆಟ್ಟಯ್ಯ ಎನ್ನುವವರು ಕರ್ನಾಟಕದ ರಾಜ್ಯದ ಮುಖ್ಯಂತ್ರಿಗಳಿಗೆ ಹಾಗೂ ಗೃಹಮಂತ್ರಿಗಳು, ಸಿಓಡಿ ಡಿಜಿಪಿ ರವರಿಗೆ ಮೇ 8, 2020 ರಂದು ದೂರು ನೀಡಿದ್ದು, ಇವರ ದೂರಿನನ್ವಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಒಳ ಆಡಳಿತ ಇಲಾಖೆಯ ಮುಖ್ಯ ಕಾರ್ಯದರ್ಶಿಯವರಿಗೆ ತನಿಖೆಗೆ ಆದೇಶಿಸಿದ್ದು, ಅವರ ನಿರ್ದೇಶನದ ಮೇರೆಗೆ ಮತ್ತು ಒಳ ಆಡಳಿತ ಅಪರಮುಖ್ಯ ಕಾರ್ಯದರ್ಶಿಗಳು ಜೂನ್ 3 ರಂದು ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಇವರಿಗೆ ತನಿಖೆಗಾಗಿ ಆದೇಶಿಸಿ ಪತ್ರ ಕಳುಹಿಸಿರುತ್ತಾರೆ. ಅಪರ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ ಡಿಜಿ ಮತ್ತು ಐಜಿಪಿರವರು ಜುಲೈ 12 ರಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿರವರಿಗೆ ದೂರು ಮತ್ತು ಅಡಕಗಳನ್ನು ಲಗತ್ತಿಸಿ ಸದರಿ ವಿಚಾರವನ್ನು ಪ್ರತ್ಯೇಕವಾಗಿ ತನಿಖೆ ಮಾಡುವಂತೆ ನಿರ್ದೇಶಿಸಿರುತ್ತಾರೆ.

      ಸದರಿ ನಿರ್ದೇಶನದ ಪ್ರತಿಯಲ್ಲಿಯೇ ಅಡ್ವೋಕೇಟ್ ಜನರಲ್‍ರವರ ನೀಡುವ ಅಭಿಪ್ರಾಯದ ಪ್ರತಿಯನ್ನು ಲಗತ್ತಿಸಿ ಕೂಡಲೇ ಇದರ ವಿರುದ್ಧ ಕ್ರಮಕೈಗೊಳ್ಳುವಂತೆ ಆದೇಶ ನೀಡಿರುವ ಕುರಿತು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣಾರವರ ನಿರ್ದೇಶನದಂತೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇದೇ ಜುಲೈ 18 ರ ಸಂಜೆ ತುಮಕೂರು ಗ್ರಾಮಾಂತರ ಠಾಣೆಯ ಅಪರಾಧ ಸಂಖ್ಯೆ ; 128/2020ರಂತೆ ಐಪಿಸಿ ಸೆಕ್ಷನ್ 1860(U/S-120ಃ, 406, 409, 420, 465, 468, 471) ರೀತ್ಯ ಪಿಎಸ್‍ಐ ಲಕ್ಷ್ಮಯ್ಯ ಪ್ರಕರಣ ದಾಖಲು ಮಾಡಿರುತ್ತಾರೆ. ಸದರಿ ಪ್ರಕರಣದಲ್ಲಿ ಒಂದನೇ ಆರೋಪಿಯಾಗಿ ಜೆಡಿಎಸ್‍ನ ಹಾಲಿ ಶಾಸಕ ಡಿ.ಸಿ.ಗೌರಿಶಂಕರ್ ಮತ್ತು ಎರಡನೇ ಆರೋಪಿಯಾಗಿ ನ್ಯೂ ಇಂಡಿಯಾ ಇನ್ಷುರೆನ್ಸ್ ಕಂಪನಿಯ ಡಿವಿಷಿನಲ್ ಮ್ಯಾನೇಜರ್ ದೇವೇಂದ್ರ ಪ್ರಸಾದ್, ಮೂರನೇ ಆರೋಪಿಯನ್ನಾಗಿ ಕಮ್ಮಗೊಂಡನಹಳ್ಳಿ ಶ್ರೀ ಮಾರುತಿ ಸೇವಾ ಸಮಿತಿ, ನಾಲ್ಕನೇ ಆರೋಪಿಯನ್ನಾಗಿ ಒನ್ ರುಪಿ ಚಾರಿಟಬಲ್ ಟ್ರಸ್ಟ್‍ನ ಕಿಶೋರ್, ಐದನೇ ಆರೋಪಿಯಾಗಿ ಮೆಡಿ ಅಸಿಸ್ಟೇಂಟ್ ಇನ್ಷುರೆನ್ಸ್ ಕಂಪನಿಯಾ ಆಫೀಸರ್‍ರವರನ್ನ ಹಾಗೂ ಆರನೇ ಆರೋಪಿಯಾಗಿ ಇನ್ನೀತರರು ಎಂದು ಗ್ರಾಮಾಂತರ ಠಾಣೆಯಲ್ಲಿ ಎಫ್‍ಐಆರ್ ರಿಜಿಸ್ಟರ್ ಆಗಿದ್ದು, ಈ ಯಾವುದೇ ಆರೋಪಿಗಳ ಬಂಧನ ಮಾಡಿರುವುದಿಲ್ಲ.
ದೂರುದಾರ ರಮೇಶ್ ಬೆಟ್ಟಯ್ಯ ತಿಳಿಸಿರುವ ದೂರಿನಂತೆ ಮೇಲ್ಕಂಡ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.

