ಕೊರಟಗೆರೆ:

      ದೇವರಾಯನದುರ್ಗ ಸಮೀಪದ ಇತಿಹಾಸವುಳ್ಳ ಜರಿಬೆಟ್ಟ ವನ್ಯಜೀವಿಗಳ ಆವಾಸಸ್ಥಾನ. ಪಿತ್ರಾರ್ಜಿತ ಆಸ್ತಿಯನ್ನು ಭೂಸ್ವಾಧೀನ ಮಾಡಿಕೊಳ್ಳಲು ರೈತರ ಒಪ್ಪಿಗೆ ಇಲ್ಲದೇ ಅನಧಿಕೃತವಾಗಿ ಭೂಸ್ವಾಧೀನ ಪೂರ್ಣಗೊಂಡಿದೆ. ಖಾಸಗಿ ಕಂಪನಿ ನೀಡುವ ಚಿಲ್ಲರೇ ಕಾಸು ನಮಗೆ ಬೇಡ. ನಮಗೆ ನಮ್ಮ ಕೃಷಿ ಭೂಮಿಯೇ ಸಾಕು. ನಾವು ನಮ್ಮ ಪ್ರಾಣವನ್ನು ಬೇಕಾದರೇ ಬಿಡ್ತೀವಿ. ಆದರೆ ನಮ್ಮ ಕೃಷಿ ಭೂಮಿಯನ್ನು ಮಾತ್ರ ಬಿಡೆವು ಎಂಬುದು ರೈತರ ಮನದಾಳದ ನೋವಾಗಿದೆ.

      ಕಲ್ಪತರು ನಾಡು ತುಮಕೂರು ಗ್ರಾಮಾಂತರ ಮತ್ತು ಕೊರಟಗೆರೆ ಕ್ಷೇತ್ರದ ನಡುವಿನ ತಂಗನಹಳ್ಳಿ ಜರಿಬೆಟ್ಟದಲ್ಲಿ ಗಣಿಗಾರಿಕೆ ನಡೆಸಲು 49ಎಕರೇ ಕೃಷಿ ಜಮೀನು ಭೂಸ್ವಾಧೀನಕ್ಕಾಗಿ ಕಳೆದ 2ವರ್ಷದಿಂದ ವಿವಿಧ ರೀತಿಯ ಕಸರತ್ತು ನಡೆಯುತ್ತಿದೆ. ಎತ್ತಿನಹೊಳೆಗೆ ಜಮೀನು ಹೋಗಲಿದೆ. ಜಮೀನು ಅಭಿವೃದ್ಧಿ ಪಡಿಸಿ ಕೊಳವೆಬಾವಿ ಹಾಕಿಸುತ್ತೇವೆ. ಕೃಷಿಗೆ ಸಹಾಯ ಮಾಡ್ತೇವೆ ಎಂದು ಲಕ್ಷಾಂತರ ರೂ ಹಣದ ಆಸೆ ತೋರಿಸಿ ಕೃಷಿ ಭೂಮಿ ಕಬಳಿಸುವ ಯತ್ನ ಈಗಾಗಲೇ ನಡೆದಿದೆ.

      ರೈತರಿಂದ ಕೃಷಿ ಜಮೀನು ಕಬಳಿಸುವ ಯತ್ನ ವಿಫಲವಾದ ಪರಿಣಾಮ ಸರಕಾರದ ಸಹಾಯ ಮತ್ತು ಇಲಾಖೆಗೆ ಅಧಿಕಾರ ಬಳಸಿಕೊಂಡು ಖಾಸಗಿ ಕಂಪನಿ ತಂಗನಹಳ್ಳಿ ರೈತರಿಗೆ ಭೂಸ್ವಾಧೀನ ಪ್ರಕ್ರಿಯೆಗೆ ಎರಡು ಸಲ ನೊಟೀಸ್ ಜಾರಿ ಮಾಡಿದೆ. ರೈತಸಂಘದ ಜೊತೆ ರೈತಾಪಿವರ್ಗ ಜಿಲ್ಲಾಧಿಕಾರಿ ಮತ್ತು ಭೂಸ್ವಾಧೀನ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದರೂ ಸಹ ರೈತರ ವಿರೋಧದ ನಡುವೆಯು ಈಗ ಭೂಸ್ವಾಧೀನ ಪ್ರಕ್ರಿಯೆ ಮುಕ್ತಾಯಗೊಂಡಿದೆ.

      ಜರಿಬೆಟ್ಟದ ಎಡಬಾಗದಲ್ಲಿ ಎತ್ತಿನಹೊಳೆಯ ಕಾಮಗಾರಿ ಚಾಲ್ತಿಯಲ್ಲಿದೆ. ಬಲಭಾಗದಲ್ಲಿ ದೇವರಾಯನದುರ್ಗ ಅರಣ್ಯ ಪ್ರದೇಶವಿದೆ. ಮಧ್ಯೆ ಇರುವ ತಂಗನಹಳ್ಳಿಯ 49ಎಕರೇ ಕೃಷಿಭೂಮಿಯ ಮೇಲೆ ಗಣಿಮಾಲೀಕರ ಕೆಂಗಣ್ಣುಬಿದ್ದು ರೈತಾ ಪಿವರ್ಗಕ್ಕೆ ಮತ್ತು ವನ್ಯಜೀವಿಗಳ ಪರಿಸರಕ್ಕೆ ಮಾರಕವಾಗುವ ಮುನ್ಸೂಚನೆ ಕಾಣುತ್ತಿದೆ. ರಾಜಕೀಯ ನಾಯಕರು ಮತ್ತು ಸ್ಥಳೀಯ ಮುಖಂಡರ ಮೌನವು ಹಲವಾರು ರೀತಿಯ ಅನುಮಾನಕ್ಕೆ ಕಾರಣವಾಗಿ ರೈತರಿಗೆ ದಾರಿಕಾಣದಾಗಿದೆ.

      ರೈತರಿಗೆ ಭೂದರ ಸಲಹಾ ಸಮಿತಿಯ ಪತ್ರ.: ತಂಗನಹಳ್ಳಿಯ 49ಎಕರೇ ಜಮೀನನ್ನು ಬಿಕೆಜಿ ಎಂ-ಸ್ಯಾಂಡ್ ಕಂಪನಿಯ ಸ್ಥಾಪನೆಗೆ ಸರಕಾರದ ಅಧಿಸೂಚನೆಯಂತೆ ಮಂಡಳಿ ಸ್ವಾಧೀನ ಪಡಿಸಿಕೊಂಡಿದೆ. ಕೆಐಎಡಿ ಕಾಯ್ದೆಯಂತೆ ಭೂಪರಿಹಾರ ನಿಗಧಿ ಪಡಿಸಲು ಭೂದರ ಸಲಹಾ ಸಮಿತಿಯ ಸಭೆಯನ್ನು ತುಮಕೂರು ಕಚೇರಿಯಲ್ಲಿ ಕರೆಯಲಾಗಿದೆ. ರೈತರು ತಮ್ಮ ಜಮೀನಿನ ವಿವರದೊಂದಿಗೆ ಆಗಮಿಸಲು ತುಮಕೂರು ವಿಶೇಷ ಭೂಸ್ವಾಧಿನ ಅಧಿಕಾರಿಗಳ ತಂಡ ಸೆ.8ರಂದು ಗಡುವು ನೀಡಿದ್ದಾರೆ.

(Visited 5 times, 1 visits today)