ಗುಬ್ಬಿ:
ಕಳೆದ 34 ವರ್ಷದ ನಂತರ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಕೇಂದ್ರ ಸರ್ಕಾರದ ಚಿಂತನೆಯು ಭಾರತೀಯ ಪರಂಪರೆ, ಸಂಸ್ಕøತಿಯನ್ನು ಅಳವಡಿಸುವ ಪಠ್ಯಕ್ರಮವಾಗಿದೆ. ಯಾವ ಗೊಂದಲವಿಲ್ಲದೇ ಸ್ಥಳೀಯವಾಗಿಯೇ ಪಠ್ಯಕ್ರಮವನ್ನು ಜಾರಿಗೆ ತರಲು ಆಯಾ ರಾಜ್ಯ ಸರ್ಕಾರವು ಸ್ವತಂತ್ರವಾಗಿದೆ ಎಂದು ವಿದ್ಯಾಭಾರತಿ ಕ್ಷೇತ್ರೀಯ ಸಹ ಸಂಘಟನಾ ಕಾರ್ಯದರ್ಶಿ ಜಿ.ಆರ್.ಜಗದೀಶ್ ತಿಳಿಸಿದರು.
ಪಟ್ಟಣದ ಶ್ರೀ ಚಿದಂಬರಾಶ್ರಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರ ಹೊಸ ಶಿಕ್ಷಣ ನೀತಿಯ ಬಗ್ಗೆ ಹಲವು ಗೊಂದಲ ಮೂಡಿದ್ದು ಏಕ ರೂಪ ಶಿಕ್ಷಣ ಎನ್ನುವುದನ್ನು ಮತ್ತೊಂದು ರೀತಿ ಬಿಂಬಿಸಲಾಗುತ್ತಿದೆ. ಏಕ ರೂಪ ಸಿದ್ದಾಂತ ಅಳವಡಿಸಿಕೊಳ್ಳಲು ಮಾತ್ರ ಸೂಚಿಸಲಾಗಿ ನಮ್ಮ ಭಾರತೀಯ ಶಿಕ್ಷಣಕ್ಕೆ ಮಹತ್ವ ನೀಡಲು ಈ ನೀತಿ ಮುಂದಾಗಿದೆ. ಮೆಕಾಲೆ ಆಂಗ್ಲ ಮಾದರಿಯಿಂದ ಹೊರ ಬಂದು ಉದ್ಯೋಗಾಧಾರಿತ ಶಿಕ್ಷಣವನ್ನು ಮೌಲ್ಯಾಧಾರಿತ ಶಿಕ್ಷಣವಾಗಿ ಮಾರ್ಪಡಿಸಿ ನಮ್ಮ ಪರಂಪರೆಯನ್ನು ಉಳಿಸುವ ಕೆಲಸ ಮಾಡಲಾಗುತ್ತಿದೆ. ಇಲ್ಲಿ ಯಾವುದೇ ಕಡ್ಡಾಯ ಎಂಬ ಅಂಶವಿಲ್ಲ. ಉತ್ತಮ ಸಲಹೆಯ ನೀತಿ ಅಳವಡಿಸಿಕೊಳ್ಳಲು ತಿಳಿಸಲಾಗಿದೆ. ಸ್ಥಾನೀಕ ಅಂಶ ಒಳಗೊಂಡ ಪಠ್ಯವನ್ನು ಆಯಾ ರಾಜ್ಯವು ಈ ಹೊಸ ನೀತಿಯೊಂದಿಗೆ ಅಳವಡಿಸಿಕೊಳ್ಳಲು ತಿಳಿಸಲಾಗಿದೆ ಎಂದು ವಿವರಿಸಿದರು.
