ತುಮಕೂರು
ಗುರುವಾರ ತುಮಕೂರು ನಗರವಂಚಿತ ಯುವಜನರ ಸಂಪನ್ಮೂಲ ಕೇಂದ್ರದಲ್ಲಿ ಜಿಲ್ಲಾಸ್ಪತ್ರೆ ಖಾಸಗೀಕರಣ ವಿರೋಧಿಸಿ ಪ್ರಗತಿಪರ ಸಂಘಟನೆಗಳ ಮುಖಂಡರ ಮತ್ತು ನಾಗರೀಕರ ಸಮಾಲೋಚನಾ ಸಭೆ ನಡೆಸಲಾಯಿತು. ಕರ್ನಾಟಕ ಜನಾರೋಗ್ಯ ಚಳುವಳಿಯ ಸಂಚಾಲಕರಾದ ಡಾ. ಅಖಿಲವಾಸನ್ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಕರ್ನಾಟಕದ 9 ಜಿಲ್ಲೆಗಳಲ್ಲಿ ಮತ್ತು ತುಮಕೂರು ಜಿಲ್ಲಾಸ್ಪತ್ರೆ ಖಾಸಗೀಕರಣ ಪ್ರಕ್ರಿಯೆ ಕುರಿತು ಮಾಹಿತಿ ನೀಡಿ ಮಾತನಾಡಿದರು.
ಕಳೆದ ಎರಡು ದಶಕಗಳಿಂದ ಕರ್ನಾಟಕ ರಾಜ್ಯದ ಆರೋಗ್ಯ ನೀತಿಗಳು ಅತ್ಯಂತ ಜನವಿರೋಧಿಯಾಗಿದ್ದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ನಾಶ ಮಾಡುವ ಹಾದಿಯಲ್ಲಿ ನಡೆಯುತ್ತಿದೆ, ಇದರ ಪರಿಣಾಮವಾಗಿ ತಾಯಂದಿರ ಮರಣ ಪ್ರಮಾಣ ಮತ್ತು 1 ವರ್ಷದೊಳಗಿನ ಶಿಶುಗಳ ಮರಣ ಪ್ರಮಾಣ 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ ದಕ್ಷಿಣ ಭಾರತದ ರಾಜ್ಯಗಳಲ್ಲೇ ಕರ್ನಾಟಕದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿದೆ ಎಂದರು.
ಪರಿಸರವಾದಿ ಸಿ.ಯತಿರಾಜ್ ಮಾತನಾಡಿ ರಾಷ್ಟ್ರಿಯ ಆರೋಗ್ಯ ನೀತಿ ವಿರುದ್ಧ ಹೋರಾಟ ರೂಪಿಸಿದರೇ ಮಾತ್ರ ಜಿಲ್ಲಾಸ್ಪತ್ರೆ ಖಾಸಗೀಕರಣ ತಪ್ಪಿಸಬಹುದು ಕೇಂದ್ರದ ವಿಪರೀತವಾದ ಕೇಂದ್ರಿತ ಯೋಜನೆ ರಾಜ್ಯಗಳ ಸ್ವಾಯತ್ತತೆಗೆ ದಕ್ಕೆ ತಂದಿದೆ. ಇದರಿಂದಾಗಿ ಮಾರುಕಟ್ಟೆಗೆ ಬೇಕಾದುದನ್ನು ಕೇಂದ್ರ ಸೃಷ್ಠಿಮಾಡುತ್ತಿದ್ದು ಇದರ ವಿರುದ್ಧ ಧ್ವನಿಯೆತ್ತಬೇಕು ಎಂದರು.
ಪಿಯುಸಿಎಲ್ ಜಿಲ್ಲಾಧ್ಯಕ್ಷರಾದ ಕೆ.ದೊರೈರಾಜ್ ಮಾತನಾಡಿ ಆರೋಗ್ಯ ರಕ್ಷಾ ಸಮಿತಿಗೆ ಶಾಸಕರು ಅಧ್ಯಕ್ಷರಾಗಿದ್ದು ಸರ್ಕಾರದ ಈ ನಡೆಯನ್ನು ಖಂಡಿಸಿ ಜನಾಂದೋಲನ ರೂಪಿಸಬೇಕು. ಚುನಾವಣೆ ಸಮಯವಾಗಿರುವುದರಿಂದ ನಾವು ವ್ಯಾಪಕವಾದ ಜಾಗೃತಿಯನ್ನು ತಂದು ಜನರಿಗೆ ತಿಳುವಳಿಕೆ ಮೂಡಿಸಬೇಕೆಂದರು.
