ಮಧುಗಿರಿ
ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್. ರಾಜಣ್ಣ ಗುರುವಾರ ಸಹಸ್ರಾರು ಕಾರ್ಯಕರ್ತರೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ರೋಡ್ ಶೋ ನಡೆಸಿ ನಂತರ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಶಕ್ತಿ ಪ್ರದರ್ಶನ : ಕೆ.ಎನ್. ರಾಜಣ್ಣನವರು ಉಮೇದುವಾರಿಕೆ ಸಲ್ಲಿಸುವ ಸಂದರ್ಭದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಸಹಸ್ರಾರು ಕಾರ್ಯಕರ್ತರು ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದರು. ಬಿರು ಬಿಸಿಲಿಗೂ ಜಗ್ಗದ ಕಾರ್ಯಕರ್ತರು ಉತ್ಸಾಹದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೆ.ಎನ್. ರಾಜಣ್ಣನವರ ಜೊತೆ ಹೆಜ್ಜೆ ಹಾಕಿದರು. ಮೊದಲಿಗೆ ಶಿರಾ ಗೇಟ್ ನಿಂದ ಆರಂಭವಾದ ಯಾತ್ರೆಯು ದಂಡೂರ ಬಾಗಿಲು ಮುಖಾಂತರ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ರಸ್ತೆ, ಡೂಂ ಲೈಟ್ ಸರ್ಕಲ್, ಹೈಸ್ಕೂಲ್ ರಸ್ತೆಯ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಲಾಯಿತು.
ಉಮೇದುವಾರಿಕೆ ಸಲ್ಲಿಸಿದ ನಂತರ ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್. ರಾಜಣ್ಣ ಮಾತನಾಡಿ ಈ ಬಾರಿ ರಾಜ್ಯದಲ್ಲಿ ಜನತೆ ಕಾಂಗ್ರೆಸ್ ಗೆ ಆಶೀರ್ವಾದಿಸುವ ವಿಶ್ವಾಸವಿದ್ದು, ಜಿಲ್ಲೆಯ 11 ಕ್ಷೇತ್ರಗಳಲ್ಲಿ 9 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿರುವ ಗ್ಯಾರಂಟಿ ಯೋಜನೆಗಳಿಗೆ ಉತ್ತಮ ಜನ ಬೆಂಬಲ ವ್ಯಕ್ತವಾಗಿದ್ದು, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವುದು ಶಥಸಿದ್ದ. ಬಿಜೆಪಿಯ ಪತನ ಕರ್ನಾಟಕದಿಂದಲೇ ಆರಂಭವಾಗಿದ್ದು, ಮಾಜಿ ಸಿಎಂ ಯಡಿಯೂರಪ್ಪನವರಿಗೆ ಬಿಜೆಪಿ ಕಣ್ಣೀರು ಹಾಕಿಸಿದ್ದು, ಅವರ ಕಣ್ಣೀರಿನಲ್ಲಿ ಬಿಜೆಪಿ ಕೊಚ್ಚಿ ಹೋಗಲಿದೆ. ಕಾಂಗ್ರೆಸ್ ಎಲ್ಲಾ ಸಮುದಾಯದವರಿಗೂ ಮುಖ್ಯಮಂತ್ರಿ ಮಾಡಿದ್ದು, ತಳ ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಅವಕಾಶ ನೀಡಿದೆ ಎಂದರು.
ಈ ಹಿಂದೆ ನಾನು ಶಾಸಕನಾಗಿದ್ದಾಗ, ಜನರಿಗೆ ನನ್ನ 5 ವರ್ಷದ ಆಡಳಿತ ಮನವರಿಕೆಯಾಗಿದ್ದು, ಈಗಿನ ಶಾಸಕರಿಂದ ಮತದಾರರಿಗೆ ಅವಮಾನವಾಗಿದೆ. ಇದು ನನ್ನದು ಕೊನೆಯ ಚುನಾವಣೆಯಾಗಿದ್ದು,
ಜನತೆ ಆಶಿರ್ವದಿಸಿದಲ್ಲಿ ಮಧುಗಿರಿ ಜಿಲ್ಲೆಯಾಗುವುದು ಶಥಸಿದ್ದ. ಇದರ ಜೊತೆಗೆ ಎತ್ತಿನಹೊಳೆ ಕಾಮಗಾರಿ ಪಿಉರ್ಣಗೊಳಿಸಿ ತಾಲೂಕಿನ ಕೆರೆಗಳಿಗೆ ನೀರು ಹರಿಸುತ್ತೇನೆ. ರಾಯದುರ್ಗ ರೈಲ್ವೆ ಯೋಜನೆ ಕಾಮಗಾರಿ ತ್ವರಿತಗೊಳಿಸುವುದರ ಜೊತೆಗೆ ಈ ಭಾಗದಲ್ಲಿ ಕೈಗಾರಿಕಾ ವಲಯ ಜಾರಿಗೊಳಿಸಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ನಾಯಕ ನಾವು ಅವರ ಬಗ್ಗೆ ಟೀಕೆ ಮಾಡುವುದಿಲ್ಲ. ಆದರೆ ರಾಜ್ಯಕ್ಕೆ ಅವರ ಕೊಡುಗೆ ಏನು…? ಎಂದು ಪ್ರಶ್ನಿಸಿದ ಅವರು ರಾಜ್ಯದಲ್ಲಿ 40 % ಬಿಜೆಪಿ ಸರ್ಕಾರವಿದೆ ಎಂದು ಕುಟುಕಿದರು.
ಈ ಸಂದರ್ಭದಲ್ಲಿ ಎಪಿಸಿಸಿ ಮಾಜಿ ಅಧ್ಯಕ್ಷ ರಘು ವೀರಾರೆಡ್ಡಿ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ, ರವೀಂದ್ರ ರಾಜಣ್ಣ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚೌಡಪ್ಪ, ಎಂ. ಎಚ್ ನಾರಾಯಣಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ ನಾಗೇಶ್ ಬಾಬು, ಪುರಸಭೆ ಮಾಜಿ ಅಧ್ಯಕ್ಷರಾದ ಎನ್. ಗಂಗಣ್ಣ, ಕೆ ಪ್ರಕಾಶ್, ಎಂ ಕೆ ನಂಜುಂಡಯ್ಯ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ. ಜೆ ರಾಜಣ್ಣ, ಜಿಪಂ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಪಾಲಯ್ಯ, ಆದಿ ನಾರಾಯಣ ರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಪಿ ಸಿ ಕೃಷ್ಣಾರೆಡ್ಡಿ, ತಾ. ಪಂ ಮಾಜಿ ಸದಸ್ಯ ರಾಮಣ್ಣ ಪುರಸಭಾ ಸದಸ್ಯರಾದ ಲಾಲಾಪೇಟೆ ಮಂಜುನಾಥ್, ಮಂಜುನಾಥ್ ಆಚಾರ್, ಅಲೀಮ್, ಸಾಧಿಕ್, ಮುಖಂಡರಾದ ತುಂಗೋಟಿ ರಾಮಣ್ಣ, ಎಸ್ ಬಿ ಟಿ ರಾಮು, ಇಂದಿರಾ ದೇನಾ ನಾಯ್ಕ, ಸುವರ್ಣಮ್ಮ, ಪ್ರಮೀಳಮ್ಮ, ಚಂದ್ರಮ್ಮ, ಅನಸೂಯಮ್ಮ, ಮಂಜುಳಾ ಆದಿ ನಾರಾಯಣ ರೆಡ್ಡಿ, ಇತರರಿದ್ದರು.