ತುಮಕೂರು:
ಲೋಕಸಭೆ ಚುನಾವಣೆ ಪ್ರಯುಕ್ತ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗದೆ ಹೊರಗುಳಿದವರಿಗಾಗಿ ಜಿಲ್ಲಾದ್ಯಂತ ಮೊದಲನೇ ಹಂತದಲ್ಲಿ ಫೆಬ್ರುವರಿ 23 ಮತ್ತು 24ರಂದು ಹಾಗೂ ಎರಡನೇ ಹಂತದಲ್ಲಿ ಮಾರ್ಚ್ 2 ಮತ್ತು 3ರಂದು ವಿಶೇಷ ನೋಂದಣಿ ಅಭಿಯಾನವನ್ನು ನಡೆಸಲಾಗುವುದು ಎಂದು ಸ್ವೀಪ್ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಜಿಲ್ಲಾ ಪಂಚಾಯತಿಯಲ್ಲಿಂದು ನಡೆದ ಕೆ.ಡಿ.ಪಿ. ಸಭೆಯ ನಂತರ ಮಾತನಾಡಿದ ಅವರು, ಅಭಿಯಾನ ದಿನಗಳಂದು ಸಂಬಂಧಿಸಿದ ಮತಗಟ್ಟೆ ಅಧಿಕಾರಿಯು ಜನವರಿ 16ರಂದು ಪ್ರಕಟಿಸಲಾದ ಅಂತಿಮ ಮತದಾರರ ಭೌತಿಕ ಪಟ್ಟಿಯೊಂದಿಗೆ ಆಯಾ ಮತಗಟ್ಟೆಯಲ್ಲಿ ಹಾಜರಿದ್ದು, ಮತದಾರರಿಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.
ಈ ಅಭಿಯಾನದಲ್ಲಿ ದಿನಾಂಕ: 1-1-2019ಕ್ಕೆ 18ವರ್ಷ ಪೂರ್ಣಗೊಂಡ ಅರ್ಹ ಮತದಾರರು ಮತಪಟ್ಟಿಗೆ ನೋಂದಾಯಿಸಿಕೊಳ್ಳಲು ನಿಗಧಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತಗಟ್ಟೆ ಅಧಿಕಾರಿಗೆ ಸಲ್ಲಿಸಬಹುದು. ಅಲ್ಲದೆ ಮತದಾರ ಒಂದು ವಿಧಾನ ಸಭಾ ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಸ್ಥಳಾಂತರವಾಗಿದ್ದಲ್ಲಿ, ಮತಪಟ್ಟಿಯಲ್ಲಿ ಹೆಸರು, ವಿಳಾಸ, ವಯಸ್ಸು ಮತ್ತಿತರ ತಿದ್ದುಪಡಿಗಾಗಿ ನಿಗಧಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬಹುದಾಗಿದೆ.
ಸಾರ್ವಜನಿಕರು ಅಂತಿಮ ಮತಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಮತಪಟ್ಟಿಯಲ್ಲಿ ಹೆಸರು ಇಲ್ಲದಿರುವವರು ಹೊಸದಾಗಿ ತಮ್ಮ ವಾಸಸ್ಥಳ ಪ್ರಮಾಣ ಪತ್ರ, ಜನ್ಮ ದಿನಾಂಕ ಪ್ರಮಾಣಪತ್ರವನ್ನು ಒದಗಿಸುವ ಮೂಲಕ ಹೆಸರನ್ನು ನೋಂದಾಯಿಸಬಹುದು. ವಿಶೇಷವಾಗಿ ಯುವ ಮತದಾರರ ಹಾಗೂ ವಿಕಲಚೇತನ ಮತದಾರರ ನೋಂದಣಿಗೆ ವಿಶೇಷ ಆದ್ಯತೆಯನ್ನು ಈ ಅಭಿಯಾನದಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಈ ವಿಶೇಷ ನೋಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಈ ಸದಾವಕಾಶವನ್ನು ಉಪಯೋಗಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದರು.