ತುಮಕೂರು:

     ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಟಾನಕ್ಕೆ ಆಗ್ರಹಿಸಿ ಮಾದಿಗ ದಂಡೋರ-ಎಂಆರ್‍ಹೆಚ್ಎಸ್ ವತಿಯಿಂದ ನಗರದಲ್ಲಿರುವ ಇಬ್ಬರು ಶಾಸಕರುಗಳ ಮನೆ ಮುಂದೆ ಇಂದು ಧರಣಿ ಸತ್ಯಾಗ್ರಹ ನಡೆಸಲಾಯಿತು.

ಮಾದಿಗ ದಂಡೋರ-ಎಂಆರ್‍ಹೆಚ್ಎಸ್‍ನ ರಾಜ್ಯ ವಕ್ತಾರ ರಾಘವೇಂದ್ರಸ್ವಾಮಿ, ಜಿಲ್ಲಾಧ್ಯಕ್ಷ ಜೆ.ಸಿ. ರಾಜಣ್ಣ ನೇತೃತ್ವದಲ್ಲಿ ಸಮಾವೇಶಗೊಂಡ ದಂಡೋರದ ಪದಾಧಿಕಾರಿಗಳು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಹಾಗೂ ನಗರದಲ್ಲಿ ವಾಸವಿರುವ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು.

ಒಳ ಮೀಸಲಾತಿ ಜಾರಿ ಸಂಬಂಧ ಸುಪ್ರೀಂ ಕೋರ್ಟ್‍ನ ಪಂಚ ನ್ಯಾಯಮೂರ್ತಿಗಳ ಪೀಠದ ತೀರ್ಪಿನಂತೆ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಶಾಸನ ಸಭೆಯಲ್ಲಿ ಅಂಗೀಕರಿಸಬೇಕು. ಈ ಕುರಿತು ಶಾಸಕರುಗಳು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ನಂತರ ಇಬ್ಬರು ಶಾಸಕರಿಗೆ ಪ್ರತ್ಯೇಕವಾಗಿ ಮಾದಿಗ ದಂಡೋರದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿದ ಶಾಸಕರಾದ ಜ್ಯೋತಿಗಣೇಶ್ ಹಾಗೂ ಎಸ್.ಆರ್. ಶ್ರೀನಿವಾಸ್ ಅವರು ಈ ಸಂಬಂಧ ಅಧಿವೇಶನದಲ್ಲಿ ಧ್ವತಿ ಎತ್ತಿ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.

ಪ್ರತಿಭಟನಾ ಧರಣಿಯಲ್ಲಿ ದಂಡೋರದ ಯೋಗಾನಂದ ಮಾಗೋಡು, ಜೆಸಿಬಿ ವೆಂಕಟೆಶ್, ಮಹದೇವು ಕೋಡಿಯಾಲ, ನಾಗರಾಜು, ಸತೀಶ್, ಗಂಗಣ್ಣ ಮತ್ತಿತರರು ಪಾಲ್ಗೊಂಡಿದ್ದರು.

 

(Visited 9 times, 1 visits today)