ಕೊರಟಗೆರೆ :
ಯುವಕರು ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಳಲ್ಲಿ ತಮ್ಮಗಳನ್ನು ತೊಡಗಿಸಿಕೊಂಡರೆ ಉತ್ತಮ ಸಾಮಾಜಿಕ ಪರಿಸರ ನಿರ್ಮಾಣವಾಗುತ್ತದೆ ಎಂದು ಸಿದ್ದರಬೆಟ್ಟ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾದ್ಯಕ್ಷರಾದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಅವರು ಶ್ರೀರಣಬೈರೆಗೌಡ ಯುವಸೇವಾ ಸಂಘ ಮತ್ತು ಫ್ರೆಂಡ್ಸ್ ಗ್ರೂಪ್ ಸೇವಾಸಮೀತಿ ಅವರಿಂದ ಪಟ್ಟಣದ ಗಂಗಾಧರೇಶ್ವರ ಸ್ವಾಮಿ ಬೆಟ್ಟದಲ್ಲಿ ಮಹಾಶಿವರಾತ್ರಿಯಂದು ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಯುವಕರು ಆಧುನಿಕತೆಯ ಮೋಜಿಗೆ ಬಿದ್ದು, ಸಮಾಜದ ಒಳಿತನ್ನು ಮರೆತು, ಹಿರಿಯರಲ್ಲಿನ ಗೌರವವನ್ನು ಸಹ ಕಳೆದುಕೊಳ್ಳುತ್ತಾ ದುಷ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಯುವಕರು ತಮ್ಮ ದೈನಂದಿನ ಕೆಲಸಗಳೊಂದಿಗೆ ಧಾರ್ಮಿಕತೆ ಮತ್ತು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಉತ್ತಮ ಸಮಾಜದ ನಿರ್ಮಾಣಕ್ಕೆ ದಾರಿಯಾಗುತ್ತದೆ, ಯುವಕರು ಧಾರ್ಮಿಕತೆಯನ್ನು ಮತ್ತು ದೈವತ್ವದ ಮಹತ್ವದ ಬಗ್ಗೆ ತಿಳಿದುಕೊಂಡರೆ ಮಾನಸಿಕವಾಗಿ ಸದೃಡರಾಗುವುದರೊಂದಿಗೆ ಏಕಾಗ್ರತೆಯನ್ನು ಸಹ ಬೆಳೆಸಿಕೊಳ್ಳುತ್ತಾರೆ.
ಇತ್ತೀಚೆಗೆ ಯುವಕರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದು ಆತ್ಮಹತ್ಯೆಯಂತಹ ಕಠೋರ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ಆತಂಕದ ವಿಷಯವಾಗಿದ್ದು, ಕೇವಲ ಉದ್ಯೋಗ ಜ್ಞಾನವನ್ನು ಯುವಕರು ಸಂಪಾದಿಸಿಕೊಳ್ಳದೆ ಆದ್ಯಾತ್ಮಿಕ ಮತ್ತು ಯೋಗ ದ್ಯಾನಗಳಲ್ಲಿ ಸ್ವಲ್ಪ ತೊಡಗಿಸಿಕೊಂಡರೆ ಪರಿಪೂರ್ಣ ವ್ಯಕ್ತಿಯಾಗಲು ಸಾದ್ಯ. ಇಂತಹ ನಿಟ್ಟಿನಲ್ಲಿ ಪಟ್ಟಣದ ರಣಬೈರೆಗೌಡ ಯುವಸೇನಾ ಸಂಘ ಮತ್ತು ಫ್ರೆಂಡ್ಸ್ ಗ್ರೂಪ್ ಸೇವಾಸಮೀತಿ 19 ವರ್ಷಗಳಿಂದ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ನಡಸಿಕೊಂಡು ಬರುತ್ತಿದ್ದು, ಸಾಮಾಜಿಕ ಕೆಲಸಗಳಲ್ಲಿಯೂ ಸಹ ಇವರ ಸೇವೆ ಉತ್ತಮವಾದದ್ದು ಎಂದರು.
