ಮಧುಗಿರಿ:

      ದೀಪಾವಳಿ ಹಬ್ಬದ ಹೊತ್ತಿಗೆ ಶೇಂಗಾ ಫಸಲು ಕೈಗೆ ಬರುವ ಜೊತೆಗೆ ದ್ವಿದಳ ದಾನ್ಯಗಳ ಬೆಳೆಗಳು ಕೈಗೆ ತಾಕಬೇಕಿತ್ತು. ಎಲ್ಲೆಲ್ಲೂ ಅಚ್ಚ ಹಸಿರು ಕಂಗೊಳಿಸಿಬೇಕಿದ್ದ ಮಧುಗಿರಿ ತಾಲೂಕು ವರುಣನ ಸುಳಿವಿಲ್ಲದೆ ಬರದ ದವಡೆಗೆ ಸಿಲುಕಿ ಬೇಸಿಗೆ ಬಿಸಿಲನ್ನು ಮೀರಿಸುವ ರಣ ಬಿಸಿಲು ತಾಲೂಕಿನಾದ್ಯಂತ ಕೇಕೆ ಹಾಕುತ್ತಿದ್ದು ಜನ ಜಾನುವಾರುಗಳು ಕುಡಿವ ನೀರು ಮತ್ತು ಮೇವಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

      ದೊಡ್ಡೇರಿ, ಮಧುಗಿರಿ ಕಸಬಾ ಹಾಗೂ ಮಿಡಿಗೇಶಿ ಹೋಬಳಿಗಳಲ್ಲಿ ಹಿಂದೆ ಭತ್ತ, ರಾಗಿ ,ಶೇಂಗಾ ಬೆಳೆದು ಸಮೃದ್ಧವಾದ ತೆಂಗು, ಅಡಿಕೆ ತೋಟಗಳು ಮತ್ತು ರೇಷ್ಮೆ ಬೆಳೆಗಳು ಹಾಸು ಹೊಕ್ಕಾಗಿದ್ದು ಸಂಪದ್ಬರಿತ ಪ್ರದೇಶವಾಗಿತ್ತು.ಆದರೆ ಕಳೆದ 10 -12 ವರ್ಷಗಳಿಂದ ಕಾಲ ಕಾಲಕ್ಕೆ ಮಳೆ ಬಾರದೇ ರೈತರು ಕಷ್ಟ ಪಟ್ಟು ಸಂಪಾದಿಸಿದ್ದ ತೋಟಗಾರಿಕೆ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. ದೊಡ್ಡೇರಿ ,ಬಡವನಹಳ್ಳಿ ಸುತ್ತಮುತ್ತ ಹಳ್ಳಿಗಳ ಜನರು ಕಾಕಡ,ಕನಕಾಂಬರ ಕ್ವಿಂಟಾಲ್‍ಗಟ್ಟಲೆ ಹೂವು ಬೆಳೆದು ಆಂದ್ರ ಪ್ರದೇಶ ಮತ್ತು ನಮ್ಮ ರಾಜ್ಯದಲ್ಲಿ ಮಾರಾಟ ಮಾಡುವ ಮೂಲಕ ಬದುಕು ಕಟ್ಟಿಕೊಂಡಿದ್ದರು.ಇದರಿಂದ ಸಾಕಷ್ಟು ಕೂಲಿಕಾರ್ಮಿಕರು ಜೀವನ ನಡೆಸುತ್ತಿದ್ದರು. ಆದರೆ, ಈ ಬಾರಿ ಮಳೆ ಕೈ ಕೊಟ್ಟಿದ್ದರಿಂದ ಕಾಕಡ ಹೂವಿನ ಬೆಳೆ ಕುಂಠಿತವಾಗಿ ರೈತರು ಜೀವನ ನಿರ್ವಹಣೆಗೆ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.ಈ ಭಾಗದಲ್ಲಿ ಸುವರ್ಣಮುಖಿ ನದಿ ತುಂಬಿ ಹರಿದರೆ ಮಾತ್ರ ರೈತರ ಬದುಕು ಹಸನಾಗುತ್ತದೆ.

      ಇನ್ನೂ ಕಸಬಾ, ಮಿಡಿಗೇಶಿ ಹೋಬಳಿಗಳಲ್ಲೂ ಮಳೆ, ಬೆಳೆ ಇಲ್ಲದೆ ಸ್ವಲ್ಪ ತೇವಾಂಶಕ್ಕೆ ಬಿತ್ತಿದೆ ರಾಗಿ, ಮೆಕ್ಕೆಜೋಳ ,ಶೇಂಗಾ ಬಿಸಿಲಿನ ತಾಪಕ್ಕೆ ಕಮರಿವೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸುತ್ತಾರೆ. 

      ಒಟ್ಟಿನಲ್ಲಿ ತಾಲೂಕಿನಾದ್ಯಂತ ಬರದ ಕರಿನೆರಳು ಆವರಿಸಿದ್ದು ಗಡಿ ಗ್ರಾಮದ ಹಳ್ಳಿಗಳಲ್ಲಿ ಹೇಳೋರು..ಕೇಳೋರು ಯಾರು ಇಲ್ಲದಂತಾಗಿ ಜನತೆ ತತ್ತರಿಸುತ್ತಿದ್ದಾರೆ. ಸರ್ಕಾರವೇನೋ ಮಧುಗಿರಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದೆ.ಆದರೆ ಸಮರ್ಪಕ ಅನುದಾನ ಬಿಡುಗಡೆಗೊಳಿಸಿ ಕುಡಿವ ನೀರು ಮತ್ತು ದನಕರುಗಳಿಗೆ ಮೇವಿನ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಸಮಾರೋಪಾದಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ರೈತಾಪಿ ವರ್ಗ ಒತ್ತಾಯಿಸಿದೆ.

(Visited 22 times, 1 visits today)