ತುಮಕೂರು:
ಕೇರಳ ರಾಜ್ಯದ ಶಬರಿಮಲೈ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಅಯ್ಯಪ್ಪ ಮಾಲಾದಾರಿ ಭಕ್ತರ ಮೇಲೆ ಪೊಲೀಸರು ದರ್ಪ ತೋರಿಸುತ್ತಿರುವುದು ಸರಿಯಲ್ಲ ಎಂದು ಶಬರಿಮಲ ಅಯ್ಯಪ್ಪಸೇವಾ ಸಮಾಜಂ (ಎಸ್‍ಎಎಸ್‍ಎಸ್) ಕೇಂದ್ರ ಸಮಿತಿ ಅಧ್ಯಕ್ಷರಾದ ಟಿ.ಬಿ.ಶೇಖರ್ ತಿಳಿಸಿದರು.
ನಗರದ ಗಾರ್ಡನ್‍ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಈ ಗೊಂದಲ ಏರ್ಪಟ್ಟಿದ್ದು ಬೂಟುದಾರಿ ಪೊಲೀಸರು ಭಕ್ತರನ್ನು ತುಳಿಯುವ ದೃಶ್ಯ ಖಂಡನೀಯ ಎಂದರು.
ಈ ಹಿಂದೆ 100-200 ಜನ ಪೊಲೀಸರು ಖಾಕಿ ಸಮವಸ್ತ್ರದಲ್ಲಿ ಹೆಗಲಮೇಲೆ ಕಪ್ಪು ಟವಲ್ ಹಾಕಿಕೊಂಡು ಬೂಟ್ಸ್‍ಗಳನ್ನು ಧರಿಸದೆ ಭಕ್ತರಿಗೆ ಸಹಕಾರ ನೀಡುತ್ತಿದ್ದರು ಈಗ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿ ಇದೆ ಎಂಬ ನೆಪವೊಡ್ಡಿ ಅಲ್ಲಿಗೆ ತೆರಳುತ್ತಿರುವ ಭಕ್ತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನ.17ರಿಂದ ಜನವರಿ 18 ರವರೆಗೆ ಮಂಡಲ ಮಹೋತ್ಸವ ಜಾತ್ರೆ, ಕಾರ್ತೀಕದಿಂದ ಮಾಘಮಾಸದವರೆಗೆ ನಡೆದು ಸಂಕ್ರಾಂತಿ ಮಕರ ಜ್ಯೋತಿ ದರ್ಶನದೊಂದಿಗೆ ಕೊನೆಯಾಗುವುದು. ಈ ಸಂದರ್ಭದಲ್ಲಿ ಕರ್ನಾಟಕ ಕೇರಳ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯ ಹಾಗೂ ಬೇರೆ ದೇಶಗಳಿಂದ ಸುಮಾರು ಐದೂವರೆ ಕೋಟಿಯಷ್ಟು ಭಕ್ತರು ಅಲ್ಲಿ ಜಮಾವಣೆಗೊಳ್ಳಲಿದ್ದು ಕರ್ನಾಟಕ ರಾಜ್ಯದಿಂದ 60 ರಿಂದ 70 ಲಕ್ಷ ಭಕ್ತರು ಸೇರುತ್ತಾರೆ ಎಂದು ಟಿ.ಬಿ.ಶೇಖರ್ ತಿಳಿಸಿದರು.
ಅಯ್ಯಪ್ಪದರ್ಶನಕ್ಕೆ ಮಾಲಾಧಾರಿಗಳು ತಂಡೋಪ ತಂಡವಾಗಿ ಬರುವುದು ವಾಡಿಕೆ. ಇಂತಹ ಕ್ಷೇತ್ರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವುದು ಸರಿಯಲ್ಲ. ಈ ಹಿಂದೆ ಭಕ್ತರನ್ನು ಪಂಪಾವರೆಗೆ ಹೋಗಿ ಅಲ್ಲಿ ವಾಹನದಿಂದ ಇಳಿದು ಪಾದಯಾತ್ರೆ ಮೂಲಕ ಹೋಗಬೇಕಿತ್ತು ಈಗ ನೀಲಕಲ್ ಬಳಿ ವಾಹನವನ್ನು ನಿಲ್ಲಿಸಿರುವುದರಿಂದ 20 ಕಿ.ಮೀ. ದೂರ ಕ್ರಮಿಸಬೇಕಿದೆ ಎಂದು ಹೇಳಿದರು.
