ತುಮಕೂರು:
ದೇಶದ ಎಲ್ಲ ಕಡೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ನದಿ ಜೋಡಣೆಗೆ ಕೇಂದ್ರ ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಅಗತ್ಯ ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಸಲ್ಲಿಸಲಿ ಎಂದು ಸಂಸದ ಜಿ.ಎಸ್.ಬಸವರಾಜು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕೇಂದ್ರ ಸರ್ಕಾರ ಹೊಸದಾಗಿ ಜಲಶಕ್ತಿ ಸಚಿವಾಲಯ ಆರಂಭಿಸಿ, ನೀರಿಗೆ ಸಂಬಂಧಿಸಿದ ಎಲ್ಲ ಇಲಾಖೆಗಳ ಯೋಜನೆಯನ್ನು ಒಂದೇ ಇಲಾಖೆಗೆ ತರುವ ಮಹತ್ವದ ನಿರ್ಧಾರ ಕೈಗೊಂಡು ದೇಶದ ಪ್ರತಿಯೊಬ್ಬರಿಗೂ ಕುಡಿಯುವ ನೀರು ಮತ್ತು ಕೃಷಿಗೆ ನೀರು ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೈಗೊಂಡಿರುವ ಚಿಂತನೆ ಸ್ವಾಗತಾರ್ಹವಾಗಿದೆ ಎಂದರು.
ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅವರ ವರದಿ ಆಧಾರಿತ ರಾಜ್ಯದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ಅಂದರೆ ಕೃಷ್ಣ, ಕಾವೇರಿ, ಪಾಲಾರ್ ಮತ್ತು ಪೆನ್ನಾರ್ ನದಿ ಸೇರಿದಂತೆ ಗಂಗಾ, ಬ್ರಹ್ಮಪುತ್ರ ಮಹಾನದಿ ಇತ್ಯಾದಿಗಳ ಜೋಡಣೆಗೆ ಕ್ರಮಕೈಗೊಳ್ಳಬೇಕಾಗಿದೆ. ಇವೆಲ್ಲವುಗಳನ್ನು ಒಟ್ಟಾಗಿ ಸೇರಿಸುವ ಎತ್ತಿನ ಹೊಳೆ ಯೋಜನೆ ಪ್ರಗತಿಯಲ್ಲಿದ್ದು, ಈ ಕಾಲುವೆಯನ್ನು ವಾಟರ್ ಗ್ರಿಡ್ ಕೆನಾಲ್ ಆಗಿ ಮಾರ್ಪಾಡು ಮಾಡಿ ಜಲಮಾರ್ಗವಾಗಿ ಪರಿವರ್ತಿಸಬಹುದಾಗಿದೆ ಎಂದ ಅವರು, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ವಾಟರ್ ಆಡಿಟ್, ಬಡ್ಜೆಟ್, ಬ್ಯಾಂಕಿಂಗ್, ಸ್ಟ್ರಾಟಜಿಯನ್ನು ಇಡಿ ದೇಶದಾದ್ಯಂತ ಸಿದ್ಧಪಡಿಸಿ ರಾಜ್ಯದ 30 ಜಿಲ್ಲೆಗಳಿಗೂ ಇದನ್ನು ವಿಸ್ತರಿಸಿ, ರಾಜ್ಯಮಟ್ಟದ ನೀರಾವರಿ ಯೋಜನೆಯನ್ನು ಮಾಡಲಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ನದಿ ಜೋಡಣೆ ಯೋಜನೆಯಡಿ ನ್ಯಾಷನಲ್ ವಾಟರ್ ಡೆವಲಪ್‍ಮೆಂಟ್ ಅಥಾರಿಟಿ ಸಿದ್ಧಪಡಿಸಿರುವ ದಕ್ಷಿಣ ಭಾರತ ನದಿ ಜೋಡಣೆ ಅಡಿಯಲ್ಲಿಯೂ ನೀರು ದೊರೆಯಲಿದ್ದು, ಈ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಯೋಜನೆ ರೂಪಿಸಬೇಕಾಗಿದೆ. ಇದಕ್ಕಾಗಿ ಸರ್ವ ಪಕ್ಷಗಳ ಸಭೆ ರಾಜ್ಯದ ಸಂಸದರ ಸಭೆ ಮತ್ತು ನೀರಾವರಿ ಯೋಜನೆಗಾಗಿಯೇ ವಿಶೇಷ ಅಧಿವೇಶನ ಕರೆದು ಚರ್ಚಿಸಿ, ರಾಜ್ಯದ ಎಲ್ಲ ಕೆರೆಗಳಿಗೆ ನೀರು ತುಂಬಿಸಲು ಸರ್ಕಾರಿ ಆದೇಶ ಹೊರಡಿಸಿರುವುದು ಅನಿವಾರ್ಯವಾಗಿದೆ ಎಂದರು.
