ತುಮಕೂರು:
ಕಳೆದ ಮೂರೂವರೆ ತಿಂಗಳಿನಿಂದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಅಶೋಕ ರಸ್ತೆಯು ಸದ್ಯದಲ್ಲೇ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದ್ದು, ಬರುವ ಅಕ್ಟೋಬರ್ 10 ರಂದು ಈ ರಸ್ತೆ ಲೋಕಾರ್ಪಣೆಯಾಗಲಿದೆ.
ನಗರದ ಹೃದಯಭಾಗದಲ್ಲಿರುವ ಹಾಗೂ ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಅಶೋಕ ರಸ್ತೆಯಲ್ಲಿ ಕಳೆದ 110 ದಿನಗಳಿಂದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ಸ್ಮಾರ್ಟ್‍ಸಿಟಿ ಯೋಜನೆ ವತಿಯಿಂದ ಕೈಗೊಳ್ಳಲಾಗಿದ್ದು, ಈ ರಸ್ತೆಯ ಕಾಮಗಾರಿ ಮತ್ತು ಗುಣಮಟ್ಟವನ್ನು ಸ್ಮಾರ್ಟ್‍ಸಿಟಿ ಅಧಿಕಾರಿಗಳೊಂದಿಗೆ ಬೆಳ್ಳಂಬೆಳಿಗ್ಗೆ ಪರಿಶೀಲನೆ ನಡೆಸಿದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು, ಹಗಲು-ರಾತ್ರಿ ಕೆಲಸ ಮಾಡಿ ನಿಗದಿತ ದಿನಾಂಕದೊಳಗೆ ಗುಣಮಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸ್ಮಾರ್ಟ್‍ಸಿಟಿ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.
ಅಶೋಕ ರಸ್ತೆಯಲ್ಲಿ 110 ದಿನಗಳಿಂದ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ ಎಂದು ಅವರು ಹೇಳಿದರು.
ಕಳೆದ ಮೇ 25 ರಂದ ಈ ರಸ್ತೆ ಕಾಮಗಾರಿ ಆರಂಭ ವಾಗಿದ್ದರೂ ಸಹ ಕೊರೊನಾದಿಂದ ವಿಳಂಬವಾಯಿತು. ಆದರೂ ಸ್ಮಾರ್ಟ್‍ಸಿಟಿ ಅಧಿಕಾರಿಗಳು ನಿರಂತರವಾಗಿ ಈ ಕಾಮಗಾರಿ ಕೆಲಸದಲ್ಲಿ ತೊಡಗಿದ್ದು, ಮುಂದಿನ ತಿಂಗಳು 10 ರೊಳಗೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ತಿಳಿಸಿದ್ದಾರೆ ಎಂದರು.
ಈಗ ನಿರ್ಮಾಣವಾಗುತ್ತಿರುವ ಕಾಂಕ್ರೀಟ್ ರಸ್ತೆ ಸುಮಾರು 30 ವರ್ಷಗಳ ಕಾಲ ಸಾರ್ವಜನಿಕರ ಬಳಕೆಗೆ ಬರಲಿದೆ. ಮಧ್ಯೆ ಮಧ್ಯೆ ಯಾವುದೇ ರೀತಿಯ ಅಡಚಣೆ ಉಂಟಾಗುವುದಿಲ್ಲ. ಈ ರಸ್ತೆಯಲ್ಲಿ ಸದಾ ವಾಹನ ದಟ್ಟಣೆ ಕೂಡಿರುತ್ತದೆ. ದೊಡ್ಡ ದೊಡ್ಡ ವಾಹನಗಳ ಸಂಚಾರ ಸಹ ಇರುತ್ತದೆ ಎಂದರು.
ಆಗಿಂದಾಗ್ಗೆ ಸುರಿಯುತ್ತಿರುವ ಮಳೆಯಿಂದಾಗಿಯೂ ಈ ರಸ್ತೆ ಕಾಮಗಾರಿ ವಿಳಂಬವಾಗಿದ್ದು, ಆದರೂ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. ಮಳೆ ಬಂದರೂ ಸವಾರರಿಗೆ ಯಾವುದೇ ರೀತಿಯ ಅಡಣಚಣೆ ಯಾಗುವುದಿಲ್ಲ. ಅಷ್ಟರಮಟ್ಟಿಗೆ ರಸ್ತೆ ಕಾಮಗಾರಿ ನಡೆದಿದೆ ಎಂದರು.
ಈ ರಸ್ತೆ ಜತೆಗೆ ಡಿಸಿಸಿ ಬ್ಯಾಂಕ್, ಗುಂಚಿ ಸರ್ಕಲ್, ಹೊರಪೇಟೆ ಮೂಲಕ ಕೆಇಬಿ ಛತ್ರದ ವರೆಗೂ ಕಾಂಕ್ರೀಟ್ ರಸ್ತೆ ಕಾಮಗಾರಿ ಮಾಡಲಿದ್ದು, ಈ ರಸ್ತೆಯು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದರು.
ಮುಂದಿನ ನವೆಂಬರ್, ಡಿಸೆಂಬರ್ ಒಳಗೆ ನಗರದ ಬಹುತೇಕ ಪ್ರಮುಖ ರಸ್ತೆಗಳ ಕಾಮಗಾರಿಗಳು ಮುಗಿಯುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.
ನಾಗರಿಕರು, ಜನ ಸಾಮಾನ್ಯರು, ವ್ಯಾಪಾರಿಗಳಿಗೆ ಕಳೆದ 3 ತಿಂಗಳಿಂದ ತೊಂದರೆಯಾಗಿದೆ. ಆದರೆ ಭವಿಷ್ಯದ ದೃಷ್ಠಿಯಿಂದ ಈ ಸಮಸ್ಯೆಯನ್ನು ಸಹಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ ಎಂದರು.
ಈ ಸಂದರ್ಭದಲ್ಲಿ ಸ್ಮಾರ್ಟ್‍ಸಿಟಿಯ ಕಾರ್ಯನಿರ್ವಾಹಕ ಇಂಜಿನಿಯರ್ ಬಸವರಾಜೇಗೌಡ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಕುಮಾರ್, ಕನ್ಸಲ್ಟೆಂಟ್‍ನ ಟೀಂ ಲೀಡರ್ ಪವನ್‍ಕುಮಾರ್, ಕನ್ಸ್ಟ್ರಂಕ್ಷನ್ ವ್ಯವಸ್ಥಾಪಕ ಸಿದ್ದರಾಜು, ಎಇ ಮಂಜುನಾಥ್ ಇದ್ದರು.