ತುಮಕೂರು:
ರಾಜ್ಯದ ಜನಹಿತಕ್ಕಾಗಿ ಹಲವಾರು ಕಾಯ್ದೆಗಳಿಗೆ ತಿದ್ದುಪಡಿ ತಂದು ಸುಧಾರಣೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ತಿಳಿಸಿದರು.
ರಾಜ್ಯ ಸರ್ಕಾರದ ಅಧಿಕಾರಕ್ಕೆ ಬಂದು ಒಂದು ವರ್ಷ ಯಶಸ್ವಿಯಾಗಿ ಪೂರ್ಣಗೊಳಿಸಿರುವ ಸಂದರ್ಭದಲ್ಲಿ ವಿಧಾನ ಸೌಧದ ಬ್ಯಾಂಕ್ವೆಂಟ್ ಹಾಲ್‍ನಲ್ಲಿ ಏರ್ಪಡಿಸಿದ್ದ ಸರ್ಕಾರದ ಸಾಧನೆಯ ಕಿರು ಹೊತ್ತಿಗೆ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮದ ನೇರ ಪ್ರಸಾರ ಕಾರ್ಯಕ್ರಮವನ್ನು ವೀಕ್ಷಿಸಲು ಜಿಲ್ಲಾ ಪಂಚಾಯತಿಯಲ್ಲಿ ಏರ್ಪಡಿಸಿದ್ದ ವೀಕ್ಷಣಾ ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಜನರ ವೈಯಕ್ತಿಕ ಜೀವನ, ಕೈಗಾರಿಕಾ ಅಭಿವೃದ್ಧಿ ಹಾಗೂ ವ್ಯಾಪಾರಸ್ಥರ ಅನುಕೂಲಕ್ಕಾಗಿ ಶಾಸನಾತ್ಮಕವಾಗಿ ಕೆಲಸ ಮಾಡುವ ಮೂಲಕ ಈ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದೆ ಎಂದರು.
ಸಂಜೆ ಹೊತ್ತಿನಲ್ಲಿ ದುಡಿಯುವ ಮಹಿಳೆಯರ ಸುರಕ್ಷತೆಗಾಗಿ ಅಂಗಡಿ ಮತ್ತು ಸ್ಥಾಪನೆ ಕಾಯ್ದೆ ತಿದ್ದುಪಡಿ ಮಾಡಲಾಗಿದೆ ಹಾಗೂ ಯಾವುದೇ ಇಲಾಖೆಯ ನಿರಾಕ್ಷೇಪಣಾ ಪತ್ರವಿಲ್ಲದೆ ಹೊಸದಾಗಿ ಉದ್ಯಮ ಆರಂಭಿಸುವವರಿಗಾಗಿ ಕೈಗಾರಿಕಾ ಕಾಯ್ದೆಯಡಿ ಅನುಕೂಲ ಮಾಡಿಕೊಡಲಾಗಿದೆ. ಅಲ್ಲದೆ ಹೊಸದಾಗಿ ಕೈಗಾರಿಕಾ ನೀತಿ ಜಾರಿ ಮಾಡಲಾಗಿದ್ದು, ಈ ನೀತಿಯನ್ವಯ ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನು ವಲಯ-1, ದಕ್ಷಿಣ ಕರ್ನಾಟಕದ ಜಿಲ್ಲೆಗಳನ್ನು ವಲಯ-2 ಹಾಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶವನ್ನು ವಲಯ-3ನ್ನಾಗಿ ವಿಂಗಡಿಸಿ, ಕೈಗಾರಿಕೆಗಳನ್ನು ಕೈಗೊಳ್ಳುವವರಿಗೆ ಅನುಕೂಲವಾಗುವಂತೆ ಸಹಾಯಧನ ಹಾಗೂ ರಿಯಾಯತಿ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದರು.
