ಗುಬ್ಬಿ:

      ಹಲವಾರು ವರ್ಷಗಳಿಂದ ಇತ್ಯರ್ಥವಾಗದ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಎಸ್.ಆರ್.ಶ್ರೀನಿವಾಸ್ ಎರಡು ಬಣಗಳಾಗಿದ್ದ ರೈತರೊಟ್ಟಿಗೆ ಚರ್ಚಿಸಿ ವಿಶೇಷ ಅನುದಾನದಲ್ಲಿ ಸಿಸಿ ರಸ್ತೆಯನ್ನು ನಿರ್ಮಿಸಿ ಕೊಡುವ ಭರವಸೆಯೊಂದಿಗೆ ಸುಖಾಂತ್ಯ ಕಾಣಿಸಿದರು.

      ತಾಲ್ಲೂಕಿನ ಚೇಳೂರು ಹೋಬಳಿ ಸಿ.ಹರುವೇಸಂದ್ರಪಾಳ್ಯ ಗ್ರಾಮದಲ್ಲಿ ಗಂಗಣ್ಣ ಸಹೋದರರ ಮನೆಗಳಿಗೆ ತೆರಳಲು ಇದ್ದ ರಸ್ತೆ ವಿವಾದ ತಾರಕಕ್ಕೇರಿ ನ್ಯಾಯಾಲಯ ಮೆಟ್ಟಿಲೇರಿದ್ದರು. ಈ ನಡುವೆ ಅಲ್ಲಿನ ಖರಾಬುಹಳ್ಳ ತೆರವು ಮಾಡಲು ಅರ್ಜಿ ಸಲ್ಲಿಸಲಾಗಿದ್ದ ಕಾರಣ ರಸ್ತೆಗಾಗಿ ನಡೆದ ತಿಕ್ಕಾಟಕ್ಕೆ ಹಲವಾರು ಮನೆಗಳಿಗೆ ಹೋಗಲು ರಸ್ತೆ ಇಲ್ಲವಾಗುವ ಬಗ್ಗೆ ಅರಿತು ಕೂಡಲೇ ಸ್ಥಳಕ್ಕೆ ಆಗಮಿಸಿದ ಶಾಸಕರು ಅಧಿಕಾರಿಗಳಿಂದ ಆಗಬೇಕಿದ್ದ ಹಳ್ಳ ತೆರವು ಕೆಲಸ ತಾತ್ಕಾಲಿಕವಾಗಿ ನಿಲ್ಲಿಸಿ ವಿವಾದ ಮಾಡಿಕೊಂಡ ರೈತರೊಟ್ಟಿಗೆ ಎರಡು ತಾಸು ಚರ್ಚಿಸಿ ರಸ್ತೆ, ಖರಾಬು ಸ್ಥಳಗಳನ್ನು ಪರಿಶೀಲಿಸಿ ಅಂತಿಮವಾಗಿ ಎರಡೂ ಗುಂಪುಗಳಿಂದ ಐದು ಅಡಿಗಳಂತೆ ಸ್ಥಳ ಬಿಟ್ಟುಕೊಡಬೇಕು. ಒಟ್ಟು 10 ಅಡಿಗಳೊಂದಿಗೆ ದೊಡ್ಡ ಸಿಸಿ ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದ ಬಳಿಕ ಪರಿಸ್ಥಿತಿ ಶಾಂತಗೊಂಡಿತು.

      ಭೂವಿವಾದಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಹಲವು ಗ್ರಾಮಗಳಲ್ಲಿ ಈ ಸಮಸ್ಯೆ ತಲೆದೋರಿವೆ. ತೋಟದಲ್ಲಿ ಮನೆಕಟ್ಟಿಕೊಂಡು ರಸ್ತೆ ನಿರ್ಮಾಣಕ್ಕೆ ವ್ಯಾಜ್ಯ ನಡೆದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿವೆ. ಹತ್ತಾರು ವರ್ಷಗಳಾದರೂ ಇತ್ಯರ್ಥವಾಗದೇ ಸ್ವಪ್ರತಿಷ್ಠೆಯಲ್ಲಿ ಮೆರೆಯುವ ಪ್ರಕರಣ ನೋಡಿದ್ದ ಕಾರಣ ಈ ಮುಗ್ದ ರೈತರ ಗುಂಪುಗಳನ್ನು ಒಗ್ಗೂಡಿಸಿ ಚರ್ಚಿಸಿ ಸುಮಾರು 300 ಮೀಟರ್ ಸಿಸಿ ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿ ಪರಿಸ್ಥಿತಿ ತಿಳಿಯಾಯಿತು. ಸುಮಾರು 30 ವರ್ಷದ ವಿವಾದ ಅಂತ್ಯ ಕಂಡಿದೆ ಎಂದರು.

      ಬಗರ್‍ಹುಕುಂ ಹಕ್ಕುಪತ್ರ ಮಂಜೂರಾತಿಯು ಕೊರೋನಾ ಹಿನ್ನಲೆ ಸ್ಥಗಿತಗೊಂಡಿವೆ. ಖಾತೆ ಮಾಡಿಕೊಡುವ ಸುಮಾರು 1500 ಕಡತಗಳು ಸದ್ಯದಲ್ಲಿ ಪರಿಶೀಲನೆಗೊಳ್ಳಲಿದೆ. ಈ ಜತೆಗೆ 200 ಉಳುಮೆಚೀಟಿ ವಿತರಣೆ ಶೀಘ್ರದಲ್ಲಿ ನಡೆಯಲಿದೆ. ಈ ವಾರ ಉತ್ತಮ ಮಳೆ ಕಂಡ ತಾಲ್ಲೂಕಿನಲ್ಲಿ ಕೆಲ ಸಮಸ್ಯೆಗಳಾಗಿವೆ. ರೈತರು ಖರಾಬು, ಕೋಡಿ, ರಾಜಗಾಲುವೆ, ಗೋಕಟ್ಟೆ ಹೀಗೆ ಎಲ್ಲವನ್ನೂ ಮುಚ್ಚಿ ಮಳೆ ನೀರು ಹರಿಯಲು ಸ್ಥಳವಿಲ್ಲದೇ ಎಲ್ಲಂದರಲ್ಲಿ ನೀರು ಹರಿದಿದೆ. ಈ ಪರಿಣಾಮ ಕೆಲ ಸಮಸ್ಯೆಗಳಾಗಿವೆ. ತಾಲ್ಲೂಕು ಆಡಳಿತ ಈ ಬಗ್ಗೆ ಗಮನಹರಿಸಲಿದೆ ಎಂದ ಅವರು ಡ್ರಗ್ಸ್ ದಂಧೆಯಲ್ಲಿ ಭಾಗಿಯಾದವರೂ ಯಾರೇ ಆಗಿರಲಿ ಶಿಕ್ಷೆ ನೀಡಬೇಕು. ರಾಜಕಾರಣಿಗಳ ಹೆಸರು ಕೇಳಿದರೂ ಪೊಲೀಸ್ ತನಿಖೆಗೆ ಸಹಕರಿಸಬೇಕು. ಎಲ್ಲವೂ ತಿಳಿದ ಪೊಲೀಸ್ ಇಲಾಖೆಗೆ ಫ್ರೀ ಬಿಟ್ಟರೆ ಖಂಡಿತಾ ನ್ಯಾಯ ಸಿಗಲಿದೆ ಎಂದರು.

      ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಕಾರ್ಯದರ್ಶಿ ಹರುವೇಸಂದ್ರ ಗಂಗಣ್ಣ, ಉಪತಹಸೀಲ್ದಾರ್ ವೆಂಕಟರಂಗನ್, ಕಂದಾಯ ನಿರೀಕ್ಷಕ ನಟರಾಜು, ಚೇಳೂರು ಪಿಎಸ್‍ಐ ವಿಜಯ್‍ಕುಮಾರ್ ಇತರರು ಇದ್ದರು.

(Visited 7 times, 1 visits today)