ತುಮಕೂರು:
ವಾದ್ಯಗಾರರ ಸಂಘ ತನ್ನ ವೃತ್ತಿಯಲ್ಲಿ ತೊಡಗಿರುವ ಕುಲಕಸುಬುದಾರರು, ಅಶಕ್ತರನ್ನು ಗುರುತಿಸಿ ಅವರಿಗೆ ಸಹಕಾರಿಯಾಗುವಂತೆ ಹಟ್ಟಿಲಕ್ಕಮ್ಮ ದೇವಿ ಪ್ರಧಾನ ಅರ್ಚಕರಾದ ಗೋಪಾಲಸ್ವಾಮಿ ಅವರು ಹೇಳಿದರು.
ನಗರದ ಗೋಕುಲ ಬಡಾವಣೆಯಲ್ಲಿ ಗುರುವಾರ ನಡೆದ ಜಿಲ್ಲಾ ರಂಗಭೂಮಿ ವಾದ್ಯಗಾರರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ತುಮಕೂರು ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಜಿಲ್ಲಾ ರಂಗಭೂಮಿ ವಾದ್ಯಗಾರರ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಸಂಘವು ಹೆಚ್ಚಿನ ಚಟುವಟಿಕೆಗೆ ಒತ್ತು ನೀಡಿ, ಅಶಕ್ತರು, ನೊಂದವರಿಗೆ ಧ್ವನಿಯಾಗಲಿ ಎಂದು ಹೇಳುತ್ತ ಸಂಘಕ್ಕೆ ಶುಭ ಹಾರೈಸಿದರು.
ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷರಾದ ಡಿ.ಶಿವಮಹದೇವಯ್ಯ ಅವರು ಮಾತನಾಡುತ್ತ, ಜಿಲ್ಲಾ ರಂಗಭೂಮಿ ಕಲಾವಿದರ ಬಳಕ, ಜಿಲ್ಲಾ ರಂಗಭೂಮಿ ವಾದ್ಯಗಾರರ ಕ್ಷೇಮಾಭಿವೃದ್ಧಿ ಸಂಘಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳುತ್ತ, ವಾದ್ಯಗಾರರ ಸಂಘ ಜಿಲ್ಲೆಯ ಎಲ್ಲ ವಾದ್ಯಗಾರರನ್ನು ಒಗ್ಗೂಡಿಸಿ, ಜಿಲ್ಲೆಯಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸಲಿ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷರಾದ ಲಕ್ಷ್ಮೀನಾರಾಯಣ್ ಮಾತನಾಡುತ್ತ ನಾವುಗಳು ಎಷ್ಟೇ ವಿದ್ವತ್ ಹಾಗೂ ಪಾಂಡಿತ್ಯ ಹೊಂದಿ ಮನೆಯಲ್ಲಿದ್ದರೆ ಈ ವೇದಿಕೆ ಸೃಷ್ಠಿಯಾಗುತ್ತಿರಲಿಲ್ಲ, ಕಲಾವಿದರು ಗಳು ಒಂದು ತಂಡವನ್ನು ರಚನೆ ಮಾಡಿಕೊಂಡು ಅವರಿಗೆ ಬೇಕಾದಂತಹ ವಾದ್ಯಗಾರರು ಹಾಗೂ ಕಲಾವಿದರನ್ನು ಆಯ್ಕೆ ಮಾಡಿ, ನಾವು ಕೇಳಿದಷ್ಟು ಸಂಭಾವನೆ ನೀಡಿ ನಮ್ಮನ್ನು ಪೂಜ್ಯ ಮನೋಭಾವನೆಯಿಂದ ಗುರುಗಳ ಸ್ಥಾನದಲ್ಲಿ ನೋಡುತ್ತಿದ್ದಾರೆ. ಕಲಾವಿದರು, ವಾದ್ಯಗಾರರ ಅನ್ನದಾತರಾಗಿದ್ದಾರೆ ಎಂದರು.
