ತುಮಕೂರು
ಸ್ವಯಂ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ನೀಡುತ್ತಿರುವ ತರಬೇತಿ ಪ್ರಯೋಜನವನ್ನು ಪಡೆಯಬೇಕೆಂದು ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಎಂ. ಶಾಂತಮ್ಮ ಕಾರಾಗೃಹ ಬಂದಿಗಳಿಗೆ ಕರೆ ನೀಡಿದರು.
ಜಿಲ್ಲಾ ಕಾರಾಗೃಹದಲ್ಲಿ ಬಂದಿಗಳಿಗಾಗಿ ಹಮ್ಮಿಕೊಂಡಿದ್ದ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕಾರ್ಯಾಗಾರದಲ್ಲಿ ಎಸ್ಬಿಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಬಂದಿಗಳಿಗೆ ಜೇನು ಸಾಕಾಣಿಕೆ, ಮೊಬೈಲ್ ರಿಪೇರಿ, ಎಲೆಕ್ಟ್ರಿಕಲ್ ರಿಪೇರಿ ಸೇರಿದಂತೆ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದ್ದು,
ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ನೀಡಲಾಗುವುದು. ಕಾರಾಗೃಹದಿಂದ ಬಿಡುಗಡೆಯಾದ ನಂತರ ಬಂದಿಗಳು ಪ್ರಮಾಣಪತ್ರಗಳನ್ನು ತೋರಿಸಿದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್ಗಳಿಂದ ಸಾಲ ದೊರೆಯಲಿದೆ ಎಂದು ತಿಳಿಸಿದರು.
ಎಸ್ಬಿಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಎಸ್. ಅರುಣ್ ಕುಮಾರ್ ಮಾತನಾಡಿ ಸ್ವಯಂ ಉದ್ಯೋಗ ಕಲ್ಪಿಸುವುದು ನಮ್ಮ ಸಂಸ್ಥೆಯ ಉದ್ದೇಶ. ಕಲಿಕೆ ನಿರಂತರವಾಗಿರಬೇಕು. ಆಸಕ್ತಿವಹಿಸಿ
ಕಲಿತು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಮಾರ್ಗದರ್ಶನ ನೀಡಿದರು.
ಎಸ್ಬಿಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ರಾಜಶೇಖರ್ ಕಾರ್ಯಾಗಾರದಲ್ಲಿ ನೀಡಿದ ತರಬೇತಿಯನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಆರ್ಥಿಕವಾಗಿ ಸಬಲರಾದಲ್ಲಿ ಅಪರಾಧಗಳಲ್ಲಿ ಭಾಗಿಯಾಗುವುದು ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಜೈಲರ್ಗಳಾದ ಬಿ.ವೈ.ಬಿಜ್ಜೂರ ಹಾಗೂ
ಎಂ.ಎಸ್.ರಾಮಚಂದ್ರ, ಸಹ ಶಿಕ್ಷಕ ಸಿದ್ದರಾಜಯ್ಯ, ಮತ್ತಿತರರು ಉಪಸ್ಥಿತರಿದ್ದರು.