ಈ ದೂರವನ್ನು ಕ್ರಮಿಸಲು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳ ಸೌಕರ್ಯ ಮಾಡಿದ್ದು ಈ ಹಿಂದೆ 29 ರೂ. ಪ್ರಯಾಣದರ ನಿಗಧಿಪಡಿಸಿತ್ತು. ಈಗ ಅದನ್ನು 60 ರೂ.ಗೆ ಹೆಚ್ಚಿಸಲಾಗಿದೆ. ನಮ್ಮ ಎಸ್‍ಎಎಸ್‍ಎಸ್ ವತಿಯಿಂದ ಭಕ್ತರಿಗೆ ಉಚಿತವಾಗಿ ಪ್ರಯಾಣಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು ಕೇರಳ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು ಅದು ಸ್ಪಂದಿಸುತ್ತಿಲ್ಲ ಎಂದರು.
ಶಬರಿಮಲೆ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಾಮಾನಗಳು ಭಕ್ತರಿಗೆ ಬೇಸರ ಮೂಡಿಸಿದ್ದು ಅಲ್ಲಿ ಭಕ್ತರಿಗೋಸ್ಕರ ಇರುವ ವಸತಿ ಗೃಹಗಳಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ. ದೇಶದ ವಿವಿಧ ಭಾಗಗಳಿಂದ ತೆರಳಿದ ಭಕ್ತರು ವಸತಿ ಸೌಕರ್ಯವಿಲ್ಲದೆ ಪರದಾಡುವಂತಾಗಿದೆ ಎಂದು ಟಿ.ಬಿ.ಶೇಖರ್ ನುಡಿದರು.
ಅಯ್ಯಪ್ಪಸ್ವಾಮಿ ಸನ್ನಿಧಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಸಾಗರ ಜಮೆಯಾಗುತ್ತಿದ್ದು ಪೊಲೀಸರಿಂದ ಇವರಿಗಾಗುವ ತೊಂದರೆಯನ್ನು ನಿವಾರಿಸಬೇಕು. ಸೂಕ್ತ ಮೂಲಭೂತ ಸೌಲಭ್ಯಗಳನ್ನೊದಗಿಸಿ ಅಯ್ಯಪ್ಪದರ್ಶನಕ್ಕೆ ಅನುವು ಮಾಡಿಕೊಡಬೇಕೆಂದು ಎಸ್‍ಎಎಸ್‍ಎಸ್, ಕೇರಳ ಸರ್ಕಾರ ಮತ್ತು ತಿರುವನಂತಪುರಂ ದೇವಾಲಯದ ಮಂಡಳಿ (ಟಿಡಿಬಿ) ಒತ್ತಾಯಿಸಿರುವುದಾಗಿ ತಿಳಿಸಿದರು.
ಪೂಜೆಯಲ್ಲೇ ಪವಿತ್ರವಾದ ತುಪ್ಪಾಭಿಷೇಕಕ್ಕೆ, ಇರುಮುಡಿ ಬಿಚ್ಚಲು ಅವಕಾಶ ನೀಡುತ್ತಿಲ್ಲ ಇದಕ್ಕಾಗಿ ಭಕ್ತರು ಕೂರುವ ಜಾಗದಲ್ಲಿ ನೀರು ಹಾಯಿಸಿ ಇಡೀ ನೆಲವನ್ನು ತೇವ ಮಾಡುವುದರಿಂದ ಕೂರಲು ಅವಕಾಶವಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಯ್ಯಪ್ಪ ಭಕ್ತರನ್ನು ಟೆರರಿಸ್ಟ್‍ಗಳಂತೆ ನೋಡಲಾಗುತ್ತದೆ ಇಂತಹ ವಾತಾವರಣವನ್ನು ಈ ಹಿಂದೆ ನೋಡಿರಲಿಲ್ಲ ಎಂದು ವಿಷಾದಿಸಿದರು.