ಅದೇ ರೀತಿ ಜವಳಿ ನೀತಿ ಕಾಯ್ದೆಯಡಿ ಜವಳಿ ಉದ್ದಿಮೆ ಆರಂಭಿಸುವವರಿಗೆ ನೂಲುವ, ಗಿರಣಿ, ಸಿದ್ಧ ಉಡುಪು ಉತ್ಪಾದಿಸುವ ಉದ್ಯಮಗಳಿಗೆ ಆದ್ಯತೆ ನೀಡವುದರೊಂದಿಗೆ ಸಹಾಯಧನವನ್ನು ಒದಗಿಸಲಾಗುತ್ತಿದೆ. ಶಿಕ್ಷಣ ನೀತಿಯಡಿ ಬೆಂಗಳೂರಿನ ನ್ಯಾಷನಲ್ ಸ್ಕೂಲ್ ಪ್ರವೇಶಕ್ಕೆ ರಾಜ್ಯದ ಮಕ್ಕಳಿಗೆ ಕಡ್ಡಾಯವಾಗಿ ಶೇ. 25ರಷ್ಟು ಮೀಸಲಾತಿ ಕಲ್ಪಿಸಲು ಅವಕಾಶ ಮಾಡಿಕೊಡಲಾಗಿದೆ. ಎಸ್‍ಸಿಪಿ/ಟಿಎಸ್‍ಪಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ/ ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ಸ್ಥಳೀಯ ಮಕ್ಕಳಿಗೆ ಶೇ.25ರಷ್ಟು ಪ್ರವೇಶ ಕಲ್ಪಿಸಬೇಕೆಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ರೈತರ ಹಿತಕ್ಕಾಗಿ ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ. ರೈತರು ಬೆಳೆದ ಬೆಳೆಯನ್ನು ಮುಕ್ತವಾಗಿ ಮಾರಾಟಕ್ಕೆ ಅವಕಾಶ ನೀಡಲು ಹಾಗೂ ಅವರ ಬೆಳೆಗೆ ಬೇಡಿಕೆ ಹೆಚ್ಚಿಸಲು ನಿರ್ಬಂಧವಿದ್ದ ಈ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದರು.
ಜಮೀನು ಖರೀದಿಗಾಗಿ ಜಾರಿಯಲ್ಲಿರುವ ಭೂಸುಧಾರಣೆ ಕಾಯ್ದೆಯ ಸೆಕ್ಷನ್ 18, 109, 63, 79 ಎ,ಬಿ,ಸಿ.ಯನ್ನು ರದ್ದುಪಡಿಸಿ ತಿದ್ದುಪಡಿಗೊಳಿಸಲಾಗಿದೆ. ಕೃಷಿಯೇತರರು ಕೃಷಿ ಭೂಮಿ ಖರೀದಿಸುವುದನ್ನು ಕಡಿವಾಣ ಹಾಕಲು ಹಾಗೂ ರೈತರಿಗೆ ಶೋಷಣೆಯಾಗಬಾರದೆಂಬ ದೃಷ್ಟಿಯಿಂದ ಬ್ಯಾಂಕುಗಳು ಹೊರತುಪಡಿಸಿ ಕೃಷಿ ಜಮೀನನ್ನು ಖಾಸಗಿಯವರು ಅಡಮಾನ ಮಾಡಿಕೊಳ್ಳಲು ಅವಕಾಶ ನೀಡಬಾರದೆಂದು ಈ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ ಎಂದರು.
ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕೈಗೊಳ್ಳಲಾದ ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೇರಪ್ರಸಾರದ ಕಾರ್ಯಕ್ರಮದಲ್ಲಿ “ಸವಾಲುಗಳ 1 ವರ್ಷ-ಪರಿಹಾರದ ಸ್ಪರ್ಶ” ಕೈಪಿಡಿ ಪುಸ್ತಕದ ಮೂಲಕ ಸವಿವರವಾಗಿ ಮಾಹಿತಿ ನೀಡಿದ್ದರಲ್ಲದೆ ಮುಂದಿನ ಯೋಜನೆಗಳ ಬಗ್ಗೆಯೂ ಹಂಚಿಕೊಂಡಿದ್ದಾರೆ.
ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಬಹಳ ಸಂಕಷ್ಟಗಳನ್ನು ಎದುರಿಸಿದ್ದೇವೆ. ಪ್ರವಾಹ, ಕೋವಿಡ್-19 ಸೋಂಕಿನಂತಹ ಸಮಸ್ಯೆಗಳು ಸರ್ಕಾರದ ಜಂಘಾಬಲವನ್ನೇ ಅಡಗಿಸಿತ್ತು. ಈ ಸಮಸ್ಯೆಗಳು ಎದುರಾಗದಿದ್ದರೆ ಸರ್ಕಾರ ಯೋಜಿಸಿದ್ದ ಹಲವಾರು ಅಭಿವೃದ್ಧಿ ಕನಸುಗಳನ್ನು ಸಾಕಾರಗೊಳಿಸಲು ಹೆಜ್ಜೆ ಇಡಬಹುದಾಗಿತ್ತು. ಆದರೂ ನಿರೀಕ್ಷಿಸಿದಷ್ಟು ಕೆಲಸಗಳಾಗದಿದ್ದರೂ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದರು.
ಮುಖ್ಯಮಂತ್ರಿಗಳ ಅನುಭವಗಳಿಂದ ರಾಜ್ಯಕ್ಕೆ ಬಂದೊದಗಿದ ಅತೀವೃಷ್ಟಿ, ಕೋವಿಡ್-19 ಸೋಂಕಿನ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಾಗಿದೆ. ಬಿಎಸ್‍ವೈ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತ್ವರಿತವಾಗಿ ಕೈಗೊಂಡ ನಿರ್ಧಾರಗಳಿಂದ ರಾಜ್ಯದಲ್ಲಿ ಕೈಗಾರಿಕಾಭಿವೃದ್ಧಿ ಹಾಗೂ ಕೃಷಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿದೆ.
ಸಂಕಷ್ಟ ಪರಿಸ್ಥಿತಿಯಲ್ಲೂ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮೂಲಭೂತ ಅಗತ್ಯಗಳಲ್ಲೊಂದಾದ ನೀರಾವರಿ ಯೋಜನೆಗಳನ್ನು ಸ್ಥಗಿತಗೊಳಿಸದೆ ಕಾಲಕಾಲಕ್ಕೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದರಲ್ಲದೆ, ಎಸ್‍ಸಿಪಿ/ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟ ಜಾತಿ/ವರ್ಗದವರ ಕಲ್ಯಾಣಕ್ಕಾಗಿ 29000ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಕೇಂದ್ರದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕೋಟ್ಯಾಂತರ ರೂ.ಗಳನ್ನು ವ್ಯಯಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಕೈಗೊಂಡಿರುವ ರೈಲ್ವೆ ಯೋಜನೆ ಕಾಮಗಾರಿಗಾಗಿ ಸ್ವಾಧೀನಪಡಿಸಿಕೊಂಡಿರುವ ಜಮೀನಿನ ಮಾಲೀಕರಿಗೆ ಪರಿಹಾರ ವಿತರಣೆ ಸಮರ್ಪಕವಾಗಿ ಮಾಡಲಾಗುತ್ತಿದೆ. ಬೀದರ್-ಶ್ರೀರಂಗಪಟ್ಟಣ ಮಾರ್ಗದಲ್ಲಿಯೂ ರೈಲು ಸಂಚಾರಕ್ಕೆ ಆರಂಭ ಮಾಡಲು ಸರ್ವೆ ಕಾರ್ಯ ನಡೆಸಲು ಚಿಂತಿಸಲಾಗಿದೆ ಎಂದರು.
