ತುಮಕೂರು:
ಇಂದು ನಾವೆಲ್ಲರೂ ಪರಿಸರದ ಶ್ರೀರಕ್ಷೆಯಲ್ಲಿದ್ದೇವೆ. ಪರಿಸರ ತುಂಬಾ ಮಹತ್ವದ್ದು, ಪರಸ್ಪರ ದೇವೋಭವ ಎಂದು ಹೇಳುವ ಹಾಗೆ ಪರಿಸರ ದೇವೋಭವ ಎಂದು ಹೇಳಬೇಕಾದ ಕಾಲಘಟ್ಟವಿದು. ಪರಿಸರವನ್ನು ನಾವು ಕಾಪಾಡಿದರೆ, ಪರಿಸರ ನಮ್ಮನ್ನು ಕಾಪಾಡುತ್ತದೆ ಎಂದು ಹಿರೇಮಠಾಧ್ಯಕ್ಷರಾದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಬೊಮ್ಮನಹಳ್ಳಿ ಸಿದ್ಧಗಿರಿ ಶನೇಶ್ಚರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಕೆ.ಎಚ್.ಶಿವಕುಮಾರ್ (ಬಂಡೆಕುಮಾರ್) ಅವರ 40ನೇ ಜನ್ಮದಿನಾಚರಣೆ ಅಂಗವಾಗಿ ಗುರುವಾರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೊಮ್ಮನಹಳ್ಳಿ ಸಿದ್ಧಗಿರಿ ಶನೇಶ್ಚರ ದೇವಸ್ಥಾನದ ಸನ್ನಿಧಾನದಲ್ಲಿ ವೃಕ್ಷವನ್ನು ಆರೋಪಣ ಮಾಡುವಂತಹ ಕಾರ್ಯಕ್ರಮವನ್ನು ಬಂಡೆ ಕುಮಾರ್ ಅವರು ಮಾಡಿದ್ದಾರೆ. ಇದು ಅವರ ಪರಿಸರ ಪ್ರೇಮ, ಪರಿಸರ ಕಾಳಜಿಯನ್ನು ತೋರಿಸುತ್ತದೆ ಎಂದರು.
ಪರಿಸರ ಕಾಳಜಿಯನ್ನು ಹೊಂದಿರುವ ಬಂಡೆ ಕುಮಾರ್ ಅವರು, ಈ ಹಿಂದೆಯೂ ಕೂಡ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಮೀಪ ಸಸಿ ಆರೋಪಣವನ್ನು ನಮ್ಮ ಕಡೆಯಿಂದಲೇ ಮಾಡಿಸಿದ್ದರು. ಹೀಗೆ ಒಂದಲ್ಲಾ ಒಂದು ಸೃಜನಾತ್ಮಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.
ಇಲ್ಲಿರುವ ಶನಿಮಹಾತ್ಮ ದೇವಸ್ಥಾನ ಅತ್ಯಂತ ಪವಿತ್ರವಾದ ದೇವಸ್ಥಾನವಾಗಿದ್ದು, ಬಹಳ ಬೃಹದಾಕಾರವಾಗಿದೆ. ಈ ದೇವಸ್ಥಾನಕ್ಕೆ ಇನ್ನೂ ಪ್ರಸಿದ್ಧಿ, ಪ್ರಚಾರ ಸಿಗಬೇಕಾಗಿದೆ. ಇಷ್ಟೊಂದು ಭವ್ಯವಾದ ಶನಿಮೂರ್ತಿಯನ್ನು ನಾನು ಇದುವರೆಗೂ ನೋಡಿಲ್ಲ, ಬಹಳ ಅದ್ಬುತವಾದ ವಿಗ್ರಹವಾಗಿದೆ, ಅತ್ಯಂತ ತೇಜಸ್ವಿಯಾಗಿದೆ. ಇಂತಹ ದೇವಸ್ಥಾನದ ಸನ್ನಿಧಾನದಲ್ಲಿ ಇಂದು ಒಳ್ಳೆಯ ಕಾರ್ಯಕ್ರಮ ನಡೆಯುತ್ತಿದೆ. ಬಂಡೆ ಕುಮಾರ್ ಅವರು ಮುಂಬರುವ ದಿನಗಳಲ್ಲಿ ಈ ರೀತಿ ಇನ್ನಷ್ಟು ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜಶೀಲರಾಗಿ ಸಮಾಜೋಪಾದಿಯಲ್ಲಿ ಕೆಲಸವನ್ನು ನಿರ್ವಹಿಸಲಿ ಎಂದು ಹಾರೈಸಿದರು.
ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಕೆ.ಹೆಚ್.ಶಿವಕುಮಾರ್ (ಬಂಡೆಕುಮಾರ್) ಮಾತನಾಡಿ, ಕೊರೋನಾ ಸೋಂಕಿನ ಹಿನ್ನೆಲೆ ತನ್ನ 40ನೇ ಹುಟ್ಟುಹಬ್ಬವನ್ನು ಬೊಮ್ಮನಹಳ್ಳಿ ಸಿದ್ಧಗಿರಿ ಶನೇಶ್ಚರ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಗಿಡ ನೆಡುವ ಮೂಲಕ ಪರಿಸರ ರಕ್ಷಣೆ ಮಾಡುವ ಬಗ್ಗೆ ಜನತೆಗೆ ತಿಳಿಸುವ ಉದ್ಧೇಶದೊಂದಿಗೆ ಸರಳವಾಗಿ ಆಚರಿಸಿಕೊಳ್ಳುತ್ತಿದ್ದೇನೆ ಎಂದರು.
ಸಮಾಜದ ಒಳಿತಿಗಾಗಿ ನಾವು ಏನನ್ನಾದರೂ ಮಾಡಲೇಬೇಕು, ನಮ್ಮ ಹುಟ್ಟು ಸಾವಿನ ಮಧ್ಯೆ ನಾವು ಒಂದಾದರೂ ಒಳ್ಳೆಯ ಕೆಲಸ ಮಾಡಬೇಕು. ಆ ಕೆಲಸ ಶಾಶ್ವತವಾಗಿ ಇತರರ ಮನದಲ್ಲಿ ಉಳಿಯುವಂತಾಗಬೇಕು. ಈ ನಿಟ್ಟಿನಲ್ಲಿ ಶನೇಶ್ಚರ ಸನ್ನಿಧಾನದಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸಕ್ಕೆ ಮುಂದಾಗಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮೂರ್ತಿ, ಯಲ್ಲೇಶ್‍ಗೌಡ ಇದ್ದರು.