ತುಮಕೂರು


ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳಿಗೆ ಎಲ್ಲ ರಾಷ್ಟ್ರೀಯ ಪಕ್ಷಗಳು ಅನ್ಯಾಯ ಮಾಡಿದ್ದು, ಬಲಾಢ್ಯ ಸಮುದಾಯ ಓಲೈಸಲು 147 ಜಾತಿಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅವಕಾಶ ವಂಚಿತರಿಗೆ ಮೀಸಲಾತಿ ಕಲ್ಪಿಸಿದ್ದು, ಎಸ್ಸಿಎಸ್ಟಿ ಬುಡಕಟ್ಟು ಸಮುದಾಯವನ್ನು ನಿರ್ಲಕ್ಷಿಸಿದ್ದು, ಅಲೆಮಾರಿ ಸಮುದಾಯಗಳನ್ನು ರಾಜಕೀಯ ಅಧಿಕಾರದಿಂದ ದೂರ ಇಡಲಾಗಿದೆ ಎಂದರು.
ಜಿಲ್ಲೆಯಲ್ಲಿ 85 ಸಾವಿರ ಅಲೆಮಾರಿ ಸಮುದಾಯದ ಮತಗಳಿದ್ದರು ಸಹ ಪ್ರಾತಿನಿಧ್ಯ ಸಿಗುತ್ತಿಲ್ಲ, ಸಂವಿಧಾನದ ತತ್ವಗಳನ್ನು ಗಾಳಿಗೆ ತೂರಲಾಗಿದೆ, ಸಾಮಾಜಿಕ ನ್ಯಾಯಕ್ಕಾಗಿ ಶೋಷಿತ ಸಮುದಾಯಗಳಿಗೆ ರಾಜಕೀಯ ಅಧಿಕಾರ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.
ಕಾರ್ಯಾಧ್ಯಕ್ಷ ಆದರ್ಶ್ ಚಿನ್ನಯಲ್ಲಪ್ಪ ಮಾತನಾಡಿ ಬಿಜೆಪಿ ಸರ್ಕಾರ ಕಲ್ಪಿಸಿರುವ ಒಳ ಮೀಸಲಾತಿ ಅಸಂವಿಧಾನವಾಗಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನವಿದ್ದರು ಸಹ ಪರಿಶಿಷ್ಟರಲ್ಲಿಯೇ ಒಳ ಮೀಸಲಾತಿ ವರ್ಗಿಕರಣ ಮಾಡಲು ಹೊರಟಿರುವುದು ಖಂಡನೀಯ ಎಂದು ಹೇಳಿದರು.
ಸಮಾನ ಅವಕಾಶ ವಂಚಿತರಿಗೆ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ನೀಡಿದ್ದ ಮೀಸಲಾತಿಯನ್ನು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಅವೈಜ್ಞಾನಿಕವಾಗಿ ಹಂಚಿಕೆ ಮಾಡಿದ್ದು, ಕೇವಲ 5 ಬಲಾಢ್ಯ ಜಾತಿಗಳಿಗೆ ಮಣೆ ಹಾಕಿ ಉಳಿದ 147 ಜಾತಿ/ಬುಡಕಟ್ಟುಗಳನ್ನು ನಿರ್ಲಕ್ಷಿಸುವ ಸಾಮಾಜಿಕ ನ್ಯಾಯವನ್ನು ಕಗ್ಗೊಲೆ ಮಾಡಲಾಗಿದೆ ಎಂದು ಆರೋಪಿಸಿದರು.
ಜಿಲ್ಲಾಧ್ಯಕ್ಷ ಲೋಕೇಶ್ ಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಅಲೆಮಾರಿ ಸಮುದಾಯಗಳಿಗೆ ಮೂಲಸೌಕರ್ಯವನ್ನು ಒದಗಿಸಲು ವಿಫಲವಾಗಿರುವ ಜನಪ್ರತಿನಿಧಿಗಳ ವಿರುದ್ಧವಾಗಿ ಮತ ನೀಡುವಂತೆ ಕರೆ ನೀಡಲಾಗಿದ್ದು, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಅಲೆಮಾರಿ ಸಮುದಾಯಗಳು ಇಂದಿಗೂ ಕಷ್ಟದಲ್ಲಿವೆ ಎಂದರು.
ಚಿಕ್ಕನಾಯಕನಹಳ್ಳಿಯಲ್ಲಿ ಅಲೆಮಾರಿ ಸಮುದಾಯಗಳು ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದಾಗ ಪರ್ಯಾಯ ಜಾಗವನ್ನು ಗುರುತಿಸುವುದಾಗಿ ನೀಡಿದ್ದ ಭರವಸೆ ಇನ್ನು ಈಡೇರಿಲ್ಲ, ಜಿಲ್ಲೆಯಲ್ಲಿರುವ ಎಲ್ಲ ಅಲೆಮಾರಿಗಳ ಪರಿಸ್ಥಿತಿ ಹೀಗೆಯೇ ಇದ್ದು ಸ್ವತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಅಲೆಮಾರಿಗಳಿಗೆ ಪ್ರಾತಿನಿಧ್ಯ ದೊರೆತಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಮಹದೇವಯ್ಯ, ಅಮಲಾಪುರ ಕೇಶವ್, ದಯನಂದ್ ಸೇರಿದಂತೆ ಇತರರಿದ್ದರು.

(Visited 2 times, 1 visits today)