ತುಮಕೂರು :

ಸರ್ಕಾರವು ತನ್ನ ಆಯವ್ಯಯದಲ್ಲಿ ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣಕ್ಕಾಗಿ 11,447 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹಾ ನಗರ ಪಾಲಿಕೆ ಸಹಯೋಗದಲ್ಲಿ ನಗರದ ಬಾಲ ಭವನ ಸಭಾಂಗಣದಲ್ಲಿ ಗುರುವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿದ್ದು, ಜಾತಿ ಗಣತಿ ಆಧಾರದ ಮೇಲೆ ಶೇಕಡಾ 3ರಷ್ಟಿದ್ದ ಮೀಸಲಾತಿಯನ್ನು ಶೇ. 7.5ಕ್ಕೆ ಹೆಚ್ಚಿಸಲಾಗಿದೆ. ಉದ್ಯೋಗ ಮತ್ತು ಶಿಕ್ಷಣಕ್ಕೆ ಮಾತ್ರ ಈ ಮೀಸಲಾತಿ ಅನ್ವಯವಾಗಲಿದೆ ಎಂದು ತಿಳಿಸಿದರು.
ಸ್ವಾವಲಂಬಿ ಬದುಕು ನಡೆಸಲು ಪರಿಶಿಷ್ಟ ವರ್ಗದ ಸುಮಾರು 5000 ಯುವಕ/ಯುವತಿಯರಿಗೆ ವಿವಿಧ ತರಬೇತಿ ನೀಡಲಾಗಿದೆಯಲ್ಲದೆ 74367 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗಿದೆ. ರಾಜ್ಯದಲ್ಲಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ 12 ಬುಡಕಟ್ಟು ಸಮುದಾಯದ 48000 ಕುಟುಂಬಗಳಿಗೆ ಪೌಷ್ಟಿಕ ಆಹಾರ ಒದಗಿಸಲು ಸುಮಾರು 140 ಕೋಟಿ ರೂ. ಹಣವನ್ನು ವೆಚ್ಚ ಮಾಡಲಾಗಿದೆ. ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ವಿದೇಶಿ ವ್ಯಾಸಂಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಬುದ್ಧ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರಲ್ಲದೆ, ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಮಹರ್ಷಿ ವಾಲ್ಮೀಕಿಯಾದ ರತ್ನಾಕರಃ
ಮಹರ್ಷಿ ವಾಲ್ಮೀಕಿ ಅವರು ಸೂರ್ಯ-ಚಂದ್ರರಿರುವವರೆಗೆ ಮನುಕುಲದ ಜೊತೆ ಇರುತ್ತಾರೆ. ಸಾಮಾನ್ಯ ವ್ಯಕ್ತಿಯಾಗಿದ್ದ ರತ್ನಾಕರ ಪರಿವರ್ತನೆ ಹೊಂದಿ ವಾಲ್ಮೀಕಿಯಾಗಿ 24000 ಶ್ಲೋಕಗಳುಳ್ಳ ರಾಮಾಯಣ ಮಹಾಕಾವ್ಯ ಬರೆಯುವ ಮೂಲಕ ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ರಾಮಾಯಣ ಕೃತಿ ಮೂಲಕ ಮನುಷ್ಯ ಜೀವನವು ಸತ್ಯ ಮತ್ತು ಧರ್ಮದ ಆಧಾರದ ಮೇಲೆ ನಿಂತಿದೆ ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿದ ಮಹಾ ಋಷಿಯಾಗಿದ್ದಾರೆ ಎಂದರಲ್ಲದೆ ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬರಲ್ಲಿಯೂ ದುಷ್ಟ ಗುಣಗಳಿರುತ್ತವೆ. ನಮ್ಮಲ್ಲಿರುವ ದುಷ್ಟ ಗುಣಗಳನ್ನು ಸಂಹಾರ ಮಾಡಿ ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂಬುದೇ ಮಹಾ ಗ್ರಂಥ ರಾಮಾಯಣದ ಸಾರವೆಂದು ಅಭಿಪ್ರಾಯಪಟ್ಟರು.
ಸುಮಾರು 5000 ವರ್ಷಗಳ ಹಿಂದೆ ಹುಟ್ಟಿದ ವರ್ಣಾಶ್ರಮ ಪದ್ಧತಿಯಿಂದ ಶ್ರಮಿಕ ವರ್ಗದವರನ್ನು ಕೆಳಸ್ತರದವರೆಂದು ಗುರುತಿಸಿರುವುದು ನಮ್ಮ ದೌರ್ಭಾಗ್ಯ. ಶ್ರಮಿಕ ವರ್ಗದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಕೆಳಸ್ತರದವರನ್ನು ಮೇಲ್ಪಂಕ್ತಿಗೆ ತರಲು ಡಾಃ ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಸಮಾನತೆ ಹಕ್ಕನ್ನು ನೀಡಲಾಗಿದೆ. ಆದರೂ ಸಮಾಜದಲ್ಲಿ ಮೇಲ್ವರ್ಗ-ಕೆಳವರ್ಗವೆಂಬ ಬೇಧ-ಭಾವ, ದಲಿತರ ಶೋಷಣೆ ಇನ್ನೂ ನಿಂತಿಲ್ಲವೆAದು ಬೇಸರ ವ್ಯಕ್ತಪಡಿಸಿದರು.
