ತುಮಕೂರು


ಮಾಧ್ಯಮ ಬಯಸುವುದು ಉತ್ತಮ ಭಾಷೆಯನ್ನು. ಮಾಧ್ಯಮಕ್ಕೆ ಭಾಷೆಯೇ ಜೀವಾಳವಾಗಿದೆ ಎಂದು ಹಿರಿಯ ಪತ್ರಕರ್ತ ಡಾ. ಪದ್ಮರಾಜ ದಂಡಾವತಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗಗಳ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಹಿರಿಯ ಪತ್ರಕರ್ತ ಡಾ. ಪದ್ಮರಾಜ ದಂಡಾವತಿಯವರ ಪುಸ್ತಕ ‘ಮಾಧ್ಯಮ ಭಾಷಾ ದೀಪಿಕೆ’ ಕುರಿತು ಸಂವಾದ ಹಾಗೂ ‘ಮಾಧ್ಯಮ ಮತ್ತು ಭಾಷೆ’ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಓದುಗರನ್ನು, ಕೇಳುಗರನ್ನು ಹಿಡಿದಿಡುವ ಶಕ್ತಿ ಭಾಷೆಗಿದೆ. ಭಾಷಾ ಬಳಕೆ ಶುದ್ಧವಾಗಿರಬೇಕು. ಸ್ನಾತಕ ಪದವಿ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಶಿಕ್ಷಕರು ಭಾಷೆಯನ್ನು ಕಲಿಸುವಂತಹ ಮಟ್ಟಕ್ಕೆ ತಲುಪಿದ್ದೇವೆ. ಪದವಿ ಹಂತಕ್ಕೆ ಬರುವವರು ಪ್ರಾಥಮಿಕ ಶಿಕ್ಷಣದಲ್ಲೆ ಭಾಷಾ ಬಳಕೆ ಕಲಿತು ಬಂದರೆ ಒಳ್ಳೆಯದು ಎಂದರು.

ಶಿಕ್ಷಣ ಮುಗಿಸಿ ಹೊರಬರುತ್ತಿರುವ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಕುಂದುತ್ತಿದೆ. ಕೇವಲ ಪಠ್ಯಕ್ಕೆ ಸೀಮಿತವಾದರೆ ಸಾಲದು, ಸಾಹಿತ್ಯವನ್ನು ಓದಬೇಕು. ಬರೆವಣಿಗೆಯ ಶೈಲಿ ಮುಖ್ಯವಾಗುತ್ತದೆ. ಸಂದರ್ಭ ಸೂಚಿತ ಪದ ಬಳಕೆ ಇರಬೇಕು. ಇವೆಲ್ಲವೂ ಶಾಲಾ ಶಿಕ್ಷಣದಲ್ಲೆ ಕಲಿಸಬೇಕು. ಅಲ್ಲಿ ವಂಚಿತರಾದರೆ ಭವಿಷ್ಯದಲ್ಲಿ ಅಂಥ ಅವಕಾಶ ಸಿಗುವುದು ಕಷ್ಟ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಇಂತಹ ಸಂವಾದ ಕಾರ್ಯಕ್ರಮಗಳು ಓದಿನ ಆಸಕ್ತಿ ಬೆಳೆಸಿ, ಪದವಿಯ ಹಂತದಲ್ಲೇ ಕಾರ್ಯೋನ್ಮುಖರನ್ನಾಗಿ ಮಾಡುತ್ತವೆೆ. ಸಮಾಜಕ್ಕೆ ಉಪಯುಕ್ತವಾಗುವಂಥ ಸುದ್ದಿಗಳನ್ನು ತಯಾರಿಸುವುದು ನಿಮ್ಮ ಕರ್ತವ್ಯವಾಗಿದೆ ಎಂದರು.
ಡಾ. ಡಿ. ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಡಾ. ಅಣ್ಣಮ್ಮ ಮಾತನಾಡಿ, ಭಾಷೆಯ ಮೇಲಿನ ಹಿಡಿತ ವಿದ್ಯಾರ್ಥಿ ಜೀವನದಲ್ಲೇ ಆಗುವುದು ಮುಖ್ಯ. ನಮ್ಮ ಭಾಷಾ ಬಳಕೆ ನಮ್ಮ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದಂತೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ಗ್ರಂಥಾಲಯದ ಬಳಕೆ ವಿದ್ಯಾರ್ಥಿಗಳಿಗೆ ಅವಶ್ಯಕ. ಓದಿನ ಅಭ್ಯಾಸ ವಿದ್ಯಾರ್ಥಿಗಳು ಬೆಳೆಸಿಕೊಂಡರೆ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿದರು.
‘ಮಾಧ್ಯಮ ಭಾಷಾ ದೀಪಿಕೆ’ ಪುಸ್ತಕ ಕುರಿತು ವಿವಿಧ ವಿಭಾಗಗಳ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಹಂಚಿಕೊAಡರು.
ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಡಾ. ಸಿಬಂತಿ ಪದ್ಮನಾಭ ಕೆ. ವಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕರಾದ ಡಾ. ಪೃಥ್ವಿರಾಜ ಟಿ., ವಿನಯ್ ಕುಮಾರ್ ಎಸ್. ಎಸ್., ಮನೋಜ ಕುಮಾರಿ ಬಿ., ತಾಂತ್ರಿಕ ಸಹಾಯಕ ಅಭಿಷೇಕ್ ಎಂ. ವಿ., ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನ ವಿಭಾಗದ ಪ್ರಾಧ್ಯಾಪಕ ಡಾ. ಹೆಚ್. ಕೆ. ಶಿವಲಿಂಗಸ್ವಾಮಿ, ಕನ್ನಡ ಅಧ್ಯಯನ ಮತ್ತು ಸಂಶೋಧನ ವಿಭಾಗದ ಪ್ರಾಧ್ಯಾಪಕರಾದ ಡಾ. ಗೀತಾ ವಸಂತ, ಡಾ. ನಾಗಭೂಷಣ್ ಭಾಗವಹಿಸಿದ್ದರು. ಉಪನ್ಯಾಸಕರಾದ ಕೋಕಿಲ ಎಂ. ಎಸ್. ಸ್ವಾಗತಿಸಿದರು. ಅನನ್ಯ ಎಂ. ವಂದಿಸಿದರು. ಸ್ನಾತಕೋತ್ತರ ವಿದ್ಯಾರ್ಥಿಗಳಾದ ನಾಗೇಂದ್ರ ಕೆ. ಎಸ್. ಹಾಗೂ ಪ್ರೀತಿ ವೈ. ವಿ. ನಿರೂಪಿಸಿದರು.

(Visited 1 times, 1 visits today)