ಪ್ರವಾಹದ ಸಂದರ್ಭದಲ್ಲಿ ನದಿ ನೀರನ್ನು ಬಫರ್‍ಡ್ಯಾಮ್ ಮತ್ತು ಕೆರೆ, ಕಟ್ಟೆಗಳಲ್ಲಿ ಸಂಗ್ರಹಿಸಿ, ವಾಟರ್ ಗ್ರಿಡ್ ಕೆನಾಲ್ ಮತ್ತು ಕೆರೆ, ಕಟ್ಟೆಗಳಿಂದ ಗ್ರಾಮಗಳ ಕುಡಿಯುವ ನೀರಿಗಾಗಿ ವಾಟರ್‍ಗ್ರಿಡ್ ಪೈಪ್‍ಲೈನ್ ನಿರ್ಮಿಸಿ, ಪ್ರತಿ ಹಂತದಲ್ಲಿ ಟೆಲಿಮೆಟ್ರಿಕ್ ಗೇಜ್ ಅಳವಡಿಸಿ ನಿಗಧಿತ ನೀರು ನೀಡಲು ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕುಡಿಯುವ ನೀರಿನ ಯೋಜನೆಗಾಗಿ ನದಿ ನೀರು ಬಳಸುವ ಜಲಧಾರೆ ಯೋಜನೆಯನ್ನು ರೂಪಿಸುತ್ತಿದೆ ಎಂದ ಅವರು, ರಾಜ್ಯದಲ್ಲಿ 32,608 ಕೆರೆಗಳಿದ್ದು, ಇವುಗಳಲ್ಲಿ 350 ಟಿಎಂಸಿ ಅಡಿ ನೀರು ಸಂಗ್ರಹಿಸಬಹುದಾಗಿದ್ದು, ಕೆಲವು ಕೆರೆಗಳು ನೀರಿನಿಂದ ತುಂಬಿವೆ. ರಾಜ್ಯದಲ್ಲಿರುವ ಎಲ್ಲ ಕೆರೆಗಳನ್ನು ತುಂಬಿಸಲು 175 ಟಿಎಂಸಿ ಅಡಿ ಸಾಕಾಗಲಿದೆ ಎಂದು ನುಡಿದರು.
ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಸಚಿವರಾದ ಗಜೇಂದ್ರ ಶೇಖಾವತ್ ಅವರನ್ನು ತುಮಕೂರಿಗೆ ಕರೆಸಿ, ನೀರಾವರಿ ಯೋಜನೆ ಸಂಬಂಧಿಸಿದ ರಾಜ್ಯಮಟ್ಟದ ಬೃಹತ್ ಸಮಾವೇಶ ನಡೆಸಲು ಉಉದ್ದೇಶಿಸಿದ್ದು, ರಾಜ್ಯದ ಸರ್ವ ಧರ್ಮಗಳ ಮಠಾಧೀಶರ ನೇತೃತ್ವದಲ್ಲಿ ಇದನ್ನು ನಡೆಸಲು ಸಮಾಲೋಚಿಸಲಾಗಿದೆ ಎಂದರು.
ರಾಜ್ಯದ ಸಂಸದರು, ಶಾಸಕರು, ಜಿಲ್ಲಾಧ್ಯಕ್ಷರು, ಕೇಂದ್ರದಲ್ಲಿ ಸಚಿವರಾಗಿರುವ ನಿರ್ಮಲ ಸೀತರಾಮನ್, ಡಿ.ವಿ.ಸದಾನಂದಗೌಡ, ಪ್ರಹ್ಲಾದ್ ಜೋಶಿ, ಸುರೇಶ ಅಂಗಡಿ ಇವರನ್ನೊಳಗೊಂಡ ಬಿಜೆಪಿ ನಿಯೋಗ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಪ್ರಧಾನಿ ಬಳಿಗೆ ನಿಯೋಗ ತೆರಳಲು ನಿರ್ಧರಿಸಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹೆಬ್ಬೂರು ರಂಗಯ್ಯ, ಎನ್.ಆರ್.ನಾಗರಾಜರಾವ್, ನಟರಾಜು, ರಾಮಚಂದ್ರಪ್ಪ, ರವಿಗೌಡ, ನಗರಸಭೆ ಮಾಜಿ ಅಧ್ಯಕ್ಷೆ ಕಮಲಮ್ಮ ಮುಂತಾದವರು ಹಾಜರಿದ್ದರು.