ತುಮಕೂರು:
ಸೌಹಾರ್ದ, ಸಹಕಾರ ಕ್ಷೇತ್ರದಲ್ಲಿ ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಅಧ್ಯಕ್ಷ ಎನ್.ಎಸ್.ಜಯಕುಮಾರ್ ಅವರ ಸೇವೆ ಅನನ್ಯವಾದದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.
ತುಮಕೂರು ತಾಲ್ಲೂಕು ಯಲ್ಲಾಪುರದಲ್ಲಿ ಟಿಎಂಸಿಸಿ ನಾಲ್ಕನೇ ಎಟಿಎಂ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರಿನಿಂದ ಆರಂಭವಾದ ಟಿಎಂಸಿಸಿ ಕಾರ್ಯಚಟುವಟಿಕೆ ದೇಶದ ಹಲವೆಡೆ ಕಾರ್ಯನಿರ್ವಹಿಸುವಂತಾಗಿದ್ದು, ದೇಶ ವ್ಯಾಪಿ ಟಿಎಂಸಿಸಿ ಕಾರ್ಯನಿರ್ವಹಿಸುವಂತಾಗಲಿ ಎಂದು ಆಶಿಸಿದರು.
ಬ್ಯಾಂಕ್ ಲಾಭವನ್ನು ಬಡವರ ಸೇವೆಗೆ ಉಪಯೋಗಿಸುವ ನಿಟ್ಟಿನಲ್ಲಿ ಹೆಜ್ಜೆಯನ್ನಿಟ್ಟಿರುವ ಟಿಎಂಸಿಸಿ ಈಗಾಗಲೇ ಕೊರೋನಾ ವಾರಿಯರ್ಸ್ ಗಳಿಗೆ ಪಿಪಿಇ ಕಿಟ್ ಹಾಗೂ ಪೌರ ಕಾರ್ಮಿಕರಿಗೆ ಸಮವಸ್ತ್ರಗಳನ್ನು ನೀಡಲು ಮುಂದೆ ಬಂದಿದ್ದು, ಇಂತಹ ಸೇವೆಯನ್ನು ಮಾಡಲು ಉಳ್ಳವರು ಮುಂದೆ ಬರಬೇಕೆಂದು ಸಲಹೆ ನೀಡಿದರು.
ಟಿಎಂಸಿಸಿ ನಮ್ಮ ಬ್ಯಾಂಕ್ ಎನ್ನುವ ಭಾವನೆ ಜನರಲ್ಲಿ ಮೂಡಿರುವುದರಿಂದಲೇ ಇಂದು ಉತ್ತಮ ಸೇವೆಯನ್ನು ನೀಡುವುದರೊಂದಿಗೆ ಟಿಎಂಸಿಸಿ ಲಾಭಾಂಶವನ್ನು ಷೇರುದಾರರಿಗೆ ಒದಗಿಸುತ್ತಿದ್ದು, ಜನರ ನಂಬಿಕೆಯನ್ನು ಹೆಚ್ಚಿಸಿಕೊಂಡು ಬ್ಯಾಂಕ್ ಸೇವೆ ಇನ್ನಷ್ಟು ವಿಸ್ತರಿಸುವಂತಾಗಲಿ ಎಂದರು.
ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಅಧ್ಯಕ್ಷ ಎನ್.ಎಸ್.ಜಯಕುಮಾರ್ ಮಾತನಾಡಿ ಇಂದು ಪ್ರಾರಂಭಗೊಂಡಿರುವ ಎಂಟಿಎಂ ಮತ್ತು ಸರ್ವೀಸ್ ಸೆಂಟರ್ ನಿಂದ ಸುತ್ತಮುತ್ತಲಿನ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಪಯೋಗವಾಗಲಿದ್ದು, ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಸಬ್ ಅರ್ಬನ್ ನಗರಗಳಿಂದ ಗ್ರಾಮಾಂತರ ಪ್ರದೇಶಗಳಿಗೆ ವಿಸ್ತರಿಸಲಾಗುವುದು ಎಂದು ಹೇಳಿದರು.
