ತುಮಕೂರು:
ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶವು ಎರಡ್ಮೂರು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿಯ ಬದಲಾವಣೆಯನ್ನು ಕಾಣಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದ್ದಾರೆ.
ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ 74ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ದ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ಆರ್ಥಿಕ ವಿಚಾರದಲ್ಲಿ ಸ್ವಲ್ಪ ಮಟ್ಟಿನ ಸಮಾನತೆ ಸಾಧಿಸಿದ್ದರೂ, ಸಾಮಾಜಿಕವಾಗಿ ಸಮಾಜ ನಿರ್ಮಾಣಕ್ಕೆ ಇನ್ನೂ ಬಹುದೂರ ಸಾಗಬೇಕಾಗಿದೆ. ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ಕೆಲಸ ಆಗಬೇಕಾಗಿದೆ ಎಂದರು.
ಸ್ವಾತಂತ್ರ ಬಂದು 73ವರ್ಷಗಳು ಕಳೆದಿದ್ದರೂ ಜಾತಿ ರಹಿತ ಸಮಾಜ ನಿರ್ಮಾಣದತ್ತ ಕೊಂಚ ಕೆಲಸಗಳಾಗಿದ್ದರೂ, ವರ್ಗರಹಿತ ಸಮಾಜ ನಿರ್ಮಾಣ ಮಾಡುವಲ್ಲಿ ಹಿಂದೆ ಬಿದ್ದಿದ್ದೇವೆ. ಬಡವ, ಬಲ್ಲಿದ, ಮೇಲು, ಕೀಳು ಎಂಬ ಭಾವನೆ ಜನರಿಂದ ಇನ್ನೂ ದೂರವಾಗಿಲ್ಲ.ವೃತ್ತಿಗೌರವ ದೊರೆಯುವ ಜೊತೆಗೆ, ಶ್ರಮಕ್ಕೆ ತಕ್ಕ ಬೆಲೆ ದೊರೆಯುವಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಇದುವರೆಗೂ ಆಡಳಿತ ನಡೆಸಿದ ಎಲ್ಲಾ ರಾಜಕೀಯ ಪಕ್ಷಗಳು ನಿರಂತರವಾಗಿ ಪ್ರಯತ್ನ ನಡೆಸಿವೆ. ದೇಶವನ್ನು ಅಭಿವೃದ್ದಿಯತ್ತ ತೆಗೆದುಕೊಂಡು ಹೋಗಲು ನಿರಂತರ ಪ್ರಯತ್ನ ನಡೆಸಿವೆ ಎಂದು ಅವರು ಹೇಳಿದರು.
ಕರ್ನಾಟಕ ಇಂದು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಇದಕ್ಕೆ ಕಾರಣ ಕಳೆದ ಎರಡು ವರ್ಷಗಳ ಹಿಂದೆ ಪಾವಗಡ ಸೇರಿದಂತೆ ರಾಜ್ಯದ ವಿವಿಧೆಡೆ ನಿರ್ಮಾಣವಾಗಿರುವ ಸೋಲಾರ್ ಪಾರ್ಕ್‍ಗಳೇ ಕಾರಣ. ಇದೇ ನಿಟ್ಟಿನಲ್ಲಿ ರೈತ ಪಂಪ್‍ಸೆಟ್‍ಗಳಿಗೂ ಸೋಲಾರ್ ಅಳವಡಿಸುವ ಪ್ರಕ್ರಿಯೆ ಬಹಳ ವೇಗವಾಗಿ ನಡೆದಿದೆ. ಸ್ವಚ್ಚತೆ, ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೇಮಾವತಿ, ಎತ್ತಿನಹೊಳೆ ಮತ್ತು ಭದ್ರಾ ಮೇಲ್ದಂಡೆ ಮೂಲಕ ಜಿಲ್ಲೆಯ ಎಲ್ಲಾ ಕೆರೆಗಳಿಗೆ ಕುಡಿಯುವ ನೀರು ಒದಗಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಮುಂದಿನ ಮೂರು ವರ್ಷಗಳಲ್ಲಿ ಜಿಲ್ಲೆ ಹಸಿರುಮಯವಾಗಲಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಲಿದೆ ಎಂಬ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದರು.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯ ಇತರೆ ಜಿಲ್ಲೆಗಳನ್ನು ಬಿ ಮತ್ತು ಸಿ ವಲಯಗಳನ್ನಾಗಿ ವಿಂಗಡಿಸಿದ್ದು, ಸ್ಥಳೀಯ ಕಚ್ಚಾ ವಸ್ತುಗಳ ಲಭ್ಯತೆಯನ್ನಾಧರಿಸಿ ಕೈಗಾರಿಕೆಗಳನ್ನು ಆರಂಭಿಸಲು ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಅದೇ ರೀತಿ ತುಮಕೂರು ಜಿಲ್ಲೆಯಲ್ಲಿ ತೆಂಗು ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಲು ಕೇರಳದ ಹಣಕಾಸು ಸಚಿವರು ಹಾಗೂ ತೆಂಗು ಸಚಿವರ ಸಂಪರ್ಕದಲ್ಲಿದ್ದು, ವಿಭಿನ್ನ ರೀತಿಯ ತೆಂಗು ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಲು ಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ವಸಂತನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ನಿವೇಶನಗಳು ಖಾಲಿ ಇದ್ದು, ಕೈಗಾರಿಕ ಪ್ರದೇಶಕ್ಕೆ ಪಿಪಿ ಮಾಡೆಲ್‍ನಲ್ಲಿ ನೀರು ಒದಗಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಅಲ್ಲದೆ ಕುಡಿಯುವ ನೀರು ಕೂಡ ಪೂರೈಸಲಾಗುವುದು. ಒಟ್ಟಾರೆ ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತನ್ನು ನೀಡಲಿದೆ ಎಂದರು.
ಸ್ಮಾರ್ಟ್‍ಸಿಟಿ ತುಮಕೂರು ನಗರ ಹಾಗೂ ಜಿಲ್ಲೆಯಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಾಕಷ್ಟು ಒತ್ತು ನೀಡಲಾಗಿದೆ. ತುಮಕೂರು ನಗರಕ್ಕೆ ಬುಗುಡನಹಳ್ಳಿ ಕೆರೆಯಿಂದ ಮಾತ್ರ ನೀರು ಪೂರೈಸಲಾಗುತ್ತಿದೆ. ಇನ್ನು 2 ಕೆರೆಗಳಿಂದ ತುಮಕೂರು ನಗರಕ್ಕೆ ನೀರು ಪೂರೈಸಲು ಚಿಂತಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮರ್ಪಕವಾದ ನೀರು ತುಮಕೂರು ನಗರಕ್ಕೆ ಪೂರೈಕೆಯಾಗಲಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಸತಿ ರಹಿತರಿಗೆ ನಿವೇಶನ, ವಸತಿ, ಕುಡಿಯುವ ನೀರು, ನರೇಗಾ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ಹೀಗೆ, ಹತ್ತಾರು ಕಾರ್ಯಕ್ರಮಗಳನ್ನು ಸರ್ಕಾರದ ವತಿಯಿಂದ ಕೈಗೊಳ್ಳಲಾಗುತ್ತಿದೆ. ಈ ಮೂಲಕ ಗ್ರಾಮೀಣ ಜನರು ಸ್ವಾಲಂಭನೆಯಿಂದ ಬದುಕವಂತಾಗಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿರುವ ಗ್ರಾಮ ಪಂಚಾಯಿತಿಗಳು ಮೊದಲು ನಿವೇಶನ ರಹಿತರನ್ನು ಹುಡುಕಿ ಅವರಿಗೆ ನಿವೇಶನ ನೀಡಬೇಕು. ನಿವೇಶನ ಇಲ್ಲದವರಿಗೆ ವಸತಿ ನೀಡಿದರೆ ವಸತಿ ಯೋಜನೆ ಸಫಲವಾಗುವುದಿಲ್ಲ. ಬರುವ 3-4 ತಿಂಗಳಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇವೆ ಎಂದು ಅವರು ತಿಳಿಸಿದರು.