ರಣಬೈರೆಗೌಡ ಯುವಸೇವಾ ಸಂಘದ ಹಾಗೂ ವಿ.ಎಸ್.ಎಸ್.ಎನ್ ಅದ್ಯಕ್ಷರಾದ ಕೆ.ವಿ ಮಂಜುನಾಥ್ ಮಾತನಾಡಿ ನಮ್ಮ ಯುವಸೇನಾ ಸಂಘವು, ಫ್ರೆಂಡ್ಸ್‍ಗ್ರೂಪ್ ಸೇವಾಸಮೀತಿಯೊಂದಿಗೆ ಜೊತೆಗೂಡಿ ಹಲವು ವರ್ಷಗಳಿಂದ ಧಾರ್ಮಿಕ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದು, ಸಾಮಾಜಿಕ ಕೆಲಸಗಳಲ್ಲೂ ಸಹ ನಮ್ಮ ಸಂಘದ ಯುವಕರು ತಮ್ಮಲ್ಲಿ ತಾವು ತೊಡಗಿಸಿಕೊಂಡಿದ್ದಾರೆ. ಶ್ರೀ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ ಮತ್ತು ಬೆಟ್ಟವು ಅತ್ಯಂತ ಪುರಾತನ ಮತ್ತು ಐತಿಹಾಸಿಕ ಧಾರ್ಮಿಕತರಯ ಕೇಂದ್ರವಾಗಿದೆ., ಆದರೆ ಸರ್ಕಾರದ ದೊಡ್ಡ ಧಾರ್ಮಿಕ ದೇವಸ್ಥಾನವಾದ, ಗಂಗಾಧರೇಶ್ವರ ದೇವಾಲಯಕ್ಕೆ ಮುಜರಾಯಿ ಇಲಾಖೆಯಿಂದ ಯಾವುದೇ ಹಣಕಾಸು ನೆರವು ಬಂದಿರುವುದಿಲ್ಲ ದೇವಾಲಯದ ಸಾವಿರಾರು ಭಕ್ತರು ಬಂದು ಹೋಗುತ್ತಿದ್ದು, ಮೂಲಭೂತಗಳ ಸೌಕರ್ಯ ಹೊಂದಿಲ್ಲ, ಬೆಟ್ಟದ ಸುತ್ತಲಿನ ಪರಿಸರ, ಸ್ವಚ್ಛತೆ ಸಂಪೂರ್ಣವಾಗಿ ಹಾಳಾಗಿದ್ದು ಮುಂದಿನ ದಿನಗಳಲ್ಲಿ ಸಂಬಂದಪಟ್ಟ ಇಲಾಖೆ ಹಾಗೂ ಸರ್ಕಾರ ಈ ಬಗ್ಗೆ ಗಮನಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯೆ ಪ್ರೇಮಾಮಹಲಿಂಗಪ್ಪ, ಪ.ಪಂ ಸದಸ್ಯ ಲಕ್ಷ್ಮಿನಾರಾಯಣ್, ಮಾಜಿ ಸದಸ್ಯ ಪವನ್‍ಕುಮಾರ್, ಜಿಲ್ಲಾ ಪತ್ರಕರ್ತ ಸಂಘದ ನಿರ್ದೇಶಕ ರಂಗಧಾಮಯ್ಯ, ಯುವಕಾಂಗ್ರೆಸ್ ಅದ್ಯಕ್ಷ ವಿನಯ್‍ಕುಮಾರ್, ಸಂಘದ ಪದಾಧಿಕಾರಿಗಳಾದ ಕೆ.ವಿ ಪುರುಷೋತ್ತಮ್, ಕೆ.ಬಿ ಲೋಕೇಶ್, ಕೆ.ಎಂ ಸುರೇಶ್, ಮಲ್ಲಣ್ಣ, ಪ್ರದೀಪ್, ಅನುಪ್ರಸಾದ್, ಅನಿಲ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.