ತುಮಕೂರು:
ಅಪೌಷ್ಟಿಕತೆಯನ್ನು ದೂರ ಮಾಡಲು ಪೌಷ್ಟಿಕ ಕೈತೋಟಗಳನ್ನು ಬೆಳೆಸಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್ ರೈತ ಮಹಿಳೆಯರಿಗೆ ಕರೆ ನೀಡಿದರು.
“ರಾಷ್ಟ್ರೀಯ ಪೋಷಣ್ ಅಭಿಯಾನ} ಅಂಗವಾಗಿ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ(ಕೆವಿಕೆ), ಇಫ್ಕೊ(Iಈಈಅಔ) ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಇತ್ತೀಚೆಗೆ ಕೆವಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ “ಜಾಗೃತಿ ಕಾರ್ಯಕ್ರಮ”ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಪೌಷ್ಠಿಕತೆಯನ್ನು ದೂರ ಮಾಡಲು ತಮ್ಮ ಇಲಾಖೆಯಿಂದ ಕೈಗೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ತಿಳಿಸಿದರಲ್ಲದೆ ಮಕ್ಕಳು ಮತ್ತು ಗರ್ಭಿಣಿಯರಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸಲು ಅಂಗನವಾಡಿ ಕಾರ್ಯಕತೆಯರು ಮನೆ-ಮನೆಗೆ ಭೇಟಿ ನೀಡಿ ಅರಿವು ಮೂಡಿಸುತ್ತಿದ್ದಾರೆ. ಕಾರ್ಯಕರ್ತೆಯರು ಮನೆಗೆ ಭೇಟಿ ನೀಡಿದಾಗ ಪೌಷ್ಟಿಕಯುಕ್ತ ಆಹಾರವನ್ನು ಸೇವಿಸಲು ನೀಡುವ ಸಲಹೆಗಳನ್ನು ಸಾರ್ವಜನಿಕರು ಪಾಲಿಸಬೇಕೆಂದು ಮನವಿ ಮಾಡಿದರು.
“ಕಾವೇರಿ ಕೂಗು ಅಭಿಯಾನ”ದ ಸಂಚಾಲಕ ಶರದ್ ಮಾತನಾಡಿ, ರೈತ ಮಹಿಳೆಯರು ಮರ ಆಧಾರಿತ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಅರಣ್ಯೀಕರಣ ಅಭಿವೃದ್ಧಿಯಾಗುತ್ತದೆಯಲ್ಲದೆ ಮಣ್ಣು ಸವಕಳಿಯಾಗುವುದು ನಿಂತು ಉತ್ತಮ ಮಳೆ ಬರಲು ಸಾಧ್ಯವಾಗುತ್ತದೆ. ಅಂಗನವಾಡಿಗಳ ಆವರಣದಲ್ಲಿ ಸ್ಥಳಾವಕಾಶವಿದ್ದು, ಮರಗಳನ್ನು ಬೆಳೆಸಲು ಇಚ್ಛಿಸಿದಲ್ಲಿ ನಮ್ಮ ಅಭಿಯಾನದಿಂದ ಸಸಿಗಳನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ: ಲೋಗಾನಂದನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಕೆವಿಕೆ ವತಿಯಿಂದ ರೈತರಿಗೆ ಹಾಗೂ ವಿಶೇಷವಾಗಿ ರೈತ ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾಗಿರುವ ತರಬೇತಿ ಹಾಗೂ ಮತ್ತಿತರ ಸೌಲಭ್ಯಗಳನ್ನು ಪಡೆಯುವ ಬಗ್ಗೆ ಮಾಹಿತಿ ನೀಡಿದರು.
ವಿಷಯ ತಜ್ಞ(ತೋಟಗಾರಿಕೆ) ಜೆ.ಎಂ.ಪ್ರಶಾಂತ್ ಮಾತನಾಡಿ ಪೌಷ್ಟಿಕ ಕೈತೋಟ ಮತ್ತು ನಿರ್ವಹಣೆ ಬಗ್ಗೆ ತಾಂತ್ರಿಕ ಮಾಹಿತಿಯನ್ನು ನೀಡಿದರು. ವಿಷಯ ತಜ್ಞೆ(ಗೃಹ ವಿಜ್ಞಾನ) ರಾಧಾ ಆರ್. ಬಣಕಾರ ಪೌಷ್ಟಿಕ ಕೈತೋಟದ ಮಹತ್ವ, ಆಹಾರ ಮತ್ತು ಪೋಷಣೆ ಹಾಗೂ ಲಘು ಪೋಷಕಾಂಶಗಳ ಭದ್ರತೆಗಾಗಿ ಜೈವಿಕವಾಗಿ ಅಭಿವೃದ್ಧಿಪಡಿಸಿರುವ ತಳಿಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸುಮಾರು 65ಕ್ಕೂ ಹೆಚ್ಚು ಅಂಗನವಾಡಿ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ರೈತ ಮಹಿಳೆಯರು ಭಾಗವಹಿಸಿ ಸದುಪಯೋಗ ಪಡೆದುಕೊಂಡರು.