ತುಮಕೂರು:
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಎನ್.ಐ.ಸಿ.ಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಮೇಲ್ವಿಚಾರಕಿಯರಿಗೆ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ ಕುರಿತು ವಿಡಿಯೋ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಗೌರವಾನ್ವಿತ ನ್ಯಾಯಾಧೀಶರಾದ ರಾಘವೇಂದ್ರ ಶೆಟ್ಟಿಗಾರ್ ಸಂವಾದದಲ್ಲಿ ಭಾಗವಹಿಸಿ ಮಾತನಾಡುತ್ತಾ, ಕೋವಿಡ್-19ರ ಅಂಗವಾಗಿ ಸಭೆ ಸಮಾರಂಭಗಳನ್ನು ಮಾಡಲಾಗದ ಕಾರಣ ಸೆಪ್ಟೆಂಬರ್ 1 ರಿಂದ 7 ರವರೆಗೆ “ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ”ವನ್ನು ಹಮ್ಮಿಕೊಳ್ಳಲಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರು ಈ ಸಪ್ತಾಹದಲ್ಲಿ ಗರ್ಭಿಣಿ, ಬಾಣಂತಿಯರು ಮತ್ತು ಮಕ್ಕಳ ಪೋಷಕರ ಮನೆ-ಮನೆಗೆ ತೆರಳಿ ಪೌಷ್ಟಿಕ ಆಹಾರದ ಮಹತ್ವ ಕುರಿತು ಜಾಗೃತಿ ಮೂಡಿಸಬೇಕು. ಮಗು ಜನಿಸಿದ 1 ಗಂಟೆಯೊಳಗಾಗಿ ತಾಯಿಯ ಎದೆ ಹಾಲನ್ನು ಉಣಿಸಿದರೆ ಆಗುವ ಮಹತ್ವದ ಬಗ್ಗೆ, 6 ತಿಂಗಳ ತನಕ ತಾಯಿಯ ಎದೆ ಹಾಲನ್ನು ಮಾತ್ರ ನೀಡುವ ಬಗ್ಗೆ, 6 ತಿಂಗಳ ನಂತರ ತಾಯಿಯ ಎದೆ ಹಾಲಿನ ಜೊತೆಗೆ ಮೇಲು ಆಹಾರವನ್ನು ಪ್ರಾರಂಭಿಸುವ ಬಗ್ಗೆ ಜಾಗೃತಿ ಮೂಡಿಸಬೇಕು. ಸ್ಥಳೀಯವಾಗಿ ಸಿಗುವ ಹಸಿರು ಸೊಪ್ಪು, ತರಕಾರಿ ಹಾಗೂ ಹಣ್ಣು-ಹಂಪಲುಗಳನ್ನು ಯತ್ತೇಚ್ಛವಾಗಿ ಉಪಯೋಗಿಸುವಂತೆ ಅರಿವು ಮೂಡಿಸಬೇಕೆಂದು ತಿಳಿಸಿದರು.
ವೀಡಿಯೋ ಸಂವಾದಲ್ಲಿ ಹಾಜರಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್ ಮಾತನಾಡಿ, ಅಪೌಷ್ಠಿಕತೆ ತಗ್ಗಿಸಲು ಅಗತ್ಯವಿರುವ ಸಮತೋಲನ ಆಹಾರಗಳಾದ ತರಕಾರಿ, ಹಾಲು, ಮೊಸರು, ಮಜ್ಜಿಗೆ, ಮೊಟ್ಟೆ, ಮಾಂಸ, ಮೀನು ಹಾಗೂ ಮುಖ್ಯವಾಗಿ ಬೆಳೆಕಾಳುಗಳನ್ನು ಉಪಯೋಗಿಸಬೇಕು. ಅಂಗನವಾಡಿ ಮತ್ತು ಪೋಷಕರ ಮನೆಗಳ ಹಿತ್ತಲಿನಲ್ಲಿ ಕರಿಬೇವು, ಪಪ್ಪಾಯ, ನುಗ್ಗೆ, ಸೀಬೆ ಮುಂತಾದ ಹಣ್ಣಿನ ಗಿಡಗಳನ್ನು ಬೆಳೆಸಿ ಉಪಯೋಗಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಕರೆ ನೀಡಿದರು.
ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಎನ್.ಐ.ಸಿ. ಸಂಸ್ಥೆಯ ಮುಖ್ಯಸ್ಥರಾದ ಅಜಯ್‍ಕುಮಾರ್ ಹಾಗೂ ಜಿಲ್ಲಾ ನಿರೂಪಣಾಧಿಕಾರಿ ಎಂ.ಎಸ್. ಶ್ರೀಧರ್, ಮತ್ತಿತರರು ಹಾಜರಿದ್ದರು.