ತುಮಕೂರು:
ಜಿಲ್ಲೆಯ ಪಾವಗಡ ತಾಲ್ಲೂಕು ವೈ ಎನ್ ಹೊಸಕೋಟೆ ಪೊಲೀಸ್ ಠಾಣೆಯ ಎಸ್ಪಿ ಕಾನ್ಸ್ಟೇಬಲ್‍ರನ್ನುಪೊಲಿಸ್ ಠಾಣೆಯ ಮುಂದೆಯೇ ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿರುವ ಘಟನೆ ನಿನ್ನೆ ರಾತ್ರಿ 7:30 ರ ಸಮಯದಲ್ಲಿ ನಡೆದಿದೆ.
ಠಾಣೆಯ ಸಬ್‍ಇನ್ಸ್ಪೆಕ್ಟರ್ ರಾಮಯ್ಯ ರವರಿಗೆ ಕರೋನಾ ಸೋಂಕು ಪಾಸಿಟಿವ್ ಆಗಿದ್ದರಿಂದ ಕ್ವಾರಂಟೈನ್‍ನಲ್ಲಿ ಇದ್ದಾರೆ.
ಇಲ್ಲಿನ ಪೊಲೀಸ್ ಸಿಬ್ಬಂದಿಯೂ ಸಹ ಹೋಮ್‍ಕ್ವಾರೇಂಟೈನ್ ಮುಗಿಸಿ ನಿನ್ನೆಯಷ್ಟೇ ಕೆಲಸಕ್ಕೆ ಹಾಜರಾಗಿದ್ದರು .
ಆಂಧ್ರಪ್ರದೇಶ ದಿಂದ ಜನರು ವೈ ಎನ್ ಹೊಸಕೋಟೆಯ ಮದ್ಯದಂಗಡಿಗಳಿಗೆ ಬಂದು ಮದ್ಯ ಸೇವನೆಯನ್ನು ಮಾಡುತ್ತಿದ್ದಾರೆ .ಮದ್ಯದಂಗಡಿಗಳ ಮುಂದೆ ಜನಸಂದಣಿ ಇದೆ, ರಸ್ತೆಯಲ್ಲಿ ಓಡಾಡುವ ಜನರಿಗೆ ಕಿರಿಕಿರಿಯಾಗುತ್ತಿದೆ ಇದರಿಂದ ಸಾರ್ವಜನಿಕ ಸ್ವಾಸ್ಥ್ಯ ಹಾಳಾಗುತ್ತಿದೆ ಎಂದು ಸಾರ್ವಜನಿಕರು ದೂರಿದ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ .
ಮದ್ಯದಂಗಡಿಗಳ ಮುಂದೆ ಇರುವ ಕಿರಿದಾದ ದಾರಿಯಲ್ಲಿ ಜನಸಂದಣಿ ಹೆಚ್ಚಿದ್ದರಿಂದ ದ್ವಿಚಕ್ರ ವಾಹನಗಳಲ್ಲಿ ವೇಗವಾಗಿ ಓಡಾಡುವವರನ್ನು ತಡೆದು ನಿಧಾನವಾಗಿ ಚಲಿಸುವಂತೆ ಸೂಚಿಸಿದ್ದಾರೆ . ಅದೇ ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಬಿಜೆಪಿ ಮುಖಂಡರೊಬ್ಬರ ಬೆಂಬಲಿಗನ ಮಗನನ್ನು ನಿಲ್ಲಿಸಿ ದಂಡಿಸಿ ನಿಧಾನವಾಗಿ ತೆರಳುವಂತೆ ಹೇಳಿದ್ದಾರೆ .ಇಷ್ಟಕ್ಕೆ ಕೋಪಗೊಂಡ ಬಿಜೆಪಿ ಮುಖಂಡರ ಮಗ ಮನೆಗೆ ತೆರಳಿ ತಂದೆಯನ್ನು ಕರೆದುಕೊಂಡು ಬಂದು ಪೊಲೀಸ್ ಠಾಣೆಯ ಮುಂದೆ ಎಸ್ಪಿ ಕಾನ್ಸ್ಟೇಬಲ್ ಶೌಕತ್ ಮೇಲೆ ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ.
ಹಲ್ಲೆ ನಡೆಸಿರುವ ದುಷ್ಕರ್ಮಿಗಳನ್ನು ಜಾನಕಿರಾಮ್ ಹಾಗೂ ಆತನ ತಂದೆ ನಾಗರಾಜು ಎಂದು ಹೇಳಲಾಗಿದೆ .
ಹಲ್ಲೆಮಾಡಿರುವವರು ರಾಜಕೀಯ ಮುಖಂಡ ರ ಬೆಂಬಲಿ ಗನಾಗಿರುವುದರಿಂದ ಹಿರಿಯ ಪೊಲೀಸ್ ಅಧಿಕಾರಿಗಳು ರಾಜಕೀಯ ಸಂಧಾನ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ .
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಲಿತ ಮುಖಂಡ ಎ ಎಸ್ ಯೋಗೀಶ್ ತಾಲ್ಲೂಕಿನಲ್ಲಿ ಅನ್ಯಾಯ ಗಳಾದರೆ, ಅಕ್ರಮಗಳು ನಡೆದರೆ ನ್ಯಾಯ ಕೇಳಲು ಹೋದರೆ ಅಥವಾ ಪ್ರತಿಭಟನೆ ಮಾಡಲು ಮುಂದಾದರೆ ಅಂತಹ ದಲಿತರ ಮೇಲೆ ಸುಳ್ಳು ಕೇಸುಗಳನ್ನು ಪೊಲೀಸ್ ಅಧಿಕಾರಿಗಳು ದಾಖಲಿಸುತ್ತಾರೆ. ಕರ್ತವ್ಯ ನಿರತ ಪೊಲೀಸರ ಮೇಲೆ ಮುಂದುವರೆದ ಜನಾಂಗದವರು,ಹಾಗೂ ರಾಜಕೀಯ ವ್ಯಕ್ತಿಗಳು ಹಲ್ಲೆ ನಡೆಸಿದರು ಇಲ್ಲಿನ ಪೊಲೀಸ್ ಅಧಿಕಾರಿಗಳು ರಾಜಿ ಸಂಧಾನ ಮಾಡಲು ಮುಂದಾಗುತ್ತಾರೆ, ಬಡವರಿಗೊಂದು ನ್ಯಾಯ ಶ್ರೀಮಂತರಿಗೆ ಒಂದು ನ್ಯಾಯವೇ ಎಂದು ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ .
ಪೊಲೀಸ್ ಪೇದೆ ಶೌಕತ್ ಮೇಲೆ ಹಲ್ಲೆ ನಡೆಸಿದವರು ವೈ ಎನ್ ಹೊಸಕೋಟೆಯಲ್ಲಿ ಲೈಸನ್ಸ್ ಇಲ್ಲದೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರಿದ್ದಾರೆ.