ತುಮಕೂರು:
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನ ಅಧ್ಯಕ್ಷರಾಗಿ ಹೆಬ್ಬೂರು ಹೋಬಳಿ ಸಿರಿವರದ ಉಮೇಶ್‍ಗೌಡ ಮತ್ತು ಉಪಾಧ್ಯಕ್ಷರಾಗಿ ಬೆಳ್ಳಾವಿ ಹೋಬಳಿ ಕೊಟ್ಟನಹಳ್ಳಿ ಗೊಲ್ಲರಹಟ್ಟಿಯ ಶಿವರಾಜ್ ಬುಧವಾರ ಅಧಿಕಾರ ಸ್ವೀಕರಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ 15 ಸದಸ್ಯರನ್ನು ಸರ್ಕಾರ ನಾಮರ್ದೇಶನ ಮಾಡಿದ್ದು, ಸಿರಿವರದ ಉಮೇಶ್‍ಗೌಡ ಅಧ್ಯಕ್ಷರಾಗಿ ಮತ್ತು ಕೊಟ್ಟನಹಳ್ಳಿ ಗೊಲ್ಲರಹಟ್ಟಿಯ ಶಿವರಾಜ್ ಉಪಾಧ್ಯಕ್ಷರಾಗಿ ಬುಧವಾರ ಅಧಿಕಾರ ವಹಿಸಿಕೊಂಡರು.
ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‍ಗೌಡ ಅವರು ಭೇಟಿ ನೀಡಿ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಶುಭ ಕೋರಿದರು. ಈ ವೇಳೆ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಕೊಡಿಸುವಂತಹ ಮಾರುಕಟ್ಟೆ ಇದಾಗಿದ್ದು, ಇಲ್ಲಿ ಭತ್ತ, ರಾಗಿ, ಜೋಳ ಈ ರೀತಿಯ ಬೆಳೆಗಳನ್ನು ರೈತರು ಮಾರಾಟ ಮಾಡಲು ಬರುತ್ತಾರೆ. ರೈತರಿಗೆ ಸರಿಯಾದ ಬೆಂಬಲ ಬೆಲೆಯನ್ನು ಕೊಡುವಂತಹ ಕಲ್ಪನೆಯನ್ನು ಸೃಷ್ಠಿಮಾಡಿ, ನ್ಯಾಯ ಕೊಡುವಂತಹ ಕೃಷಿ ಉತ್ಪನ್ನ ಮಾರುಕಟ್ಟೆಯಾಗಿದೆ ಎಂದರು.
ಕೊರೋನ ಸಂಕಷ್ಟದ ಕಾಲದಲ್ಲಿ ಸಾಕಷ್ಟು ಕಷ್ಟಗಳನ್ನು ರೈತರು ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರದ ಜೊತೆ ಕೊಂಡಿಯನ್ನು ರೂಪಿಸುವಂತಹ ಕೆಲಸವನ್ನು ಮಾಡುತ್ತೇವೆ. ಮೋದಿಯವರ ಕೇಂದ್ರ ಸರ್ಕಾರ ಮತ್ತು ರಾಜ್ಯದ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರ ನೂತನ ಎಪಿಎಂಸಿ ಕಾಯ್ದೆಯನ್ನು ಅನುಷ್ಠಾನಗೊಳಿಸಿದೆ. ಈ ಕಾಯ್ದೆಯು ಸೆಸ್ ಮತ್ತು ರೈತರಿಗೆ ಹೆಚ್ಚು ಸ್ನೇಹಿಯಾಗಿರುವಂತಹದ್ದಾಗಿದೆ. ಹಿಂದೆ ರೈತರು ಬೆಳೆದ ಬೆಳೆಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ತಂದು ಮಾರಾಟ ಮಾಡಬೇಕಿತ್ತು. ಈಗ ಹೊಸ ಕಾಯ್ದೆಯಂತೆ ರೈತರು ತಾವು ಬೆಳೆದ ಬೆಳೆಗಳನ್ನು ನೇರವಾಗಿ ಮದ್ಯವರ್ತಿಗೆ ಕೊಡುವಂತಹ ಎಪಿಎಂಸಿ ಕಾಯ್ದೆಗೆ ತಿದ್ದುಪಡಿಯಾಗಿದೆ ಇದರಿಂದ ರೈತರಿಗೆ ಹೆಚ್ಚು ಲಾಭದಾಯಕವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೂತನ ಅಧ್ಯಕ್ಷ ಉಮೇಶ್‍ಗೌಡ ಮಾತ ನಾಡಿ, ನನ್ನ ರಾಜಕೀಯ ಗುರುಗಳಾದ ಬಿ. ಸುರೇಶ್‍ಗೌಡರ ಆಶೀ ರ್ವಾದದಿಂದ ನಾನು ಎಪಿಎಂಸಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಸುರೇಶ್‍ಗೌಡರಂತೆಯೇ ರೈತರ ಪರ ಕಾಳಜಿ ವಹಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಕೊರೋನ ಸಂದರ್ಭದಲ್ಲಿ ರೈತರು ತಾವು ಬೆಳೆದ ಬೆಳೆಗೆ ಲಾಭ ಸಿಗದೇ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಮಾಜಿ ಶಾಸಕರಾದ ಬಿ.ಸುರೇಶ್‍ಗೌಡರ ಮಾರ್ಗದರ್ಶನದಲ್ಲಿ ಎಪಿಎಂಸಿ ಮೂಲಕ ರೈತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ನೂತನ ಉಪಾಧ್ಯಕ್ಷ ಶಿವರಾಜ್ ಮಾತನಾಡಿ, ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮುಖ್ಯವಾಗಿ ಮಾರುಕಟ್ಟೆಯಲ್ಲಿ ರೈತರ ಶೋಷಣೆಯಾಗದಂತೆ ನಿಗಾವಹಿಸಲು ಹಾಗೂ ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ಸೇರಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವುದಾಗಿ ತಿಳಿಸಿದರು.
ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ: ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅಧಿಕಾರ ಸ್ವೀಕಾರಕ್ಕೂ ಮುನ್ನ ಎಪಿಎಂಸಿ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಪಂ ಸದಸ್ಯ ವೈ.ಎಚ್.ಹುಚ್ಚಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾ ರಮೇಶ್, ಉಪಾಧ್ಯಕ್ಷ ಶಾಂತಕುಮಾರ್, ಮಾಜಿ ಅಧ್ಯಕ್ಷ ಗಂಗಾಂಜಿನೇಯ, ಮುಖಂಡರಾದ ಸಿದ್ದೇಗೌಡ, ರಮೇಶ್, ಸೇರಿದಂತೆ ಎಪಿಎಂಸಿ ನೂತನ ನಾಮ ನಿರ್ದೇಶಿತ ಸದಸ್ಯರು ಭಾಗವಹಿಸಿದ್ದರು.