ಚೆನ್ನೈ-ಮುಂಬೈ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯಡಿ ವಸಂತ ನರಸಾಪುರ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಪಡಿಸಲು ಈಗಾಗಲೇ ಸಭೆಗಳನ್ನು ನಡೆಸಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರಲ್ಲದೆ, ಜಿಲ್ಲೆಯಲ್ಲಿ ಕೈಗೊಂಡಿರುವ ಎತ್ತಿನ ಹೊಳೆ ಯೋಜನೆಯ ಕಾಮಗಾರಿಗಳು ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ ತಾಲ್ಲೂಕಿನಲ್ಲಿ ಪ್ರಗತಿಯಲ್ಲಿದ್ದು, 2 ವರ್ಷದೊಳಗೆ ಪೂರ್ಣಗೊಳಿಸಲಾಗುವುದು. ಆದರೆ ಭೂ ಪರಿಹಾರ ದರ ನಿಗಧಿಗೊಳಿಸುವಲ್ಲಿ ಸಮಸ್ಯೆ ಉಂಟಾಗಿರುದರಿಂದ ಕೊರಟಗೆರೆ-ದೊಡ್ಡಬಳ್ಳಾಪುರ ನಡುವೆ 5750 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಬೇಕಿರುವ ಭೈರಗೊಂಡ್ಲು ಜಲಾಶಯ ಕಾಮಗಾರಿ ಪ್ರಗತಿಯಲ್ಲಿ ಹಿನ್ನಡೆಯಾಗುತ್ತಿದೆ. ಭೂ ಪರಿಹಾರ ದರವನ್ನು ಹೆಚ್ಚಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಜಿಲ್ಲೆಯು ಹೇಮಾವತಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ನಾಲೆ(0-70 ಕಿ.ಮೀ.) ಆಧುನೀಕರಣಕ್ಕಾಗಿ 440 ಕೋಟಿ ರೂ. ಹಣವನ್ನು ಸರ್ಕಾರ ಮಂಜೂರು ಮಾಡಿದ್ದು, ಉಳಿದಂತೆ ನಾಲೆಯ 70-160 ಕಿ.ಮೀ.ವರೆಗಿನ ಅಗಲೀಕರಣ ಹಾಗೂ ಆಧುನೀಕರಣಕ್ಕಾಗಿ 500 ಕೋಟಿ ರೂ.ಗಳ ಬಿಡುಗಡೆಗೆ ಆಡಳಿತಾತ್ಮಕವಾಗಿ ಅನುಮತಿಸಲಾಗಿದೆ. ನಾಲೆ ಆಧುನೀಕರಣದಿಂದ ಹೇಮಾವತಿ ನಾಲೆಯಲ್ಲಿ ದುಪ್ಪಟ್ಟು ನೀರು ಹರಿಯಲಿದೆ. ಈಗಿರುವ ಸಾಮಥ್ರ್ಯಕ್ಕಿಂತ ನೀರಿನ ಹರಿವು ಹೆಚ್ಚಾಗಿ ಜಿಲ್ಲೆಯ ಕೆರೆಗಳು ಭರ್ತಿಯಾಗಲಿವೆ. ಅಲ್ಲದೆ ಜಿಲ್ಲೆಯಲ್ಲಿ ಹೆದ್ದಾರಿ ಕಾಮಗಾರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೈಗೊಳ್ಳಲಾಗಿದೆ. ಶಿರಾ-ಮೂಡಿಗೆರೆ(ರಾ.ಹೆ.234), ಬೆಂಗಳೂರು-ಶಿವಮೊಗ್ಗ(ರಾ.ಹೆ.206), ಬೀದರ್-ಶ್ರೀರಂಗಪಟ್ಟಣ(ರಾ.ಹೆ.158) ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿವೆ. ರಾ.