ದೂರಿನ ಸಾರಾಂಶ:

      2018ರ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ಡಿ.ಸಿ.ಗೌರಿಶಂಕರ್ ಮತ್ತು ನ್ಯೂ ಇಂಡಿಯಾ ಇನ್ಷುರೆನ್ಸ್ ಕಂಪನಿಯ ಮ್ಯಾನೇಜರ್ ದೇವೇಂದ್ರ ಪ್ರಸಾದ್, ಕಮ್ಮಗೊಂಡನಹಳ್ಳಿ ಶ್ರೀ ಮಾರುತಿ ಸೇವಾ ಸಮಿತಿ ಎಲ್ಲಾ ಪದಾಧಿಕಾರಿಗಳು, ಒನ್ ರೂಪಿ ಚಾರಿಟಬಲ್ ಟ್ರಸ್ಟ್‍ನ ಕಿಶೋರ್ ಹಾಗೂ ಟ್ರಸ್ಟ್‍ಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಮೆಡಿ ಅಸಿಸ್ಟೆಂಟ್ ಕಂಪನಿಯ ಅಧಿಕಾರಿಗಳು ಮತ್ತು ಇತರರು ಗ್ರೂಪ್ ಇನ್ಷುರೆನ್ಸ್ ಪಾಲಿಸಿಗಳನ್ನು ಚುನಾವಣಾ ಸಮಯದಲ್ಲಿ ವಿತರಣೆ ಮಾಡಿದ್ದು, ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಬರುವ ಸರ್ಕಾರಿ ಶಾಲಾ ಮಕ್ಕಳಿಗೆ ವಿತರಣೆ ಮಾಡಿದ್ದು, ಸದರಿ ಪಾಲಿಸಿಗಳು IRDAI Act ಪ್ರಕಾರ ವಂಚಿಸುವ ದುರದ್ದೇಶದಿಂದ ಸೃಷ್ಠಿ ಮಾಡಿದ ನಕಲಿ ಪಾಲಿಸಿ ಬಾಂಡ್‍ಗಳಾಗಿದ್ದು ಈ ಸಂಬಂಧ ಮುಖ್ಯ ಚುನಾವಣಾ ಆಯುಕ್ತರಿಗೆ ಈಗಾಗಲೇ ದೂರು ನೀಡಿರುತ್ತೇನೆ. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬರುವ ಸರ್ಕಾರಿ ಶಾಲೆಯ ಸುಮಾರು 40 ವಿದ್ಯಾರ್ಥಿಗಳಿಗೆ ಇನ್ಷುರೆನ್ಸ್ ಮಾಡಿಸಿರುವುದಾಗಿ ತಿಳಿದುಬಂದಿದ್ದು, ನ್ಯೂ ಇಂಡಿಯಾ ಇನ್ಷುರೆನ್ಸ್ ಕಂಪನಿಯರವರ ಮಾಹಿತಿಯಂತೆ 50 ಶಾಲೆಗಳ ಸುಮಾರ್ 16000 ಮಕ್ಕಳಿಗೆ ಗ್ರೂಪ್ ಇನ್ಷುರೆನ್ಸ್ ಮಾಡಿಕೊಟ್ಟಿರುವುದಾಗಿ ತಿಳಿಸಿರುತ್ತಾರೆ. ಆದರೆ, ತನಿಖೆಯ ಸಂದರ್ಭದಲ್ಲಿ IRDAI Act ಪ್ರಕಾರ ಅವರು ನೀಡಿರುವ ಗುಂಪು ವಿಮಾ ಪಾಲಿಸಿಗಳು ನಕಲಿ ಎಂದು ತಿಳಿದುಬಂದಿದ್ದು, ಈ ಎಲ್ಲಾ ನಕಲಿ ವಿಮಾ ಪಾಲಿಸಿಗಳ ಬಾಂಡ್‍ಗಳು ಒಂದೇ ವಿಮಾ ಪಾಲಿಸಿ ನಂಬರ್ ಹೊಂದಿರುವುದರಿಂದ ಈ ಎಲ್ಲಾ ಗ್ರೂಪ್ ಇನ್ಷುರೆನ್ಸ್‍ಗಳನ್ನು Iಖಆಂ ರದ್ದು ಮಾಡಿರುತ್ತದೆ.

