ಗುಬ್ಬಿ:

      ಕೋವಿಡ್ ವೈರಸ್ ಬಗ್ಗೆ ತಾತ್ಸರ ತಾಳಬಾರದು ಎಂದು ಸಭೆಯಲ್ಲಿ ಹೇಳಿದ್ದ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅವರೇ ಈ ವೈರಸ್‍ಗೆ ಬಲಿಯಾಗಿದ್ದು ತೀವ್ರ ಆಘಾತಕಾರಿ ವಿಚಾರ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ ವಿಷಾದಿಸಿದರು.

     ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಾಯಿ ಮತ್ತು ಅತ್ತೆಯವರನ್ನು ಕಳೆದುಕೊಂಡು ನಂತರ ತಾವೂ ಈ ಮಹಾಮಾರಿಗೆ ಬಲಿಯಾಗಿದ್ದ ನೋವಿನ ಸಂಗತಿ. ಅವರ ಸಾವು ನಮಗೆ ಪಾಠ ಕಲಿಸಲಿದೆ. ಮಾಸ್ಕ್ ಧರಿಸುವುದು ಕಡ್ಡಾಯ ಮಾಡಿಕೊಂಡು ಸಾಮಾಜಿಕ ಅಂತರ ಕಾಯುವ ಸ್ವಯಂ ಪ್ರೇರಣೆ ನಿರ್ಧಾರ ಸಾರ್ವಜನಿಕರಲ್ಲಿ ಮೂಡಿಸುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದರು.

      ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಪಂಚಾಕ್ಷರಿ ಮಾತನಾಡಿ ಕಾರ್ಯಕರ್ತರೇ ಬಿಜೆಪಿಗೆ ಜೀವಾಳ ಎಂಬ ಅಂಶಕ್ಕೆ ಜೀವಂತ ಸಾಕ್ಷಿಯಾಗಿದ್ದ ಅಶೋಕ್ ಗಸ್ತಿ ಅಕಾಲಿಕ ಸಾವು ಪಕ್ಷಕ್ಕೆ ಪೆಟ್ಟು ನೀಡಿದಂತಾಗಿದೆ. ಈ ಜತೆಗೆ ಹಿಂದುಳಿದ ವರ್ಗಗಳ ಸಂಘಟನೆಯಲ್ಲಿ ತಮ್ಮದೇ ಛಾಪು ಮೂಡಿಸಿಕೊಂಡು ಪಕ್ಷದ ನಿಷ್ಠಾವಂತರಾಗಿ ರಾಜ್ಯಸಭಾ ಸದಸ್ಯರಾಗಿದ್ದು ಮೆಚ್ಚುವಂತಹದು. ಯಾವುದೇ ರಾಜಕೀಯ ಹಿನ್ನಲೆ ಇಲ್ಲದೇ ವಕೀಲ ವೃತ್ತಿಯ ಜತೆ ಸಾಮಾಜಿಕ ಸೇವೆ, ಪಕ್ಷ ಸಂಘಟನೆ ಮಾಡಿ ಬೆಳದ ಗಸ್ತಿ ಅವರ ಆದರ್ಶ ಮುಂದಿನ ಪೀಳಿಗೆಗೆ ಮಾರ್ಗವಾಗಿತ್ತು ಎಂದರು.

      ಈ ಸಂದರ್ಭದಲ್ಲಿ ಅಶೋಕ್ ಗಸ್ತಿರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎನ್.ಸಿ.ಪ್ರಕಾಶ್, ಮಾಜಿ ಜಿಪಂ ಸದಸ್ಯ ಪಿ.ಬಿ.ಚಂದ್ರಶೇಖರಬಾಬು, ಮಾಜಿ ತಾಲ್ಲೂಕು ಅಧ್ಯಕ್ಷ ಎಚ್.ಟಿ.ಭೈರಪ್ಪ, ರೈತಮೋರ್ಚಾ ಜಿಲ್ಲಾಧ್ಯಕ್ಷ ಶಿವಶಂಕರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗಂಗಣ್ಣ, ತಾಪಂ ಸದಸ್ಯ ಅ.ನ.ಲಿಂಗಪ್ಪ, ಮುಖಂಡರಾದ ಯತೀಶ್, ಸಿದ್ದರಾಮಯ್ಯ, ಬಿ.ಲೋಕೇಶ್, ಪ್ರಸನ್ನ, ಭೀಮಶೆಟ್ಟಿ, ಸವಿತಾ ಸಮಾಜದ ಮುಕುಂದರಾಜು, ಪ್ರಕಾಶ್, ನಟರಾಜು, ಅನಿಲ್ ಇದ್ದರು.

(Visited 6 times, 1 visits today)