ಹೆ.206ರ ಚತುಷ್ಪಥರಸ್ತೆ ಕಾಮಗಾರಿ ಮುಂದಿನ 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ವಿವಿಧ ವಸತಿ ಯೋಜನೆಯಡಿ ಮಂಜೂರಾಗಿರುವ ಸುಮಾರು 9.75ಲಕ್ಷ ವಸತಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದೆ ಬಾಕಿ ಇವೆ. ಈ ಕಾಮಗಾರಿಗಳನ್ನು ಪೂರ್ಣಗೊಳಿಸಲು 10,500ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರಲ್ಲದೆ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ನಿವೇಶನ ರಹಿತರನ್ನು ಗುರುತಿಸುವ ಕೆಲಸ ಮಾಡಬೇಕು ಹಾಗೂ ವಸತಿ ರಹಿತರಿಗೆ ಮಾತ್ರ ನಿವೇಶನ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಜಿಲ್ಲೆಗೆ ಹೇಮಾವತಿ ನೀರಿನ ಹರಿದಿದ್ದರಿಂದ ಹಾಗೂ ಸಕಾಲಕ್ಕೆ ಮಳೆಯಾಗಿದ್ದರಿಂದ ಪ್ರಸಕ್ತ ವರ್ಷದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ತಲೆದೋರಲಿಲ್ಲ. ಆದರೆ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ತಲೆದೋರದಂತೆ ವ್ಯವಸ್ಥೆ ಮಾಡಲು ಯೋಜಿಸಲಾಗುತ್ತಿದ್ದು, ನಗರ ನೀರು ಸರಬರಾಜಿಗಾಗಿ ಬುಗುಡನಹಳ್ಳಿ ಕೆರೆ ನೀರಿನ ಜೊತೆಗೆ ಅಮಾನಿಕೆರೆ ಹಾಗೂ ಮರಳೂರು ಕೆರೆಗೆ ಹೇಮಾವತಿ ನೀರನ್ನು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನೀರಿನ ಸಮಸ್ಯೆ ಉದ್ಭವವಾಗದಂತೆ ಭದ್ರಾ ಮೇಲ್ದಂಡೆ ಯೋಜನೆಗೆ ಜಿಲ್ಲೆಯ ಹುಳಿಯಾರು ಹೋಬಳಿ ಹಾಗೂ ಬುಕ್ಕಾಪಟ್ಟಣ ಹೋಬಳಿಯಲ್ಲಿ ಈ ವಾರ ಶಂಕುಸ್ಥಾಪನೆ ನೆರವೇರಿಸಲಾಗುವುದು. ಭದ್ರಾ ಮೇಲ್ದಂಡೆ ಯೋಜನೆಯಿಂದ ಚಿಕ್ಕನಾಯಕನಹಳ್ಳಿಯ 15 ಕೆರೆ, ಶಿರಾ ತಾಲ್ಲೂಕಿನ 41 ಕೆರೆಗಳು ತುಂಬಲಿದೆ. ಮಾನ್ಯ ಮುಖ್ಯಮಂತ್ರಿಗಳು ಚಿಕ್ಕನಾಯಕನಹಳ್ಳಿಯ 126 ಕೆರೆಗಳಿಗೆ ಎತ್ತಿನ ಹೊಳೆ ಹಾಗೂ ಹೇಮಾವತಿ ನಾಲೆಯಿಂದ ನೀರು ತುಂಬಿಸಲು ಸಚಿವ ಸಂಪುಟದಲ್ಲಿ 250 ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ರಸ್ತೆಗಳನ್ನು ಹಾಗೂ ಒಳಚರಂಡಿಗಳ ಕಾಮಗಾರಿಗಳನ್ನು ಏಕಕಾಲದಲ್ಲಿ ಮಾಡುತ್ತಿರುವುದರಿಂದ ನಗರದ ಸಾರ್ವಜನಿಕರಿಗೆ ದಿನನಿತ್ಯದ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಈಗಾಗಲೇ ಹಲವಾರು ಕಾಮಗಾರಿಗಳು ಚಾಲ್ತಿಯಾಲ್ಲಿರುವುದರಿಂದ ನಿಲ್ಲಿಸಲು ಸಾಧ್ಯವಿಲ್ಲ. ಪ್ರಸ್ತುತ್ತ ಕೋವಿಡ್-19 ಸೋಂಕಿನಿಂದ ಜನರು ಆಂತಕಕ್ಕೆ ಒಳಗಾಗಿದ್ದಾರೆ. ಡಿಸೆಂಬರ್ ಅಥವಾ ಜನವರಿ ತಿಂಗಳೊಳಗಾಗಿ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಸಾಧ್ಯವಾದಷ್ಟು ಮುಗಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ತಿಳಿಸಿದರು.