      ಇನ್ಷುರೆನ್ಸ್‍ಗಳು ರದ್ದಾಗಿದ್ದರು ಸಹಾ ತಾವೇ ಸ್ವತಃ ಮುದ್ರಿಸಿದ ನಕಲಿ ವಿಮಾ ಪಾಲಿಸಿಗಳನ್ನು 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ದುರುದ್ದೇಶದಿಂದ ಹಂಚಿರುತ್ತಾರೆ. ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ಬಡ ಮಕ್ಕಳಿಗೆ ನಕಲಿ ಬಾಂಡ್ ವಿತರಿಸಿ ಮೋಸ ಹಾಗೂ ನಂಬಿಕೆ ದ್ರೋಹ ಮಾಡಿರುತ್ತಾರೆ ಎಂದು ಆರೋಪಿಸಿರುತ್ತಾರೆ.

      ಅಧಿಕೃತವಾಗಿ ಈ ಮೆಡಿ ಅಸಿಸ್ಟೆಂಟ್ ವಿಮಾ ಪಾಲಿಸಿಗಳನ್ನು ನೀಡುವ ಸಂದರ್ಭದಲ್ಲಿ ಪಾಲಿಸಿದಾರರ ಪೋಟೋ ಮತ್ತು ವಿಳಾಸ ಎಲ್ಲವೂ ಇರುವ ಇ-ಕಾರ್ಡ್‍ಗಳನ್ನು ನೀಡುತ್ತದೆ. ಕಂಪನಿಯ ಅಧಿಕೃತ ಕಾರ್ಡ್‍ಗಳನ್ನು ನೀಡದೆ ಅಂದಿನ ಜೆಡಿಎಸ್‍ನ ಶಾಸಕ ಸ್ಥಾನದ ಅಭ್ಯರ್ಥಿಯಾಗಿದ್ದ ಗೌರಿಶಂಕರ್ ಮತ್ತು ನ್ಯೂ ಇಂಡಿಯಾ ಇನ್ಷುರೆನ್ಸ್ ಕಂಪನಿಯ ಮ್ಯಾನೇಜರ್ ಹಾಗೂ ಒನ್ ರುಪಿ ಚಾರಿಟಬಲ್ ಟ್ರಸ್ಟ್ ನ ಕಿಶೋರ್ ಹಾಗೂ ಪದಾಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿರುತ್ತಾರೆ. ಈ ಸಂಬಂಧ ದೂರು ದಾಖಲಾಗಿರುತ್ತದೆ.

      ಇದೀಗ ಶಾಸಕರ ವಿರುದ್ಧ ದಾಖಲಾಗಿರುವ ಪ್ರಕರಣ ಗಂಭೀರ ಸ್ವರೂಪದ್ದಾಗಿರುವುದರಿಂದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇದು ತನಿಖೆಯಾದರೆ ನಿಸ್ಪಕ್ಷಪಾತ ತನಿಖೆ ನಡೆಯುವುದಿಲ್ಲ. ಹಾಲಿ ಶಾಸಕರ ಅಧೀನದಲ್ಲಿ ಬರುವ ಅಧಿಕಾರಿಗಳು ತನಿಖೆ ನಡೆಸುವುದರಿಂದ ದೂರುದಾರರ ದೂರಿಗೆ ನ್ಯಾಯ ದೊರಕುವುದಿಲ್ಲ. ಹಾಗಾಗಿ ಸದರಿ ಪ್ರಕರಣವನ್ನ ಸಿಓಡಿ ತನಿಖೆಗೆ ಒಳಪಡಿಸಬೇಕೆಂಬುದು ಆ ಕ್ಷೇತ್ರದ ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

(Visited 9 times, 1 visits today)