ಶಿಶು ಶಿಕ್ಷಣವನ್ನೂ ಶಾಲಾ ಶಿಕ್ಷಣದ ಜತೆ ಅಳವಡಿಸಿಕೊಂಡು ಬುನಾದಿ ಶಿಕ್ಷಣವನ್ನು ಆರಂಭಿಸಿ ಸಂತೋಷ ಹಾಗೂ ಸ್ವತಂತ್ರ ಕಲಿಕೆ ಅಳವಡಿಸಿ ಮುಕ್ತ ಶಿಕ್ಷಣಕ್ಕೆ ಇಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಈ ಜತೆಗೆ ಹೊಸ ಶಿಕ್ಷಣ ನೀತಿ ಪಾಸು ಅಥವಾ ನಪಾಸು ಎಂದು ವಿಂಗಡಿಸುವ ಕೆಲಸ ಮಾಡುವುದಿಲ್ಲ. ಶಿಕ್ಷಣಕ್ಕೆ ತಕ್ಕಂತೆ ಪ್ರಮಾಣಪತ್ರ ನೀಡಿ ವಿದ್ಯಾರ್ಥಿಗೆ ಪ್ರೋತ್ಸಾಹಿಸುವ ಕಾರ್ಯ ಮಾಡಲಾಗುವುದು. ಈ ಜತೆಗೆ 5 ನೇ ತರಗತಿವರೆಗೆ ಮಾತೃಭಾಷೆಯಲ್ಲೇ ಶಿಕ್ಷಣವನ್ನು ನೀಡಲು ಹೊಸ ನೀತಿ ಸೂಚಿಸಿದೆ. ಮಾತೃಭಾಷೆಯು ಕ್ರಿಯಾತ್ಮಕ ಚಿಂತನಾ ಶಕ್ತಿ ಹೆಚ್ಚಿಸುತ್ತದೆ ಎನ್ನುವ ಅಂಶ ಹೊಸನೀತಿ ತಿಳಿಸಿದೆ. ಮುಂದಿನ 2030 ನೇ ವರ್ಷದೊಳಗೆ ಈ ನೀತಿ ಸಂಪೂರ್ಣ ಜಾರಿ ಮಾಡುವ ಚಿಂತನೆ ಕೇಂದ್ರ ಸರ್ಕಾರ ಹೊಂದಿದೆ ಎಂದ ಅವರು ಹಿಂದಿಭಾಷೆ ಹೇರಿಕೆ ಎಂಬುದು ಕಪೋಲ ಕಲ್ಪಿತ ಎನಿಸಿದೆ. ನಮ್ಮ ಸಂಸ್ಕøತಿವಾಹಕವಾಗಿರುವ ಭಾಷೆಯನ್ನೇ ವಿರೋಧಿಸುವ ಅಗತ್ಯವಿಲ್ಲ. ನಮ್ಮದಲ್ಲದ ಆಂಗ್ಲಭಾಷೆ ವಿರೋಧಿಸುವ ಗೋಜಿಗೆ ಹೋಗದೆ ನಮ್ಮ ರಾಷ್ಟ್ರೀಯ ಭಾಷೆ, ಅಂತರ್‍ರಾಜ್ಯ ಸಂಪರ್ಕ ಭಾಷೆಯಾದ ಹಿಂದಿಯನ್ನು ದ್ವೇಷಿಸುವ ಅಗತ್ಯವಿಲ್ಲ ಎಂದರು.
ಮೆದುಳಿಗೆ ಮಾತ್ರ ಕೆಲಸ ಕೊಡುವ ಶಿಕ್ಷಣ ಈವರೆವಿಗೆ ಚಾಲ್ತಿಯಲ್ಲಿದೆ. ಓದುವ ಜತೆಗೆ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಹೊಸ ಶಿಕ್ಷಣ ನೀತಿ 6 ನೇ ತರಗತಿಯಲ್ಲೇ ಮಕ್ಕಳ ಆಸಕ್ತಿಗೆ ತಕ್ಕಂತೆ ಕೌಶಲ್ಯಾಧಾರಿತ ಶಿಕ್ಷಣ ಅಳವಡಿಸಲಾಗುವುದು. ಸಮಗ್ರ ಶಿಕ್ಷಣವು ಇಲ್ಲಿ ಅಳವಡಿಸಿ ಜ್ಞಾನಾಧಾರಿತ ಶಿಕ್ಷಣವನ್ನು ದೇಶದಲ್ಲೇ ಬೆಳೆಸುವ ಜತೆಗೆ ಕೀಳರಿಮೆ ತೊಲಗಿಸಿ ಏಕ ರೂಪ ಶಿಕ್ಷಣ ತಾನಾಗಿಯೇ ಬೆಳೆಯುವ ಕಲ್ಪನೆ ಈ ನೀತಿ ಜಾರಿ ಮಾಡಲಿದೆ ಎಂದ ಅವರು ಮೌಲ್ಯ ಶಿಕ್ಷಣಕ್ಕೆ ಆಧುನಿಕತೆ, ಪುರಾತನ ಎನ್ನುವುದು ಬರುವುದಿಲ್ಲ. ಸ್ಥಾನೀಯ ಪ್ರತಿಭೆ, ಕಸುಬುಗಳಿಗೆ ಮಾನ್ಯತೆ ಸಿಗುವ ಜತೆಗೆ ಕೃಷಿ ಆಧಾರಿತ ಕೌಶಲ್ಯಕ್ಕೆ ಹೆಚ್ಚು ಒತ್ತು ನೀಡಿದಂತಾಗುತ್ತದೆ. ಏಕರೂಪ ಎಂದರೇ ಒಂದೇ ಮಾದರಿ ಎನ್ನುವ ಗೊಂದಲ ಚಿಂತನೆ ಬಿಟ್ಟು ಏಕ ಸಿದ್ದಾಂತ ಅಳವಡಿಸಿಕೊಂಡು ಸ್ಥಳೀಯ ಅಂಶದಲ್ಲೇ ಬೋಧನೆ ನಡೆಸಲು ಸಮ್ಮತಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಎಚ್.ಟಿ.ಭೈರಪ್ಪ ಇದ್ದರು.
(Visited 8 times, 1 visits today)