ಗುಬ್ಬಿ :
ರಾಜಕೀಯದಲ್ಲಿ ಪರ ವಿರೋಧದ ಪ್ರತಿಭಟನೆ ಸಾಮಾನ್ಯವಾದದು. ಆದರೆ ಡಿ.ಕೆ.ಶಿವಕುಮಾರ್ ಅವರ ಬಂಧನಕ್ಕೂ, ಬಿಜೆಪಿ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಗುಬ್ಬಿ ತಾಲ್ಲೂಕು ನಿಟ್ಟೂರಿನ ಮರಿಯಮ್ಮ ದೇವಾಲಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಅಗ್ನಿವಂಶ ಕ್ಷತ್ರಿಯ (ತಿಗಳರ) ಸೇವಾ ಟ್ರಸ್ಟ್ ಆಯೋಜಿಸಿದ್ದ ನೂತನ ಅಂಗಡಿ ಮಳಿಗೆ ಉದ್ಘಾಟನೆ ಹಾಗೂ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಕ್ರಮ ಹಣದ ಪ್ರಕರಣದಲ್ಲಿ ಇಡಿ ತನಿಖೆ ನಡೆಸಿದೆ. ಶಿವಕುಮಾರ್ ಅವರಿಂದ ಸರಿಯಾದ ಮಾಹಿತಿ ಸಿಗದ ಹಿನ್ನಲೆಯಲ್ಲಿ ಬಂಧನಕ್ಕೆ ಒಳಪಡಿಸಿದ್ದಾರೆ. ಈ ಘಟನೆಗೂ ಬಿಜೆಪಿಯ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿದರು.
ಪ್ರತಿಭಟನೆ ಮೂಲಕ ನ್ಯಾಯ ಕೇಳುವ ಹಕ್ಕು ಸಾಮಾನ್ಯರಿಗಿದೆ. ಪ್ರಜಾಪ್ರಭುತ್ವದಂತೆ ನ್ಯಾಯ ಸಮ್ಮತವನ್ನು ಪ್ರಶ್ನಿಸಬಹುದಾಗಿದೆ. ಆದರೆ ಸಾರ್ವಜನಿಕರಿಗೆ ತೊಂದರೆರ ಕೊಡದೆ ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸಲಿ ಎಂದ ಅವರು ತಿಗಳ ಸಮುದಾಯ ಆರ್ಥಿಕವಾಗಿ ಸದೃಢರಾಗುವ ಅಂಶ ತಿಳಿದಿದ್ದಾರೆ. ಕಟ್ಟುಪಾಡಿನ ಮಧ್ಯೆ ಸಮಾಜದ ಮುಖ್ಯವಾಹಿನಿಗೆ ಬರಲು ಶೈಕ್ಷಣಿಕ ಪ್ರಗತಿ ಸಾಧಿಸುವುದು ಬಹುಮುಖ್ಯವಾದದು. ರಾಜಕಾರಣದಲ್ಲೂ ನಂಬಿದವರಿಗೆ ಮತ ನೀಡಿ ಗೆಲುವು ತಂದಿದ್ದೀರಿ. ಈ ನಿಟ್ಟಿನಲ್ಲ ಬಿಜೆಪಿ ಗೆಲುವಿಗೆ ಅಗ್ನಿವಂಶ ತಿಗಳ ಸಮುದಾಯ ಪ್ರಮುಖ ಪಾತ್ರವಹಿಸಿದೆ. ರಾಜ್ಯ ಸರ್ಕಾರ ಅವರ ಎಲ್ಲಾ ಸಮಸ್ಯೆಗೂ ಸ್ಪಂದಿಸಿ ಸರ್ಕಾರದ ಸವಲತ್ತು ಒದಗಿಸಲಿದೆ ಎಂದರು.
ಶಾಸಕ ಜೆ.ಬಿ.ಜ್ಯೋತಿ ಗಣೇಶ್ ಮಾತನಾಡಿ ಉದ್ಯೋಗ ಸೃಷ್ಟಿ ಪ್ರಧಾನಿ ಮೋದಿ ಅವರ ದೊಡ್ಡ ಕನಸು. ಈ ಯೋಜನೆಗೆ ಮುನ್ನ ಆರ್ಥಿಕ ನೀತಿಯನ್ನು ಹೊಸ ರೂಪದಲ್ಲಿ ಅಳವಡಿಸಿದ್ದಾರೆ. ಈ ಸಂದರ್ಭದಲ್ಲಿ ಕೆಲ ಸಮಸ್ಯೆ ಬಂದಿರಬಹುದು. ಆದರೆ ಆರ್ಥಿಕ ನೀತಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಿದೆ. ಇದೇ ಕನಸಿನಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಕೆಲಸ ಸಾಗಿದೆ. ಹಲವು ನಿಯಮಗಳಲ್ಲಿ ನಡೆಯುತ್ತಿರುವ ಈ ಯೋಜನೆಯ ಕಾಮಗಾರಿ ಸಾಕಷ್ಟು ನಿಬಂಧನೆಯಡಿ ಸಾಗಿದೆ. ಐದು ವರ್ಷದ ಈ ಯೋಜನೆಗೆ ಮುಂದಿನ ವರ್ಷದಲ್ಲಿ ಒಂದು ರೂಪ ಬರಲಿದೆ ಎಂದ ಅವರು ತಿಗಳ ಸಮುದಾಯದ ಬೇಡಿಕೆಯನ್ನು ಆಲಿಸಿದ್ದೇನೆ. ಸರ್ಕಾರದೊಂದಿಗೆ ಚರ್ಚಿಸಿ ಅವರ ಮೂಲ ಸವಲತ್ತು ಒದಗಿಸಲು ಬದ್ದನಾಗಿರುತ್ತೇನೆ ಎಂದರು.
