ತುಮಕೂರು:

     ಕೊರೊನ ಲಾಕ್‍ಡೌನ್ ಮತ್ತು ಸ್ಮಾರ್ಟ್‍ಸಿಟಿ ಕಾಮಗಾರಿಯಿಂದಾಗಿ ಖಾಸಗಿ ಬಸ್ ನಿಲ್ದಾಣದಲ್ಲಿ ಕಳೆದ ಐದಾರು ತಿಂಗಳಿಂದ ಯಾವುದೇ ವ್ಯಾಪಾರ ವಹಿವಾಟು ನಡೆಯದೇ ಇರುವುದರಿಂದ ಮಾರ್ಚ್ ನಿಂದ ಆಗಸ್ಟ್ ತಿಂಗಳವರೆಗೆ ವಾಣಿಜ್ಯ ಮಳಿಗೆಗಳ ಬಾಡಿಗೆ ಮನ್ನಾ ಮಾಡುವಂತೆ ವ್ಯಾಪಾರಿಗಳು ಮನವಿ ಮಾಡಿದ್ದಾರೆ.

      ಹರಾಜಿನ ಮೂಲಕ ಮಳಿಗೆಗಳನ್ನು ಬಾಡಿಗೆ ಪಡೆದ ಕೆಲವೇ ದಿನಗಳಲ್ಲಿ ಕೊರೊನ ಸೋಂಕು ವ್ಯಾಪಿಸಿ ಲಾಕ್‍ಡೌನ್ ಹೇರಲಾಯಿತು. ಜೊತೆಗೆ ಸ್ಮಾರ್ಟ್‍ಸಿಟಿ ಯೋಜನೆಯಡಿ ಅಶೋಕ ರಸ್ತೆ ಮತ್ತು ಖಾಸಗಿ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿದೆ.

      ಹೀಗಾಗಿ ಖಾಸಗಿ ಬಸ್‍ಗಳ ಓಡಾಟವೂ ಇಲ್ಲವಾಗಿ ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿತು. ಖಾಸಗಿ ಬಸ್ ನಿಲ್ದಾಣದಲ್ಲಿ ಇರುವ ಮಳಿಗೆಗಳಿಗೆ 10 ರಿಂದ 50 ಸಾವಿರ ರೂಪಾಯಿ ಬಾಡಿಗೆ ನಿಗದಿಪಡಿಸಿದೆ. ಬಾಡಿಗೆ ಪಡೆದ ಆರಂಭದಿಂದಲೇ ಸಂಕಷ್ಟಕ್ಕೆ ಸಿಲುಕಿದ್ದರಿಂದ ವ್ಯಾಪಾರವನ್ನೇ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಆರು ತಿಂಗಳ ಬಾಡಿಗೆ ಮನ್ನಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

      ಲಾಕ್‍ಡೌನ್‍ಗೂ ಮುಂಚೆಯೇ ವ್ಯಾಪಾರ ನಡೆಯದೆ ಹಲವು ಅಂಗಡಿಗಳನ್ನು ಮುಚ್ಚಿದ್ದವು. ಈಗ ವ್ಯಾಪಾರ ನಡೆಯದಿರುವುದರಿಂದ ಬಾಡಿಗೆ ಹಣ ಹೊಂದಿಸುವುದು ಹೇಗೆ? ವ್ಯಪಾರವನ್ನೇ ನಂಬಿ ಜೀವನ ಸಾಗಿಸುತ್ತಿದ್ದ ನಮಗೆ ಈಗ ವ್ಯಾಪಾರವಿಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ.

      ಆದ್ದರಿಂದ ಬಾಡಿಗೆ ಮನ್ನ ಮಾಡುವಂತೆ ಪಾಲಿಕೆ ಆಯುಕ್ತರಿಗೂ ಮನವಿ ಸಲ್ಲಿಸಿದ್ದೇವೆ. ಹಾಗಾಗಿ ನಮ್ಮ ಮನವಿಗೆ ಪಾಲಿಕೆ ಸ್ಪಂದಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸುತ್ತೇವೆ ಎಂದು ವ್ಯಾಪಾರಿಗಳಾದ ಫೌಸಿಯಾ ಖಾನಂ, ಎಸ್.ಗೀತಾ, ಮಂಜುನಾಥ್, ಸುಧಾಕರ್ ಸೇರಿದಂತೆ 60 ವ್ಯಾಪಾರಿಗಳು ಎಚ್ಚರಿಕೆ ನೀಡಿದ್ದಾರೆ.

(Visited 10 times, 1 visits today)