ತುಮಕೂರು
ತಾಲೂಕಿನ ಕಸಬಾ ಹೋಬಳಿ ಅದಲಾಪುರ ಗ್ರಾಮದೇವತೆ ಶ್ರೀಮಾರಮ್ಮದೇವಿ ದೇವಾಲಯವು ಸರಕಾರದ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯವಾಗಿದೆ. ಸದರಿ ದೇವಾಲಯದ ಉತ್ಸವ ಮೂರ್ತಿಯನ್ನು ದೇವರ ಜಾತ್ರೆ ಸಂದರ್ಭದಲ್ಲಿ ಎಲ್ಲಾ
ಕೇರಿಗಳಿಗೆ ತೆಗೆದುಕೊಂಡು ಹೋಗುವಂತೆ ದಲಿತರ ಕೇರಿಗೆ ತರುವಂತೆ ಕೇಳಿದ ದಲಿತರ ಮೇಲೆ ಸವರ್ಣೀಯರು ಹಲ್ಲೆ ನಡೆಸಿದ್ದು, ಇವರ ವಿರುದ್ದ ಕ್ರಮ ಕೈಗೊಳ್ಳುವಂತೆ ಗ್ರಾಮದ ಜನರು ಪೊಲೀಸರಿಗೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಗೂಳೂರು ಸಿದ್ದರಾಜು ನೇತೃತ್ವದಲ್ಲಿ ಅದಲಾಪುರ ಗ್ರಾಮದ ಹತ್ತಾರು ದಲಿತರು,ಜಿಲ್ಲಾಧಿಕಾರಿಗಳ ಕಚೇರಿಗೆ ಹಾಗೂ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಕಳೆದ ಜನವರಿ 30ರಂದು ಗ್ರಾಮದಲ್ಲಿ ಗ್ರಾಮದೇವತೆ ಶ್ರೀಮಾರಮ್ಮ(ಅದಲಾಪುರದಮ್ಮ)ದೇವಿ ಜಾತ್ರೆ ಇದ್ದು, ಜಾತ್ರೆಯ ಸಂದರ್ಭದಲ್ಲಿ ಎಲ್ಲಾ ಕೇರಿಗಳಿಗೆ ಉತ್ಸವ ಮೂರ್ತಿ ಹೋಗುವಂತೆ ತಮ್ಮ ಕೇರಿಗೂ ಉತ್ಸವ ಮೂರ್ತಿ ಕರೆದುಕೊಂಡು ಬಂದರೆ ಹರಕೆ ತೀರಿಸಲು ಅನುಕೂಲವಾಗುತ್ತದೆ ಎಂದು ಗ್ರಾಮದ ಹಿರಿಯರಿಗೆ ತಿಳಿಸಿ,ಅದಕ್ಕಾಗಿ ಶುಲ್ಕವನ್ನು ಪಾವತಿಸಲಾಗಿತ್ತು. ಅದಲಾಪುರ ಗ್ರಾಮದ ದಲಿತ ಕುಟುಂಬಕ್ಕೆ ಸೇರಿದ ಕುಮಾರಸ್ವಾಮಿ ಬಿನ್ ಹುಚ್ಚರಂಗಯ್ಯ,ಶ್ರೀನಿವಾಸ್ ಬಿನ್ ನರಸಯ್ಯ ಎಂಬುವವರು ಉತ್ಸವ ಮೂರ್ತಿ ಹೊರಡಿಸಲು ಹೋದ ಸಂದರ್ಭದಲ್ಲಿ ಗ್ರಾಮದ ಮೇಲ್ವರ್ಗಕ್ಕೆ ಸೇರಿದ ಮಂಜುನಾಥ್ ಬಿನ್ ಹನುಮರಂಗಯ್ಯ,ಚಿಕ್ಕರಂಗಯ್ಯ ಬಿನ್ ಚಿಣ್ಣಯ್ಯ,ರಾಕೇಶ್ ಬಿನ್ ಕೆ.ನಾಗರಾಜು ಎಂಬುವವರು ನಿಮ್ಮ ಬೀದಿಗೆ ದೇವರು ಕಳುಹಿಸುವುದಿಲ್ಲ.ಅಮಂಗಳವಾಗುತ್ತದೆ. ನೀವು ಊರಿನ ಬಿಟ್ಟಿ ಚಾಕರಿ ಮಾಡಿಕೊಂಡು ಇರುವುದಷ್ಟೇ ನಿಮ್ಮ ಕೆಲಸ ಎಂದು ಜಾತಿ ನಿಂಧನೆ ಮಾಡಿ, ಅವಾಚ್ಚ ಶಬ್ದಗಳಿಂದ ನಿಂಧಿಸಿ, ಹಲ್ಲೆ ಮಾಡಿರುತ್ತಾರೆ.
ನಮ್ಮ ಗ್ರಾಮದಲ್ಲಿ ದಲಿತರು, ಲಿಂಗಾಯಿತರು ಮತ್ತು ವಾಲ್ಮೀಕಿ ಸಮುದಾಯದ ಜನರು ಇದ್ದು, ಸದರಿ ದೇವಾಲಯದ
ಪೂಜಾರಿಯಾಗಿ ವಾಲ್ಮೀಕಿ ಸಮುದಾಯದ ವ್ಯಕ್ತಿ ಕೆಲಸ ಮಾಡುತ್ತಿದ್ದಾರೆ.ಕಳೆದ 30 ವರ್ಷಗಳಿಂದಲು ದಲಿತರು ಉತ್ಸವ ಮೂರ್ತಿಯನ್ನು ನಮ್ಮ
ಕೇರಿಗೂ ಕಳುಹಿಸುವಂತೆ ಗ್ರಾಮದ ಹಿರಿಯರಿಗೆ ಮನವಿ ಮಾಡುತ್ತಿದ್ದರೂ ಇದುವರೆಗೂ ಉತ್ಸವ ಮೂರ್ತಿಯನ್ನು ದಲಿತ ಕೇರಿಗೆ ಕಳುಹಿಸುವ ಕೆಲಸ ಮಾಡಿಲ್ಲ. ಉತ್ಸವ ಮೂರ್ತಿ ಕೇರಿಗೆ ಬರದೆ ಹರಕೆ ತೀರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಉತ್ಸವ ಮೂರ್ತಿ ದಲಿತ ಕೇರಿಗೆ ತರಲು ಹೋದ ದಲಿತರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಹಾಗು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.