ಯಾವುದೇ ವ್ಯಕ್ತಿಯ ವ್ಯಕ್ತಿತ್ವವನ್ನು ಜಾತಿಯಿಂದ ಗುರುತಿಸುವುದು ನಿಂತಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ. ಎಲ್ಲರೂ ಸಮಾನತೆಯಿಂದ ಬದುಕಬೇಕೆಂಬ ದೃಷ್ಟಿಯಿಂದ ಮಹರ್ಷಿ ವಾಲ್ಮೀಕಿಯಂತಹ ಮಹನೀಯರ ಜಯಂತಿಯನ್ನು ಆಚರಿಸಲಾಗುತ್ತಿದೆ. ಸಮಾಜದಲ್ಲಿ ಮೇಲು-ಕೀಳು ಭಾವನೆಗಳನ್ನು ತೊರೆದು ಎಲ್ಲರೂ ಸಮಾನರೆಂಬ ಭಾವ ಮೂಡಿದಾಗ ಮಾತ್ರ ಇಂತಹ ಕಾರ್ಯಕ್ರಮಗಳ ಆಚರಣೆ ಅರ್ಥಪೂರ್ಣವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ರಾಮಾಯಣ ಎಂಬ ಮಹಾ ಗ್ರಂಥವನ್ನು ರಚಿಸುವ ಮೂಲಕ ಆದಿ ಕವಿ ಮತ್ತು ಮಹಾ ಋಷಿ ಎನಿಸಿಕೊಂಡಿದ್ದಾರೆ. ಅವರ ತತ್ವಾದರ್ಶಗಳನ್ನು ಪಾಲಿಸಿಸುವ ಮೂಲಕ ದ್ವನಿ ಇಲ್ಲದವರಿಗೆ ದ್ವನಿಯಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಎನ್.ಎಸ್.ಧನುಷ್, ವೈ.ಕಾವ್ಯ, ಕೆ.ಎಸ್. ಚರಣ್‌ರಾಜ್, ಸಾನ್ವಿ, ಬಿಂದು, ಡಿ.ಎ.ಪುನೀತ್, ಓ. ಭಾರ್ಗವಿ, ಸಿ.ಎಲ್. ಚೇತನ, ಭಾನುಪ್ರಕಾಶ್, ಪುಷ್ಪಲತಾ, ಎಂ.ಸೃಷ್ಟಿ, ದೀಪ್ತಿಶ್ರೀ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಹಲಗಲಿ ಬೇಡರ ದಂಗೆಯಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಅವರ ಸ್ಮರಣಾರ್ಥ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಪರಿಶಿಷ್ಟ ಪಂಗಡದ ತುಮಕೂರು ಶೈಕ್ಷಣಿಕ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಮೇಲನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಹೆಚ್.ವಿ.ಸ್ಫೂರ್ತಿ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಶಿರಾ ತಾಲ್ಲೂಕು ಭುವನಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಡಿ.ಜೆ. ನವ್ಯಶ್ರೀ ಅವರಿಗೆ 1ಲಕ್ಷ ರೂ.ಗಳ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಅಂತರ್ ಜಾತಿ ವಿವಾಹವಾದ ತುಮಕೂರಿನ ಎಂ. ಪುಷ್ಪಲತಾ ಹಾಗೂ ಸಂಜಯ್ ದಂಪತಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಜಗದ ಕವಿ, ಯುಗದ ಕವಿ, ಸರ್ವಧರ್ಮಕ್ಕೆ ಮಹಾನ್ ಗ್ರಂಥ ರಾಮಾಯಣ ರಚಿಸಿದ ವಿಶ್ವಕವಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ. ಕೃಷ್ಣಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತ್ಯಾಗರಾಜು, ಪಾಲಿಕೆ ಮಾಜಿ ಮಹಾಪೌರ ಬಿ.ಜಿ. ಕೃಷ್ಣಪ್ಪ, ಚಂದ್ರಶೇಖರ ಗೌಡ, ವಾಲ್ಮೀಕಿ ವಿದ್ಯಾವರ್ಧಕ ಸಂಘ ಅಧ್ಯಕ್ಷ ಹೆಚ್. ಜಿ. ಪುರುಷೋತ್ತಮ, ಜಿಲ್ಲಾ ನಾಯಕ ಸಮುದಾಯದ ಮುಖಂಡರಾದ ವಿಜಯ ಕುಮಾರ, ಕೆಂಪಹನುಮಯ್ಯ, ಕೃಷ್ಣಮೂರ್ತಿ, ಸಿ.ದಾಸಪ್ಪ, ಮಹದೇವಯ್ಯ, ಶ್ರೀರಾಮಚಂದ್ರ ನಾಯಕ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಲಕ್ಷಿö್ಮ ನಾರಾಯಣ, ಸೇರಿದಂತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿ, ಸಮುದಾಯದ ಮುಖಂಡರು, ವಿವಿಧ ಸಂಘಟನೆ ಪದಾಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.
ಇದಕ್ಕೂ ಮುನ್ನ ಬೆಳ್ಳಿ ರಥದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಿಲ್ಲಾಧಿಕಾರಿ ಶುಭಕಲ್ಯಾಣ್ ಚಾಲನೆ ನೀಡಿದರು. ಮೆರವಣಿಗೆಯು ಜಿಲ್ಲಾಧಿಕಾರಿಗಳ ಕಚೇರಿಯಿಂದ ಅಶೋಕ ರಸ್ತೆ, ಟೌನ್‌ಹಾಲ್ ವೃತ್ತ, ಎಂ.ಜಿ. ರಸ್ತೆ ಮೂಲಕ ಬಾಲಭವನ ತಲುಪಿತು.

(Visited 1 times, 1 visits today)