ಬೆಂಗಳೂರು:
ಸಚಿವ ರಮೇಶ್ ಜಾರಕಿಹೊಳಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವಿಷಯದ ಕುರಿತು ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಇಂದು ವಿಧಾನಸೌಧದಲ್ಲಿ ಸಿಎಂ ಕುಮಾರಸ್ವಾಮಿ ಈ ವಿಷಯದ ಕುರಿತು ಸ್ಪಷ್ಟನೆ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆ ವದಂತಿಯಷ್ಟೇ, ಅವರು ಸಂಪುಟ ಸಭೆಗೆ ಹಾಜರಾಗಿದ್ದರು. ರಮೇಶ್ ರಾಜೀನಾಮೆ ಕೊಟ್ಟಿಲ್ಲ. ಅಲ್ಲದೇ 16 ಮಂದಿ ರಾಜೀನಾಮೆ ನೀಡಲಿದ್ದಾರೆ ಎಂಬುದು ಗಾಳಿಸುದ್ದಿ ಎಂದು ಅವರು ತಿಳಿಸಿದ್ದಾರೆ.
ಇನ್ನೊಂದೆಡೆ, ಬೆಳಗಾವಿಯಲ್ಲಿ ಮಾತನಾಡಿರುವ ಸ್ಪೀಕರ್ ರಮೇಶ್ಕುಮಾರ್, ” ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿಲ್ಲ. ಅವರಿಂದ ಅಂಥ ಪತ್ರವೂ ನನಗೆ ಬಂದಿಲ್ಲ. ಇದು ವದಂತಿಯಷ್ಟೇ,” ಎಂದು ತಿಳಿಸಿದ್ದಾರೆ.
ಕಬ್ಬು ಬೆಳೆಗಾರರ ಸಮಸ್ಯೆಯನ್ನು ರಮೇಶ್ ಜಾರಕಿಹೊಳಿ ಅವರು ಅಲಿಸಲಿಲ್ಲ ಎಂಬ ಕಾರಣಕ್ಕೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಸಂಪುಟ ಸಭೆ ನಡೆಯುತ್ತಿರುವಾಗಲೇ ಜಾರಕಿಹೊಳಿ ಅವರನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಕೋಪಗೊಂಡ ರಮೇಶ್ ಜಾರಕಿಹೊಳಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂಬ ಸುದ್ದಿ ಸಂಜೆ 4 ಗಂಟೆ ಸುಮಾರಿನಲ್ಲಿ ವ್ಯಾಪಕವಾಗಿ ಹರಡಿತ್ತು. ಆದರೆ, ಈಗ ಮುಖ್ಯಮಂತ್ರಿಯೇ ಈ ವಿಚಾರವನ್ನು ಅಲ್ಲಗೆಳೆದಿದ್ದಾರೆ.