ಪ್ರತಿಯೊಂದು ಕಲೆ ಹಾಗೂ ಸಂಸ್ಕಾರದಿಂದ ಹೆಸರುಗಳಿಸಬೇಕೆಂದರೆ ಅದು ಸಂಗೀತಗಾರ ರಿಂದಲೇ, ಎಲ್ಲ ಪ್ರಕಾರಗಳು ಸಹ ಸಂಗೀತವನ್ನೇ ಆಧಾರವನ್ನಾಗಿಸಿಕೊಂಡಿವೆ ಅದಕ್ಕಾಗಿ ವರ ನಟ ಡಾ.ರಾಜ್‍ಕುಮಾರ್ ಅವರು ಸಂಗೀತಗಾರರಿಗೆ ಗೌರವ ಕೊಡುತ್ತಿದ್ದರು, ವಾದ್ಯಗಾರರು ಮತ್ತು ಮೇಕಪ್ ಅವರಿಂದಲೇ ಕಲಾವಿದರು ಗುರುತಿಸಿಕೊಳ್ಳುತ್ತಾರೆ, ಅವರ ಸೇವೆಯನ್ನು ಸ್ಮರಿಸಿಕೊಳ್ಳುತ್ತಲೇ ಕಲಾವಿದರು ಗೌರವ ಕೊಡುತ್ತಿದ್ದರು ಎಂದು ನಾಗಾರ್ಜುನ ಕಲಾಸಂಘದ ಅಧ್ಯಕ್ಷ ನರಸಿಂಹಮೂರ್ತಿ ಅವರು ಹೇಳಿದರು.
ಜಿಲ್ಲಾ ರಂಗಭೂಮಿ ವಾದ್ಯಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚೆಲುವರಾಜು ಮಾತನಾಡಿ ಕೊರೋನಾ ಮಹಾಮಾರಿ ಎದುರಾದ ಸಂದರ್ಭದಲ್ಲಿ ಅಶಕ್ತರಾದ ಕಲಾವಿದರು ಹಾಗೂ ವಾದ್ಯಗಾರರಿಗೆ ನಮ್ಮ ಒಂದು ತಂಡ ಕಟ್ಟಿಕೊಂಡು, ಅವರಿಗೆ ನಮ್ಮ ಕೈಲಾದ ಸಹಾಯವನ್ನು ನೀಡಲು ಸಹಕರಿಸಿದ ಕಲಾವಿದರಿಗೆ ಧನ್ಯವಾದ ತಿಳಿಸಿ, ಈ ಸಂಘ ಅಸ್ತಿತ್ವಕ್ಕೆ ಬರಲು ಸಹಕಾರಿಯಾದ ಜಿಲ್ಲೆ ಎಲ್ಲ ವಾದ್ಯಗಾರರು ಹಾಗೂ ಕಲಾವಿದರಿಗೆ ಶುಭಾಶಯ ತಿಳಿಸಿ, ಸಂಘದ ಬೆಳವಣಿಗೆಗೆ ಸಹಕಾರ ನೀಡುವಂತೆ ಕೋರಿದರು.
ಇದೇ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಶೆಟ್ಟಳಪ್ಪ, ಹಿರಿಯ ರಂಗಭೂಮಿ ಕಲಾವಿದರಾದ ಶ್ರೀಮತಿ ಮಂಜುಳಾ, ಶ್ರೀಮತಿ ತಾರಾ, ಪತ್ರಕರ್ತ ಪರಮೇಶ್ ಅವರನ್ನು ಸೇರಿದಂತೆ ಮತ್ತಿತರರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಾಟಕ ಅಕಾಡಮಿ ಸದಸ್ಯ ಸದಾಶಿವಯ್ಯ, ಎಂ.ವಿ.ನಾಗಣ್ಣ ಮಾತನಾಡಿದರು, ವೈ.ಎನ್.ಶಿವಣ್ಣ ರಂಗಗೀತೆ ಹಾಡುವ ಮೂಲಕ ಮೆರಗು ತಂದರು. ಹಿರಿಯ ಸಂಗೀತ ನಿರ್ದೇಶಕರಾದ ಐ.ಎಲ್.ರಂಗಸ್ವಾಮಯ್ಯ, ಕಲಾವಿದರಾದ ಇರಕಸಂದ್ರ ಜಗನ್ನಾಥ್, ಪೊಲೀಸ್ ನಾಗರಾಜು, ವಸಂತ್‍ಕುಮಾರ್, ಮಾರ್ಕೆಟ್ ಚಂದ್ರಪ್ಪ, ಗೋಪಿನಾಥ್ ಸೇರಿದಂತೆ ಇತರರು ಹಾಜರಿದ್ದರು, ವಾದ್ಯಗಾರರ ಸಂಘದ ಕಾರ್ಯದರ್ಶಿ ಸಂಗೀತ ನಿರ್ದೇಶಕ ಪ್ರವೀಣ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಕಲಾವಿದರು ಹಾಜರಿದ್ದರು.