ತುಮಕೂರು:
ಇಂದಿನ ಯುವಜನಾಂಗ ಮೊಬೈಲ್ ಮೋಹ ಬಿಟ್ಟು, ಕ್ರೀಡೆಯಡೆಗೆ ಮುಖಮಾಡಬೇಕು ಎಂದು ತುಮಕೂರು ವಿವಿ ಕುಲಸಚಿವ ಡಾ.ಗಂಗಾನಾಯಕ್ ತಿಳಿಸಿದರು
ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಸರಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು ವಿವಿ ಅಂತರ ಕಾಲೇಜು ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪುರುಷ ಹಾಗೂ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ 2018-19 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುವ ಯುವಕರು ಮೊಬೈಲ್ ಮೊರೆಹೋಗಿ ಕ್ರೀಡಾಚಟುವಟಿಕೆಯ ಕ್ಷೇತ್ರದೆಡೆಗೆ ನಿರಾಸಕ್ತಿಯ ಮನೋಭಾವನೆ ತಳೆದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಪಠ್ಯದಂತೆ ಪಠ್ಯೇತರ ಚಟುವಟಿಕೆಗಳಡೆಗೂ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮನುಷ್ಯನಿಗೆ ಮಾನಸಿಕ ಆರೋಗ್ಯ ಹೇಗೆ ಮುಖ್ಯವೋ ಹಾಗೆಯೇ, ದೈಹಿಕ ಅರೋಗ್ಯವೂ ಮುಖ್ಯ. ಹಾಗಾಗಿ ಕ್ರೀಡೆಯನ್ನು ಮೈಗೂಡಿಸಿಕೊಳ್ಳಬೇಕು. ಪೋಷಕರು, ಅಧ್ಯಾಪಕರು ಸಹ ಮಕ್ಕಳನ್ನು ಕ್ರೀಡಾ ಕ್ಷೇತ್ರದಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಮಾತ್ರವೇ ಸೀಮಿತಗೊಳ್ಳದೆ, ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ ಎಂದರು.
ಯಾವುದೇ ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡರೆ ಹೊಸ ವಿಷಯಗಳನ್ನು ತಿಳಿಯಬಹುದಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಹೆಚ್ಚು ಪ್ರಶ್ನೆಗಳು ಮೂಡಬೇಕು. ಶಿಕ್ಷಕರು,ಸ್ನೇಹಿತರು ಹಾಗೂ ಸಮಾಜದ ಬಳಿ ಪ್ರಶ್ನೆ ಕೇಳುವುದನ್ನು ರೂಢಿಸಿಕೊಳ್ಳಬೇಕು.
ವಿದ್ಯಾರ್ಥಿ ಜೀವನ ಅತ್ಯಂತ ಸುಂದರ ಕ್ಷಣಗಳಾಗಿದೆ. ಕೇವಲ ಓದಿಗಷ್ಟೇ ಮೀಸಲಿಡಬಾರದು. ಓದಿನ ಜತೆ ಕ್ರೀಡೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್ ಮಾತನಾಡಿ, ರಾಜ್ಯ, ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸುವಂತಹ ಕ್ರೀಡಾಪಟಗಳು ಬೆಳೆಯಬೇಕು ನಮ್ಮ ನೆಲದಲ್ಲಿ ಎಂದ ಅವರು, ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಆಸಕ್ತಿಯನ್ನು ಹೆಚ್ಚಿನದಾಗಿ ಬೆಳೆಸಿಕೊಳ್ಳಬೇಕು ಎಂದು ಸಲಹೆಯಿತ್ತರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ವಿಭಾಗದ ಸುದೀಪ್ ಕುಮಾರ್, ಪ್ರಾಂಶುಪಾಲ ಜಗದೀಶ್, ಸಂಘಟನಾ ಕಾರ್ಯದರ್ಶಿ ಸೌಭಾಗ್ಯ ಬಿ.ಎಸ್, ಪ್ರೊ. ಸುರೇಶ್, ಸಹ ಪ್ರಾಧ್ಯಪಕಿ ಆರ್. ನಾಗರತ್ನಮ್ಮ, ಎಚ್ಓಡಿ ಯೋಗೇಶ್, ಶಿಕ್ಷಕರಾದ ಶ್ರೀನಿವಾಸ್ ಪ್ರಭು, ಹನುಮಂತರಾಯಪ್ಪ, ತಿಪ್ಪೇಸ್ವಾಮಿ ಮತ್ತಿತರು ಉಪಸ್ಥಿತರಿದ್ದರು.