ಅಟಲ್ ಭೂಜಲ ಯೋಜನೆಯ ಅನುಷ್ಠಾನದಲ್ಲಿ ತುಮಕೂರು ಜಿಲ್ಲೆ ರೂಪಿಸಿರುವ ಮಾದರಿಯು ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ವಿಶ್ವಬ್ಯಾಂಕ್ 2 ಬಾರಿ ರಾಜ್ಯವನ್ನು ಶ್ಲಾಘಿಸಿದೆ ಎಂದ ಅವರು, ಪ್ರಧಾನ ಮಂತ್ರಿಗಳ ಆಶಯದಂತೆ ಮನೆ-ಮನೆಗೆ ನೀರು ನೀಡುವ ಜಲಜೀವನ್ ಮಿಷನ್ ಮುಂದಿನ 3 ವರ್ಷಗಳಲ್ಲಿ ಅನುಷ್ಠಾನಗೊಂಡು, ಗ್ರಾಮೀಣ ಪ್ರದೇಶಗಳಲ್ಲಿ ಪರಿಶುದ್ಧ ಕುಡಿಯುವ ನೀರು ದೊರೆಯಲಿದೆ. ತುಮಕೂರು ಜಿಲ್ಲೆಯ ಗ್ರಾಮೀಣ ಭಾಗವು 2-3 ವರ್ಷಗಳಲ್ಲಿ ಸಂಪೂರ್ಣ ಬದಲಾಗಲಿದೆ ಎಂದರು.
ಜಿಲ್ಲೆಯಲ್ಲಿ ಹೆದ್ದಾರಿ ಕಾಮಗಾರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೈಗೊಳ್ಳಲಾಗಿದೆ. ಶಿರಾ-ಮೂಡಿಗೆರೆ(ರಾ.ಹೆ.234), ಬೆಂಗಳೂರು-ಶಿವಮೊಗ್ಗ(ರಾ.ಹೆ.206), ಬೀದರ್-ಶ್ರೀರಂಗಪಟ್ಟಣ(ರಾ.ಹೆ.158) ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಬೆಂಗಳೂರು-ಶಿವಮೊಗ್ಗ ರಾ.ಹೆ.206ರ ಚತುಷ್ಪಥರಸ್ತೆ ಕಾಮಗಾರಿ ಮುಂದಿನ 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.
ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ದಾದಿಯರು ಹಾಗೂ ಜಿಲ್ಲಾಡಳಿತವು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ದುಡಿದ್ದಾರೆ. ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಭಿನಂದನೆ ಸಲ್ಲಿಸುತ್ತೇನೆ. ಕೊರೊನಾ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ 400 ಹಾಸಿಗೆಗಳ ಜಿಲ್ಲಾ ಕೊವಿಡ್ ಆಸ್ಪತ್ರೆ, ಪ್ರತಿ ತಾಲೂಕಿನಲ್ಲಿ ಹೈಪ್ಲೋ ಆಕ್ಸಿಜನ್ ಇರುವ 50 ಹಾಸಿಗೆಗಳು, ಹೆಚ್ಚುವರಿ 2 ವೆಂಟಿಲೇಟರ್ ಹಾಗೂ 6 ಐಸಿಯು ಹಾಸಿಗೆಗಳನ್ನು ಮೀಸಲಿಡಲಾಗಿದೆ. ಕೋವಿಡ್ ಕೇರ್ ಕೇಂದ್ರ ಹಾಗೂ ವೈರಾಲಜಿ ಲ್ಯಾಬ್‍ಗಳು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸಿದ್ದು, ತಿಪಟೂರಿನಲ್ಲಿ ವೈರಾಲಜಿ ಲ್ಯಾಬ್‍ನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.