ಕಾರ್ಮಿಕ ಮುಖಂಡರಾದ ಸೈಯದ್ಮುಜೀಬ್ ಮಾತನಾಡಿ ಬಡಜನರಿಗೆ ಜಿಲ್ಲಾಸ್ಪತ್ರೆ ಆರೋಗ್ಯ ಸೇವೆಗಳನ್ನು ನೀಡುತ್ತಿದ್ದು ಇದು ಖಾಸಗೀಯವರಿಗೆ ನೀಡಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವುದರಿಂದ ತಕ್ಷಣವೇ ಹೋರಾಟ ರೂಪಿಸಲು ಎಲ್ಲಾ ಪಕ್ಷಗಳ ಮತ್ತು ರೈತಸಂಘ ಇನ್ನೀತರೆ ಸಂಘಟನೆಗಳನ್ನೊಳಗೊಂಡ ದುಂಡು ಮೇಜಿನ ಸಭೆ ಕರೆದು ಬೃಹತ್ ಹೋರಾಟ ರೂಪಿಸಬೇಕೆಂದರು.
ಸಭೆಯಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ, ವೆಲ್ಫೇರ್ ಪಾರ್ಟಿಯ ತಾಜುದ್ದೀನ್ಷರೀಫ್, ಮಾದಿಗ ದಂಡೋರದ ಆಟೋಶಿವರಾಜ್,ರಂಜನ್, ಎಎಂಎಸ್ನ ಕಲ್ಯಾಣಿ, ಎಸ್ಯುಸಿಐ ನ ಸ್ವಾಮಿ, ಗ್ರಾಮ ಸ್ವರಾಜ್ನ ಪಂಡಿತ್ ಜವಾಹರ್, ಸಮತಾಬಳಗದ ನಟರಾಜಪ್ಪ, ನಾಗೇಂದ್ರಪ್ಪ, ತಮ್ಮ ಅಭಿಪ್ರಾಯಗಳನ್ನು ಹೇಳಿದರು. ತುಮಕೂರು ಕೊಳಗೇರಿ ಸಮಿತಿಯ ಪದಾಧಿಕಾರಿಗಳಾದ ದೀಪಿಕಾ, ಕಣ್ಣನ್, ಅರುಣ್,ತಿರುಮಲಯ್ಯ,ಗಣೇಶ್, ಮೋಹನ್, ಪುಟ್ಬಾತ್ ವ್ಯಾಪಾರಿಗಳ ಸಂಘದ ವಾಸೀಮ್, ನಿವೇಶನ ರಹಿತ ಹೋರಾಟ ಸಮಿತಿಯ ಮಂಗಳಮ್ಮ,ಸುಧಾ, ಭಾರತಿನಗರದ ಶಾರದಮ್ಮ, ಗಂಗಮ್ಮ ಮುಂತಾದವರು ಪಾಲ್ಗೊಂಡಿದ್ದರು.
ಸಭೆಯು ಒಮ್ಮತದಿಂದ ತುಮಕೂರು ಜಿಲ್ಲಾಸ್ಪತ್ರೆ ಖಾಸಗೀಕರಣ ವಿರೋಧಿ ಹೋರಾಟ ಸಮಿತಿ ಮೂಲಕ ದುಂಡುಮೇಜಿನ ಸಭೆ, ಬೃಹತ್ ಹೋರಾಟ ರೂಪಿಸಲು ನಿರ್ಣಯ ಕೈಗೊಳ್ಳಲಾಯಿತು. ಸ್ವಾಗತವನ್ನು ಅರುಣ್, ವಂದನಾರ್ಪಣೆಯನ್ನು ತಿರುಮಲಯ್ಯ ನೆರವೇಶಿದರು.