ತುಮಕೂರು:

      ಗುರುವಾರ ಸಂಜೆ ಸುರಿದ ಮಳೆಗೆ ತುಮಕೂರಿನ ಅಮಾನಿಕೆರೆ ಸಮೀಪವಿರುವ ಕನ್ನಡ ಭವನದ ಸುವರ್ಣ ಭವನಕ್ಕೆ ಮಳೆನೀರು ನುಗ್ಗಿ ಪೀಠೋಪಕರಣಗಳು ಮತ್ತು ನೂರಾರು ಬಂಡಲ್ ಹಳೆಯ ಪೇಪರ್ ನೀರಿನಲ್ಲಿ ಮುಳುಗಿ ಹೋಗಿದೆ.

      ಸ್ಮಾರ್ಟ್‍ಸಿಟಿ ಅಸಮರ್ಪಕ ಕಾಮಗಾರಿಗಳು ಅರ್ಧಕ್ಕೆ ನಿಂತುಹೋಗಿದ್ದು ಸುವರ್ಣಭವನಕ್ಕೆ ನೀರು ನುಗ್ಗಲು ಕಾರಣ. ಈ ಸಮಸ್ಯೆಯನ್ನು ಮಹಾನಗರ ಪಾಲಿಕೆ ಆಯುಕ್ತರು ಮತ್ತು ಸ್ಮಾರ್ಟ್‍ಸಿಟಿ ಇಂಜಿನಿಯರ್ ಗಮನಕ್ಕೆ ತಂದರೂ ನೀರು ಹೊರಹಾಕಿಸಲು ಕ್ರಮ ಕೈಗೊಳ್ಳಲಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ.ಹ.ರಮಾಕುಮಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

      ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಮುಖ್ಯಾಧಿಕಾರಿ ಮಹಲಿಂಗಪ್ಪ ಅವರನ್ನು ಸಂಪರ್ಕಿಸಿ ಸುವರ್ಣ ಸಭಾ ಭವನದಲ್ಲಿರುವ ಮಳೆ ನೀರು ಹೊರಹಾಕಿಕೊಡುವಂತೆ ಮನವಿ ಮಾಡಲಾಯಿತು. 2 ಅಗ್ನಿಶಾಮಕ ವಾಹನಗಳು ಮತ್ತು 10 ಸಿಬ್ಬಂದಿ ಬಂದು ಸಭಾಭವನದಲ್ಲಿ ತುಂಬಿಕೊಂಡಿದ್ದ ನೀರನ್ನು ಪಂಪ್ ಮೂಲಕ ಹೊರಹಾಕಿದರು. ಇದಕ್ಕಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

      ಇದು ತಾತ್ಕಾಲಿಕ ಪರಿಹಾರವಾಗಿದೆ. ಮತ್ತೆ ಮಳೆ ಬಂದರೆ ನೀರು ನುಗ್ಗುವುದು ಗ್ಯಾರೆಂಟಿ. ಇಲ್ಲಿ ಚರಂಡಿ ದುರಸ್ತಿ ಕಾರ್ಯ ಅರ್ಧಕ್ಕೆ ನಿಂತಿದೆ. ಹಾಗಾಗಿ ಮಳೆ ನೀರು ಸರಾಗವಾಗಿ ಹೋಗಲು ಅಡ್ಡಿಯಾಗಿದೆ. ಆದ್ದರಿಂದ ಪಾಲಿಕೆಯವರು ಕೂಡಲೇ ಚರಂಡಿ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಸುವರ್ಣ ಭವನಕ್ಕೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಕನ್ನಡ ಭವನದ ಸ್ಥಿತಿ ಹೀಗಾದರೆ ಸಾಮಾನ್ಯರ ಪಾಡೇನು ಎಂದು ಜನ ಮಾತಾಡಿಕೊಳ್ಳುವಂತಾಗಿದೆ ಎಂದು ರಮಾಕುಮಾರಿ ಹೇಳಿದ್ದಾರೆ.

(Visited 7 times, 1 visits today)