ಸೋಂಕಿನ ಲಕ್ಷಣಗಳು ಕಂಡು ಬಂದ ತಕ್ಷಣ ಆಸ್ಪತ್ರೆಗೆ ಬನ್ನಿ, ವಿಳಂಬವಾಗಿ ಆಸ್ಪತ್ರೆಗೆ ಬಂದರೆ ವೈದ್ಯರು ಚಿಕಿತ್ಸೆ ನೀಡಲು ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಜನರು ಭಯಪಡದೇ ಧೈರ್ಯದಿಂದ ಎದುರಿಸಬೇಕು. ಕೋವಿಡ್‍ಗೆ ಲಸಿಕೆಗಳು ಕಂಡು ಹಿಡಿಯಲಾಗುತ್ತಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಎಲ್ಲಾ ಸಮುದಾಯಗಳಿಗೆ ಸ್ಮಶಾನ ಭೂಮಿ ಇರಬೇಕು. ಜಿಲ್ಲೆಯಲ್ಲಿ ಸ್ಮಶಾನಗಳಿಗೆ ಕೊರತೆಯಾಗಬಾರದು. ಎಲ್ಲಾ ಸಮುದಾಯಗಳಿಗೆ ಸ್ಮಶಾನ ನೀಡುವಂತೆ ಜಿಲ್ಲಾಡಳಿತಕ್ಕೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದರು.
ಕೊರೊನಾ ಸೋಂಕಿನಿಂದಾಗಿ ಶಾಲಾ-ಕಾಲೇಜುಗಳನ್ನು ತೆರೆಯುತ್ತಿಲ್ಲ. ಶಾಲಾ ಕಾಲೇಜು ತೆರೆಯುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ ಮಹನೀಯರನ್ನು ಹಾಗೂ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಸಚಿವರು ತಿಳಿಸಿದರು.
ದೇಶದ ಇತರೆ ರಾಜ್ಯದವರು ಹಾಗೂ ವಿದೇಶಿಗರು ನೆಲಸಲು ಇಚ್ಛಿಸುತ್ತಿದ್ದ ಬೆಂಗಳೂರಿನಲ್ಲಿ ಕಳೆದೆರಡು ದಿನಗಳಲ್ಲಿ ನಡೆದ ಘಟನೆ ಭಯ ಹುಟ್ಟಿಸುವಂತಿದೆ. ಸ್ವಾರ್ಥಕ್ಕಾಗಿ ಬೇರೊಬ್ಬರ ಮೇಲೆ ದಾಳಿ ಮಾಡಬಾರದು. ಅಸ್ತಿ-ಪಾಸ್ತಿ ನಷ್ಟ ಮಾಡಬಾರದು. ಇದರಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಅವರು ತಿಳಿಸಿದರು.
ಸಮಾರಂಭದ ನಂತರ ಮಾತನಾಡಿದ ಸಚಿವರು, ಬೆಂಗಳೂರು ನಗರದಲ್ಲಿ ನಡೆದಿರುವ ಘಟನೆಯ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ. ತನಿಖಾ ವರದಿ ಬಂದ ನಂತರ ವರದಿಯನ್ನು ಆಧರಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದ ಅವರು, ಆಸ್ತಿಗಳನ್ನು ನಾಶ ಮಾಡಿದವರಿಂದ ನಷ್ಟ ವಸೂಲಿ ಮಾಡುವ ಕುರಿತ 2001ರಲ್ಲಿ ರಾಜ್ಯದಲ್ಲಿ ಕಾನೂನು ಜಾರಿಯಲ್ಲಿದೆ. ಅದಕ್ಕೆ ಪ್ರಾಧಿಕಾರವನ್ನು ರಚನೆ ಮಾಡಿ, ಅಧಿಕಾರ ನೀಡಬೇಕಾಗುತ್ತದೆ. ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದರು.