ಶಾಸಕ .ಎಸ್.ಆರ್.ಶ್ರೀನಿವಾಸ್ ಮಾತನಾಡಿ ತಿಗಳ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ. ಪ್ರಬಲ ಜಾತಿ ವರ್ಗಗಳು ಶಿಕ್ಷಣವನ್ನೇ ಅಸ್ತ್ರವಾಗಿ ಮಾಡಿಕೊಂಡಿವೆ. ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ನೀಡಿದ್ದಲ್ಲಿ ಎಲ್ಲಾ ರಂಗದಲ್ಲೂ ತಮ್ಮದೇ ಛಾಪು ಮೂಡಿಸಿಕೊಂಡು ತಿಗಳ ಸಮುದಾಯ ಮುಖ್ಯವಾಹಿನಿಗೆ ಬರಬಹುದಾಗಿದೆ ಎಂದರು.
ಶಿವಗಂಗೆ ಮಹಾಲಕ್ಷ್ಮೀ ಪೀಠದ ಶ್ರೀ ಜ್ಞಾನಾನಂದಪುರಿ ಸ್ವಾಮೀಜಿ ಮಾತನಾಡಿ ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದ್ದರೂ ರಾಜಕೀಯವಾಗಿ ಶಕ್ತಿ ಪಡೆದುಕೊಂಡಿಲ್ಲ. ಎಲ್ಲಾ ವರ್ಗದ ಜನರನ್ನು ಆಯ್ಕೆ ಮಾಡಲು ಮಹತ್ವದ ಪಾತ್ರವಹಿಸುವ ನಾವುಗಳು ಹಿಂದುಳಿದ ಪಟ್ಟಿಯಲ್ಲೇ ಹಿಂದುಳಿದಿದ್ದೇವೆ. ಒರ್ವ ಶಾಸಕರನ್ನು ಈ ಬಾರಿ ನೋಡಿಲ್ಲ. ಕಳೆದ 70 ವರ್ಷದಿಂದಲೂ ಸಚಿವ ಸ್ಥಾನ ನಮ್ಮವರಿಗೆ ದಕ್ಕಿಲ್ಲ. ಈ ನಿಟ್ಟಿನಲ್ಲಿ ರಾಜಕೀಯ ಇಚ್ಚಾಶಕ್ತಿ ಗಳಿಸಲು ನಮ್ಮಲ್ಲಿ ಒಗ್ಗಟ್ಟು ಪ್ರದರ್ಶನವಾಗಬೇಕು ಎಂದರು.
ಪಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ ಮಾತನಾಡಿ ತಿಗಳ ಸಮುದಾಯವು ವ್ಯಕ್ತಿ ಪೂಜೆಗೆ ಬೆಲೆ ಕೊಡುತ್ತದೆ. ಈ ಸಂದರ್ಭವನ್ನು ರಾಜಕಾರಣಿಗಳು ಬಳಸಿಕೊಂಡು ನಮ್ಮಲ್ಲೇ ಗುಂಪುಗಾರಿಕೆ ನಡೆಸುತ್ತಾರೆ. ಯಾವ ಜನಪ್ರತಿನಿಧಿಗಳು ನಮ್ಮನ್ನು ಪೋಷಿಸಿಲ್ಲ. ಮತ ಬ್ಯಾಂಕ್ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಜನಾಂಗದ ಮುಖಂಡರನ್ನು ಬೆಳೆಸಿಕೊಂಡು ನಾವು ಬೆಳೆಯೋಣ ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ಡಾ.ನವ್ಯಾಬಾಬು, ತಾಪಂ ಸದಸ್ಯೆ ಮಮತಾ ಯೋಗೀಶ್, ಮುಖಂಡರಾದ ಎನ್.ಸಿ.ಪ್ರಕಾಶ್, ಜಿ.ಎನ್.ಬೆಟ್ಟಸ್ವಾಮಿ, ಸಾಗರನಹಳ್ಳಿ ನಂಜೇಗೌಡ, ಕೃಷ್ಣಯ್ಯ, ಜಿ.ಬಿ.ಮಲ್ಲಯ್ಯ, ಹುಚ್ಚೇಗೌಡ, ಗೋವಿಂದಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಬಲರಾಮಯ್ಯ, ಯೋಗಾನಂದಕುಮಾರ್, ಟ್ರಸ್ಟ್ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ನರಸೇಗೌಡ ಇತರರು ಇದ್ದರು.