ತುಮಕೂರು:
ಆರೋಗ್ಯ ಬಿಸಿಯೂಟ, ಶಿಕ್ಷಣ ಮೊದಲಾದ ಅಗತ್ಯ ಮೂಲಭೂತ ಸೇವೆಗಳ ಖಾಸಗಿಕರಣದ ಪ್ರಸ್ತಾಪಗಳನ್ನು ಹಿಂಪಡೆಯಬೇಕು. ಸಾರ್ವಜನಿಕ ವಲಯದ ಉದ್ದಿಮೆಗಳ ಮತ್ತು ಸೇವೆಗಳ ಖಾಸಗಿಕರಣ ನಿಲ್ಲಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಆಗಸ್ಟ್ 7ರಂದು ಪ್ರತಿಭಟನೆ ನಡೆಸಿದರು.
ಅಂಗನವಾಡಿ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ ಖಾಯಂ ಮಾಡಿ. ಪ್ರತಿ ತಿಂಗಳಿಗೆ 21000 ರೂ. ಕನಿಷ್ಟ ವೇತನ ನೀಡಬೇಕು. ಮಾಸಿಕ ಪಿಂಚಣಿ 10,000 ರೂ. ಕೊಡಬೇಕು. ಇಎಸ್.ಐ ಮತ್ತು ಪಿಎಫ್ ನೀಡಬೆಕು ಎಂದು ಆಗ್ರಹಿಸಿದರು.
ಕಾರ್ಮಿಕ ಕಾನೂನುಗಳನ್ನು ಮಾಲಿಕರ ಪರವಾಗಿ ಬದಲಾಯಿಸುವುದನ್ನು ನಿಲ್ಲಿಸಬೇಕು. ಕೋವಿಡ್ ಅವಧಿಯ ನೆಪವೊಡ್ಡಿ ಕೆಲಸದ ಅವಧಿ ಹೆಚ್ಚಿಸುವುದನ್ನು ಕೈಬಿಡಬಬೇಕು. ಆದಾಯ ತೆರಿಗೆ ಪಾವತಿಸಲಾಗದ ಎಲ್ಲಾ ಬಡ ಕುಟುಂಬಗಳಿಗೆ 6 ತಿಂಗಳ ಕಾಲ ಪ್ರತಿ ತಿಂಗಳಿಗೆ 7500 ರೂ. ನೀಡಬೇಕು. ಉಚಿತ ರೇಷನ್ ಮತ್ತು ಆಹಾರ ಧಾನ್ಯ ಕೊಡಬೇಕು ಎಂದು ಒತ್ತಾಯಿಸಿದರು.
ಕೋವಿಡ್ ವಿರುದ್ಧದ ದುಡಿಯುತ್ತಿರುವ ಆಶಾ, ಅಂಗನವಾಡಿ, ಮತ್ತಿತರಿಗೆ ಸುರಕ್ಷತಾ ಸಾಧನ, ಪಿಪಿಇ ಕಿಟ್‍ಗಳನ್ನು ನೀಡಬೇಕು. ಕೋವಿಡ್‍ಗೆ ಸತ್ತರೆ 50 ಲಕ್ಷ ರೂ. ವಿಮಾ ಸೌಲಭ್ಯ ಖಾತ್ರಿಪಡಿಸಬೆಕು. ಅವಲಂಬಿತರಿಗೆ ಪಿಂಚಣಿ ಮತ್ತು ಖಾಯಂ ಉದೋಗ ಕಲ್ಪಿಸಬೇಕು. ಕೆಲಸದ ಒತ್ತಡಗಳಿಂದ 23 ಜನ ನೌಕರರು ನಿಧನರಾಗಿದ್ದು ಇವರಿಗೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಕೆಲಸದಲ್ಲಿದ್ದಾಗ ಸೋಂಕಿತರಾಗುವ ಎಲ್ಲ ಕಾರ್ಮಿಕರಿಗೂ ಕನಿಷ್ಟ 10 ಲಕ್ಷ ರೂ. ಪರಿಹಾರ ನಿಧಿಯನ್ನು ನೀಡಬೇಕು. ಅಕ್ಷರ ದಾಸೋಹದಲ್ಲಿ ಕೇಂದ್ರೀಕೃತ ಅಡುಗೆ ಪದ್ಧತಿ ಮತ್ತು ಗುತ್ತಿಗೆ ಪದ್ಧತಿ ಜಾರಿ ಮಾಡಬಾರದು. ಕ್ವಾರೈಂಟೆನ್‍ನಲ್ಲಿ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ನೌಕರರಿಗೆ ವೇತನ ಪಾವತಿ ಮಾಡಬೇಕು. ಅಂಗನವಾಡಿ ಕೇಂದ್ರದ ಮಕ್ಕಳಿಗೆ ವೈದ್ಯಕೀಯ ತಪಾಸಣೆ ಮುಂದೂಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮೂಲಕ ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ತುಮಕೂರು ಅಧ್ಯಕ್ಷೆ ಗೌರಮ್ಮ, ವಿನೋದ, ಖಜಾಂಚಿ ಜಬೀನ, ಪುಷ್ಪ, ನಾಗರತ್ನ, ಗೌರಮ್ಮ, ರಾಜಮ್ಮ, ಅನಸೂಯ, ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮೊದಲಾದವರು ಉಪಸ್ಥಿತರಿದ್ದರು.