ಸಮಾರಂಭದಲ್ಲಿ ಜಿಲ್ಲೆಯ ವಸತಿ ಶಾಲೆಗಳಲ್ಲಿ 2019-20ನೇ ಸಾಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಶಿರಾ ತಾಲೂಕು ಭುವನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳಾದ ಬಿ.ಪುಪ್ಪಲತ(621-99.36%) ಹಾಗೂ ವೈ.ಆರ್. ಪ್ರಿಯದರ್ಶಿನಿ(615-98.40%); ಪಾವಗಡ ತಾಲೂಕು ಕೊಡಿಗೆಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಿ.ವೆಂಕಟೇಶ ಪ್ರಸನ್ನ ಕುಮಾರ್(618-98.88%) ತುರುವೇಕೆರೆ ತಾಲ್ಲೂಕಿನ ಗುಡ್ಡೇನಹಳ್ಳಿಯ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ಡಿ.ಸಿಂಚನ(618-98.88%) ಹಾಗೂ ಹೆಚ್.ಆರ್ ಪ್ರಿಯಾಂಕ(615-98.40%) ಸನ್ಮಾಸಿಲಾಯಿತು.
ನರೇಗಾ ಯೋಜನೆಯಡಿ ಸಾಧಕರಿಗೆ ಪ್ರಶಸ್ತಿ:
ನರೇಗಾ ಯೋಜನೆಯಡಿ ಸಾಧನೆ ಮಾಡಿ ಪ್ರಶಸ್ತಿಗೆ ಆಯ್ಕೆಯಾದ ಅಧಿಕಾರಿ ಸಿಬ್ಬಂದಿಗಳ ವಿವರ ಇಂತಿದೆ. ತಿಪಟೂರು ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಸುದರ್ಶನ್, ಶಿರಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ರಂಗನಾಥ್, ಮೂರ್ತಿ, ಹುಲಿಕುಂಟೆ ಗ್ರಾ.ಪಂ ಪಿಡಿಓ ಬಸವರಾಜು, ತಾಂತ್ರಿಕ ಸಹಾಯಕ ಅಮಿತ್, ಐಇಸಿ ಸಂಯೋಜಕ ಶಿವಕುಮಾರ್, ಬಿ.ಎಫ್.ಟಿ ಕೆ.ಹೆಚ್ ಗಂಗಾಧರಯ್ಯ, ಮಧುಗಿರಿ ತಾಲೂಕು ಆರ್‍ಎಫ್‍ಒ ತಾರಕೇಶ್ವರಿ, ಕುಣಿಗಲ್ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ನಾಗರಾಜು, ಮಧುಗಿರಿ ಸಹಾಯಕ ರೇಷ್ಮೆ ನಿರ್ದೇಶಕ ನಾಗರಾಜು, ಮಧುಗಿರಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಸುರೇಶ್, ಸಿಂಗನಹಳ್ಳಿ ಗ್ರಾ.ಪಂ ಪಿಡಿಓ ವೆಂಕಟಾಚಲಪತಿ, ತಾಂತ್ರಿಕ ಸಂಯೋಜಕ ಹರಿಪ್ರಸಾದ್, ತಿಪಟೂರು ತಾಂತ್ರಿಕ ಸಂಯೋಜಕ ಸುಜಯ್, ಬಲರಾಮ್, ಪ್ರಕಾಶ್ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಜಿ.ಬಿ ಜ್ಯೋತಿಗಣೇಶ್, ವಿಧಾನ ಪರಿಷತ್ ಶಾಸಕ ಕಾಂತರಾಜು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಪಾಲಿಕೆ ಮೇಯರ್ ಫರೀದಾ ಬೇಗಂ, ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಓ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ತಹಶೀಲ್ದಾರ್ ಮೋಹನ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.