ತುಮಕೂರು :
ನಗರದ ಹೊರವಲಯದ ಊರುಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಸದಸ್ಯರಿಗೆ ಹಾಗೂ ಸಂಘದ ನಿರ್ದೇಶಕರಿಗೂ ಸಹ ವಹಿವಾಟಿನ ಲೆಕ್ಕವನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು.
ಸಂಘದ ಅಧ್ಯಕ್ಷ ಸುರೇಶ್ ಹಾಗೂ ಕಾರ್ಯದರ್ಶಿ ಶ್ರೀನಿವಾಸ್ ಅವರು ಹಾಲು ಉತ್ಪಾದಕರ ಸಂಘದ ವಹಿವಾಟಿನ ಮಾಹಿತಿಯನ್ನು ನೀಡುತ್ತಿಲ್ಲ, ಡೇರಿಗೆ ಹಾಕುವ ಹಾಲಿನ ಸಂಬಂಧಿಸಿದ ಚೀಟಿಯನ್ನು ನೀಡುತ್ತಿಲ್ಲ, ಹಾಲಿನ ಬಡವಾಡೆಯಲ್ಲಿಯೂ ಮೋಸ ಮಾಡುತ್ತಿದ್ದಾರೆ, ವಹಿವಾಟಿನ ಬಗ್ಗೆ ಲೆಕ್ಕ ಹೇಳುವಂತೆಯೇ ಇಲ್ಲ ಎಂದು ಹಾಲು ಉತ್ಪಾದಕರ ಸಂಘದ ನಿರ್ದೇಶಕ ಮಂಜುನಾಥ್ ದೂರಿದರು.
ಹಾಲು ಉತ್ಪಾದಕರ ಸಂಘವನ್ನು ಕುಟುಂಬದ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ, ಬಹುತೇಕ ಹಾಲು ಉತ್ಪಾದಕರ ಅನಕ್ಷರಸ್ಥರಾಗಿದ್ದು, ಅವರಿಗೆ ಯಾವುದೇ ಚೀಟಿಯನ್ನು ನೀಡುತ್ತಿಲ್ಲ, ಪ್ರತಿ ಬಟವಾಡೆಯಲ್ಲಿ ಮೂರು, ನಾಲ್ಕು ಲೀಟರ್ ಹಾಲಿನ ಹಣ ವ್ಯತ್ಯಾಸ ಬರುತ್ತಿದ್ದು, ಈ ಬಗ್ಗೆ ಪ್ರಶ್ನಿಸಿದರೇ, ಅದನೆಲ್ಲಾ ಕೇಳಲು ನೀನ್ಯಾರು ಎನ್ನುತ್ತಾರೆ ಎಂದು ಆಪಾದಿಸಿದರು.
ತುಮುಲ್ ಕೊಬ್ಬಿನಾಂಶ ಹೆಚ್ಚಿರುವ ಹಾಲಿನ ದರ ನಿಗದಿ ಮಾಡಿದೆ ಆದರೆ ಈ ಸಂಘದಲ್ಲಿ ಹಾಲಿನ ದರ ನಿಗದಿ ಪಟ್ಟಿಯನ್ನು ಹಾಕಿಲ್ಲ ಹಾಗೂ ತುಮುಲ್ ಜಾರಿಗೆ ತಂದಿರುವ ಸ್ಲಿಪ್ ವ್ಯವಸ್ಥೆಯನ್ನು ಅನುಸರಿಸುತ್ತಿಲ್ಲ, ಕಳೆದ ಮಾರ್ಚ್ ತಿಂಗಳಲ್ಲಿ ಕೇವಲ 19 ಮಂದಿ ಮತದಾರರನ್ನು ನಿಗದಿ ಪಡಿಸಿ ಚುನಾವಣೆ ನಡೆಸಲಾಗಿದೆ, ಕೇಳಿದರೆ ಸಹಕಾರ ಸಂಘಗಳ ಇಲಾಖೆ ನಿಯಮ ಎಂದು ಹೇಳುತ್ತಾರೆ, ಅಧಿಕಾರಿಗಳು ಮತದಾರರನ್ನು ನಿರ್ಧರಿಸಲು ಅನುಸರಿಸಿರುವ ನಿಯಮದ ಬಗ್ಗೆ ಕೇಳಿದರೆ ಬೇಜಾವಾಬ್ದಾರಿಯಿಂದ ವರ್ತಿಸುತ್ತಾರೆ ಎಂದರು.
ಈ ಬಗ್ಗೆ ಮಾತನಾಡಿದ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶ್ರೀನಿವಾಸ್ ಅವರು, ಸಂಘದಲ್ಲಿ ಸಿಬ್ಬಂದಿ ಕೊರತೆ ಇದ್ದು, ಚೀಟಿ ಬರೆದುಕೊಡಲು ಆಗುತ್ತಿಲ್ಲ, ತಾಲ್ಲೂಕಿನಲ್ಲಿ ಲೋಕಲ್‍ಸೆಲ್‍ಗಳು ಕಾರ್ಯನಿರ್ವಹಿಸುತ್ತಿಲ್ಲ, ಸ್ಲಿಪ್ ನೀಡಲು ಯುಪಿಎಸ್ ತೊಂದರೆ ಇದೆ, ಕೊನೆಗಳಿಗೆಯಲ್ಲಿ ಬಂದು ಹಾಲು ಹಾಕುತ್ತಿರುವುದರಿಂದ ತೊಂದರೆಯಾಗುತ್ತಿದೆ ಎಂದು ಹೇಳಿದರು. ಸಾಮಾನ್ಯ ಸಭೆಯಲ್ಲಿ ಆಡಳಿತ ಮಂಡಳಿ ಪರ-ವಿರೋಧ ಸದಸ್ಯರು ವಾಗ್ವಾದ ನಡೆಸಿದರು.