ತುಮಕೂರು:

      ಕೊರೊನಾ ಮಹಾಮಾರಿಯನ್ನು ಸಮರ್ಥ ವಾಗಿ ಜಿಲ್ಲೆಯಲ್ಲಿ ಎದುರಿಸುವಲ್ಲಿ ಲ್ಯಾಬ್ ಟೆಕ್ನೀಷಿಯನ್‍ಗಳ ಪಾತ್ರ ಮಹತ್ವದ್ದಾಗಿದ್ದು, ಅವರ ಸೇವೆಯನ್ನು ಮರೆಯುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.

      ನಗರದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಕರ್ನಾಟಕ ಮೆಡಿಕಲ್ ಲ್ಯಾಬ್ ಟೆಕ್ನಾಲಾಜಿಸ್ಟ್ ಅಸೋಸಿಯೇಷನ್(ರಿ), ಬೆಂಗಳೂರು, ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಾಜಿಸ್ಟ್ ಅಸೋಸಿಯೇಷನ್(ರಿ) ತುಮಕೂರು ಹಾಗೂ ಸರಕಾರಿ ವೈದ್ಯಕೀಯ ಪ್ರಯೋಗಶಾಲಾ ಟೆಕ್ನಾಲಾಜಿಸ್ಟ್ ಸಂಘ (ರಿ) ತುಮಕೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಕೊಂಡಿದ್ದ ಕೋರೋನಾ ವಾರಿಯರ್ಸ್ ಲ್ಯಾಬ್ ಟೆಕ್ನೇಷಿಯನ್ಸ್‍ಗಳ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು,ತೆರೆಯ ಮೆರೆಯಲ್ಲಿ ನಿಮ್ಮ ಕೆಲಸ ಅವಿಸ್ಮರಣಿಯವಾದುದ್ದು ಎಂದರು.

      ಜನರ ಇತ್ತೀಚಿನ ನಡವಳಿಕೆಗಳನ್ನು ನೋಡಿದರೆ ಕೊರೊನಾ ಭಯ ಹೋದಂತೆ ಕಾಣುತ್ತಿದೆ. ಅಲ್ಲದೆ ಕೊರೊನಾ ಎಂಬುದು ಅಧಿಕಾರಿಗಳು, ರಾಜಕಾರಣಿಗಳು ಹಣ ಮಾಡಲು ಬಳಸುತ್ತಿರುವ ದಂಧೆ ಎಂಬ ತಪ್ಪು ಅಭಿಪ್ರಾಯ ಮೂಡಿ ದಂತಿದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೊರೊನಾ ತಡೆಗಟ್ಟುವಲ್ಲಿ ಭಾಗಿಯಾಗಿರುವ ಎಲ್ಲಾ ವಾರಿಯರ್ಸ್‍ಗಳು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಅಲ್ಲದೆ ಇದೊಂದು ಭಯಾನಕ ಕಾಯಿಲೆ ಎಂಬ ಅರಿವನ್ನು ಸಹ ಜನರಲ್ಲಿ ಮೂಡಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್ ತಿಳಿಸಿದರು.

      ಆರಂಭದಲ್ಲಿ ನಮಗೆ ಆತಂಕ ಇತ್ತು. ಆದರೆ ಪ್ರಯೋಗಾಲಯ ತಂತ್ರಜ್ಞರ ಅಭಯ ಸಿಕ್ಕ ನಂತರ,ಲ್ಯಾಭ್‍ಗಳನ್ನು ವಿಸ್ತರಿಸಿ, ಇಲ್ಲಿಯೇ ಸ್ವಾಬ್ ತೆಗೆದು ಪರೀಕ್ಷೆಗೆ ಒಳಪಡಿಸುವ ಕಾರ್ಯಕ್ಕೆ ಮುಂದಾದೆವು.ಇಂದು ತಿಪಟೂರಿನಲ್ಲಿಯೂ ಲ್ಯಾಬ್‍ತೆಗೆದು ಜನರಿಗೆ ಸೇವೆ ಒದಗಿಸಲು ಮುಂದಾಗಿದ್ದೇವೆ. ಈ ಎಲ್ಲಾ ಕಾರ್ಯಗಳು ಸಾಧುವಾಗಿದ್ದು ನಿಮ್ಮಿಂದ. ಅದಕ್ಕಾಗಿ ನಿಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದೆಯೂ ನಮ್ಮೊಂದಿಗೆ ಕೈಜೋಡಿಸಿ ಕೆಲಸ ಮಾಡುವ ಮೂಲಕ ಜಿಲ್ಲೆಯನ್ನು ಕೋರೋನಾ ಮುಕ್ತ ಮಾಡಲು ಶ್ರಮಿಸೋಣ ಎಂಬ ಆಶಯವನ್ನು ಜಿಲ್ಲಾಧಿಕಾರಿಗಳು ವ್ಯಕ್ತಪಡಿಸಿದರು.

      ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಮಾತನಾಡಿ, ಆರಂಭದಲ್ಲಿ ಮಹಾಮಾರಿ ಕೊರೊನಾ ಎದುರಿಸಲು ದೇಶ ಸಜ್ಜಾಗಿರಲಿಲ್ಲ. ಹಂತ ಹಂತವಾಗಿ ಇದನ್ನು ತಡೆಗಟ್ಟುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳ ಲಾಯಿತು.ಎಲ್ಲಾ ಇಲಾಖೆಗಳ ಸಹಕಾರದಿಂದ ಜಿಲ್ಲೆ ರೇಡ್‍ಜ್ಹೋನ್‍ಗೆ ಹೋಗುವುದನ್ನು ತಡೆಯಲು ಸಾಧ್ಯವಾಯಿತು. ಆದರೆ ಕೋರೋನಾ ರೋಗಿಗಳೊಂದಿಗೆ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಅನೇಕವಾಗಿ ನಮ್ಮ ಲ್ಯಾಬ್‍ಟೆಕ್ನೀಷಿಯೆನ್ಸ್‍ಗಳು ತಮ್ಮ ಆರೋಗ್ಯದ ಕಡೆ ಗಮನಹರಿಸುವುದನ್ನು ಮರೆತಿದ್ದಾರೆ. ಇದು ಆಗಬಾರದು. ಜನರ ಆರೋಗ್ಯದ ಜೊತೆಗೆ ನಿಮ್ಮ ಆರೋಗ್ಯದ ಕಡೆಗೂ ಗಮನ ನೀಡಿ ಎಂದು ಸಲಹೆ ನೀಡಿದ ಅವರು, ಈಗಾಗಲೇ ನಿಮ್ಮಗಳ ಬೇಡಿಕೆಯಂತೆ ವಾರಕ್ಕೆ ಒಂದು ದಿನ ರಜೆ ನೀಡುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುತ್ತೇನೆ.ಅಲ್ಲದೆ ನಿಮ್ಮ ಸೇವೆಯನ್ನು ತುರ್ತು ಸೇವೆ ಎಂದು ಪರಿಗಣಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಶಿಫಾರಸ್ಸು ಕಳುಹಿಸುತ್ತೇನೆ ಎಂದು ಭರವಸೆ ನೀಡಿದರು.

      ಪ್ರಾಸ್ತಾವಿಕವಾಗಿ ಮಾತನಾಡಿದ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಸ್ಟ್ ಅಸೋಸಿಯೇಷನ್ ತುಮಕೂರು ಇದರ ಅಧ್ಯಕ್ಷ ಬೆಳ್ಳಿ ಲೋಕೇಶ್, ಪ್ರಾಯೋಗಾಲಯ ತಜ್ಞರು ತಮ್ಮ ವೃತ್ತಿಯನ್ನು ತಾಯಿಯಂತೆ ಪ್ರೀತಿಸಬೇಕು. ತಮ್ಮ ಕರ್ತವ್ಯದಲ್ಲಿ ಲೋಪದೋಷ ಎಸಗದಂತೆ ಜಾಗರೂಕತೆ ಅವಶ್ಯ ಎಂದು ಕಿವಿ ಮಾತು ಹೇಳಿದ ಅವರು,ಅತಿ ಒತ್ತಡದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ತಂತ್ರಜ್ಞರಿಗೆ ವಾರದ ರಜೆ ಮಂಜೂರು ಮಾಡಬೇಕು ಹಾಗೂ ನಮ್ಮನ್ನು ತುರ್ತುಕೆಲಸ ಮಾಡುವ ಕೋರೋನಾ ವಾರಿಯರ್ಸ್ ಎಂದು ಪರಿಗಣಿಸುವಂತೆ ಜಿಲ್ಲಾಡಳಿತ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮನವಿ ಮಾಡಿದರು.

      ವೇದಿಕೆಯಲ್ಲಿ ಕರ್ನಾಟಕ ಮೆಡಿಕಲ್ ಲ್ಯಾಬ್ ಟೆಕ್ನಾಲಾಜಿಸ್ಟ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ವೆಂಕಟಸ್ವಾಮಿ, ಪ್ರಧಾನಕಾರ್ಯದರ್ಶಿ ನಾರಾಯಣಸ್ವಾಮಿ, ಪದಾಧಿಕಾರಿಗಳಾದ ಪದ್ಮಣ್ಣ, ನಾಗರಾಜು, ದ್ಯಾಮಣ್ಣ, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

      ಇದೇ ವೇಳೆ ಕೊರೊನಾ ಸಂದರ್ಭದಲ್ಲಿ ಹಗಲಿರುಳು ಪ್ರಯೋಗಾಲಯದಲ್ಲಿ ಕೆಲಸ ಮಾಡಿದ ಪ್ರಾಯೋಗಾಲಯ ತಂತ್ರಜ್ಞರನ್ನು ಅಭಿನಂದಿಸಲಾಯಿತು.

(Visited 7 times, 1 visits today)