ಡಿಜಿಟಲ್ ಇಂಡಿಯಾದಿಂದ ಸಬ್ ಅರ್ಬನ್ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ರಾಷ್ಟ್ರೀಯ ಬ್ಯಾಂಕ್‍ಗಳು ಸಮರ್ಪಕ ಸೇವೆಯನ್ನು ಒದಗಿಸುವುದರಲ್ಲಿ ಹಿಂದುಳಿದಿದ್ದು, ಸಹಕಾರ ಮತ್ತು ಸೌಹಾರ್ದಗಳು ಗ್ರಾಮಾಂತರ ಕ್ಷೇತ್ರದಲ್ಲಿ ಹಣಕಾಸು ಸೇವೆಯನ್ನು ಒದಗಿಸುವ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ತಮ್ಮ ಚಟುವಟಿಕೆಯನ್ನು ಪ್ರಾರಂಭಿಸಲು ಮುಂದಾಗಿದ್ದು, ತುಮಕೂರು ಜಿಲ್ಲೆಯಲ್ಲಿ ಸಬ್ ಅರ್ಬನ್ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸೇವೆಯನ್ನು ಒದಗಿಸುತ್ತಿರುವ ಏಕೈಕ ಸಂಸ್ಥೆ ಟಿಎಂಸಿಸಿ ಎಂದು ತಿಳಿಸಿದರು.
ಟಿಎಂಸಿಸಿ ಬ್ಯಾಂಕ್‍ನಲ್ಲಿ 23 ಸಾವಿರ ಷೇರುದಾರರು ಹಾಗೂ ಖಾತೆದಾರರಿಗೆ ಬ್ಯಾಂಕ್ ವತಿಯಿಂದಲೇ 5 ಲಕ್ಷ ರೂವರೆಗೆ ಅಪಘಾತ ವಿಮೆಯನ್ನು ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ, ಇದಕ್ಕಾಗಿ 20 ಲಕ್ಷ ರೂ ವೆಚ್ಚವಾಗಿದ್ದು, ಬ್ಯಾಂಕ್ ಖಾತೆದಾರರಿಗೆ ಲಾಭಾಂಶವನ್ನು ಪರೋಕ್ಷವಾಗಿ ಹಂಚುವ ಕೆಲಸವನ್ನು ಟಿಎಂಸಿಸಿ ಮಾಡುತ್ತಿದ್ದು, ಷೇರುದಾರರು ಹಾಗೂ ಖಾತೆದಾರರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಹಾಗೂ ಸಾರ್ವಜನಿಕರು ಸಹ ಟಿಎಂಸಿಸಿಯಲ್ಲಿ ವಹಿವಾಟು ಪ್ರಾರಂಭಿಸುವ ಮೂಲಕ ಈ ಉಪಯೋಗವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಮುಂದಿನ ದಿನಗಳಲ್ಲಿ ಗ್ರಾಮಾಂತರ ಕ್ಷೇತ್ರಗಳಲ್ಲಿಯೂ ಟಿಎಂಸಿಸಿ ಬ್ಯಾಂಕ್ ಸೇವೆ ವಿಸ್ತರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು, ಕೊರಟಗೆರೆ, ಮಧುಗಿರಿಯಂತಹ ತಾಲ್ಲೂಕು ಮಟ್ಟದಲ್ಲಿಯೂ ಸರ್ವೀಸ್ ಹಾಗೂ ಎಟಿಎಂ ಸೆಂಟರ್ ಪ್ರಾರಂಭಿಸಲು ಆಡಳಿತ ಮಂಡಳಿ ನಿರ್ಧರಿಸಿದ್ದು, ಟಿಎಂಸಿಸಿ ಜನರ ಬ್ಯಾಂಕ್ ಆಗಿ ಮನ್ನಣೆ ಪಡೆಯುವುದರೊಂದಿಗೆ ಎಲ್ಲ ಸಾರ್ವಜನಿಕರಿಗೂ ಟಿಎಂಸಿಸಿಯ ಸೌಲಭ್ಯಗಳು ದೊರೆಯುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರ ಶಾಸಕ ಜ್ಯೋತಿಗಣೇಶ್, ಬ್ಯಾಂಕ್‍ನ ಉಪಾಧ್ಯಕ್ಷ ಶ್ರೀಕರಪ್ರಸಾದ್, ಎಲ್ಲ ನಿರ್ದೇಶಕರುಗಳು, ಸಿಇಒ ರಮೇಶ್, ಟಿಎಂಸಿಸಿ ಸಿಬ್ಬಂದಿ ಈ ವೇಳೆ ಉಪಸ್ಥಿತರಿದ್ದರು.