ಬರುವ ಸೆಪ್ಟಂಬರ್ ತಿಂಗಳಲ್ಲಿ ಅಧಿವೇಶನ ನಡೆಯಲಿದ್ದು, ಪೂರ್ವ ತಯಾರಿಯನ್ನು ಸಭಾಪತಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನಿಂದ ಕೃಷಿ ಚಟುವಟಿಕೆ, ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ತೊಂದರೆಯಾಗಿಲ್ಲ. ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಕೋವಿಡ್-19 ನಿಯಂತ್ರಣವನ್ನು ಸಮರ್ಪಕವಾಗಿ ಮಾಡುತ್ತಿದೆ. ಸದಾಕಾಲ ಲಾಕ್‍ಡೌನ್ ಜಾರಿಯಲ್ಲಿಡಲು ಸಾಧ್ಯವಿಲ್ಲದಿರುವುದರಿಂದ ಜನರು ಮುನ್ನೆಚ್ಚರಿಕೆಯಿಂದ ಬದುಕಲು ಕಲಿಯಬೇಕು. ಉಸಿರಾಟದ ಸಮಸ್ಯೆ ಮತ್ತಿತರ ಗಂಭೀರ ಖಾಯಿಲೆಯಿಂದ ಬಳಲುತ್ತಿರುವವರು ಮಾತ್ರ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸಾರ್ವಜನಿಕರು ತೀವ್ರತರವಾದ ಆರೋಗ್ಯ ಸಮಸ್ಯೆ ಉಂಟಾಗುವವರೆಗೂ ಕಾಯದೆ ರೋಗಿಯನ್ನು ಪ್ರಾಥಮಿಕ ಹಂತದಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಮಾತ್ರ ಸಾವಿನ ಪ್ರಮಾಣ ತಗ್ಗಿಸಬಹುದು. ಜಿಲ್ಲೆಯಲ್ಲಿ ಮರಣ ಪ್ರಮಾಣ ಶೇ. 3ರಷ್ಟು ಮಾತ್ರವಿದ್ದು, ಜನರು ಭಯಭೀತರಾಗಬಾರದು. ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಾಗ ಆಸ್ಪತ್ರೆಗೆ ದಾಖಲಿಸಿದ್ದರಿಂದ ಮಧ್ಯ ವಯಸ್ಸಿನ ಮೂರ್ನಾಲ್ಕು ಸೋಂಕಿತರು ಮೃತಪಟ್ಟಿರುವುದು ನನಗೆ ನೋವು ತಂದಿದೆ. ಇನ್ನಾದರೂ ಜನರು ಎಚ್ಚೆತ್ತು ರೋಗಲಕ್ಷಣ ಕಂಡ ಕೂಡಲೇ ವೈದ್ಯಕೀಯ ತಪಾಸಣೆಗೊಳಗಾಗಬೇಕೆಂದು ಮನವಿ ಮಾಡಿದರು.
ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ಒದಗಿಸುವಲ್ಲಿ ಜಿಲ್ಲೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಈವರೆಗೂ 636 ಮಂದಿ ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಗುಣಮುಖರಾದ ಸೋಂಕಿತರಲ್ಲಿ ಮತ್ತೊಮ್ಮೆ ಸೋಂಕು ದೃಢಪಡುವ ಸಾಧ್ಯತೆಯಿರುವುದರಿಂದ ಮುಂಜಾಗ್ರತೆಯಿಂದಿರಬೇಕು. ತಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು, ಸರ್ಕಾರದ ಮಾರ್ಗಸೂಚನೆಗಳನ್ನು ಅನುಸರಿಸುವುದರಿಂದ ರೋಗ ಹರಡುವಿಕೆಯನ್ನು ನಿಯಂತ್ರಿಸಬಹುದೆಂದು ತಿಳಿಸಿದರು.
ಇದಕ್ಕೂ ಮುನ್ನ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಜಿಲ್ಲಾಸ್ಪತ್ರೆಯ ಸ್ಟಾಫ್ ನರ್ಸ್ ಹಾಗೂ ಕೊರೋನಾ ವಾರಿಯರ್ ಆಗಿ ಸೇವೆ ನೀಡಿದ ಕಲಾವತಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ವೀಡಿಯೋ ಸಂವಾದದಲ್ಲಿ ಮಾತನಾಡಿ, ಕೋವಿಡ್ ಪಾಸಿಟಿವ್ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಿದ ಸಂದರ್ಭದಲ್ಲಿ ತಮಗೂ ಸೋಂಕು ತಗಲಿತ್ತು. ಸೋಂಕು ತಗುಲಿರುವುದು ದೃಢಪಟ್ಟ ಕೂಡಲೇ ಆಸ್ಪತ್ರೆ ವೈದ್ಯಕೀಯ ಅಧಿಕಾರಿ ಹಾಗೂ ಸಿಬ್ಬಂದಿಗಳು ತುಂಬಿದ ಆತ್ಮಸ್ಥೈರ್ಯ ಹಾಗೂ ನೀಡಿದ ಸೂಕ್ತ ಚಿಕಿತ್ಸೆಯಿಂದ ಪೂರ್ಣ ಗುಣಮುಖಳಾಗಿ ಮತ್ತೆ ಸೇವೆಯಲ್ಲಿ ನಿರತಳಾಗಲು ಅನುಕೂಲವಾಗಿದೆ ಎಂದು ತಮ್ಮ ಮನದಾಳದದ ಮಾತುಗಳನ್ನು ಹಂಚಿಕೊಂಡಾಗ ಸ್ಪಂದಿಸಿದ ಮುಖ್ಯಮಂತ್ರಿಗಳು ಕಲಾವತಿ ಅವರ ಸೇವೆಯನ್ನು ಅಭಿನಂದಿಸಿದರಲ್ಲದೆ ನಿಮ್ಮಂಥ ಕೊರೋನಾ ಸೇನಾನಿಗಳಿಂದ ಸೋಂಕಿತರು ತಮ್ಮ ಧೈರ್ಯವನ್ನು ಹೆಚ್ಚಿಸಿಕೊಂಡು ಬೇಗ ರೋಗ ಮುಕ್ತರಾಗಲು ಸಾಧ್ಯವಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸರ್ಕಾರದ ಸಾಧನೆಯ ಸವಾಲುಗಳ 1 ವರ್ಷ- ಪರಿಹಾರದ ಸ್ಪರ್ಶ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಪಾದಿಸಿದ ಜನಪದ ಮತ್ತು ಮಾರ್ಚ್ ಆಫ್ ಕರ್ನಾಟಕದ ಸಂಚಿಕೆಗಳನ್ನು ಬಿಡುಗಡೆ ಮಾಡಿದರು. ಶಾಸಕರುಗಳಾದ ಮಸಾಲಾ ಜಯರಾಂ, ಜ್ಯೋತಿ ಗಣೇಶ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ,ಜಿ.ಪಂ. ಸದಸ್ಯ ವೈ.ಹೆಚ್. ಹುಚ್ಚಯ್ಯ, ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತಿ ಸಿಇಓ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಮತ್ತಿತರರ ಅಧಿಕಾರಿಗಳು ಹಾಜರಿದ್ದರು.