ತುಮಕೂರು:
ಆಜಾದಿ ಕಾ ಅಮೃತ ಮಹೋತ್ಸವ ಭಾರತದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಸಂಕೇತವಾಗಿದೆ ಎಂದು ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್ ಪ್ರತಿಪಾದಿಸಿದರು.
ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಾಷ್ಟ್ರ ಜಾಗೃತಿ ಅಭಿಯಾನ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ಬಂದಿದೆ. ನಾವೆಲ್ಲರೂ ಸ್ವಾತಂತ್ರ್ಯ ತಂದುಕೊಟ್ಚ ಮಹನೀಯರುಗಳಿಗೆ ಚಿರಋಣಿಗಳು ಎಂದರು.
ದೇಶದ ಪ್ರತಿಯೊಬ್ಬರೂ ಭಾರತದ ಸಂವಿಧಾನದ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ದೇಶಸೇವೆಯಲ್ಲಿ ತೊಡಗಬೇಕು. ಹೀಗಾದಾಗ ಮಾತ್ರ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಆತ್ಮನಿರ್ಭರ್ ಭಾರತ್ ಆಶಯ ಪ್ರತಿಯೊಬ್ಬರಿಗೂ ಒಳಿತು ಬಯಸುವುದೇ ಆಗಿದೆ. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸುಸಂದರ್ಭವನ್ನು ಕಣ್ತುಂಬಿಕೊಳ್ಳವ ಕ್ಷಣದಲ್ಲಿ ನಾವೆಲ್ಲರೂ ಇದ್ದೇವೆ. ಪ್ರತಿಯೊಬ್ಬರೂ ಹರ್ ಘರ್ ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡು ಈ ಅಭಿಯಾನವನ್ನು ಯಶಸ್ವಿಗೊಳಿಸಿ ದೇಶ ಪ್ರೇಮ ಮೆರೆಯಬೇಕು ಎಂದು ಅವರು ಕರೆ ನೀಡಿದರು.
ದೇಶದ ಪ್ರತಿಯೊಬ್ಬ ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯೋನ್ಮುಖವಾಗಿವೆ ಎಂದು ಅವರು ಹೇಳಿದರು.
ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಒಟ್ಟುಗೂಡಿ ಶ್ರಮಿಸಬೇಕು. ಆಗ ಮಾತ್ರ ಸ್ವಚ್ಛ ಪರಿಸರ ಹೊಂದಲು ಸಾಧ್ಯ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರುವ ಹಿರಿಯರನ್ನು ಗೌರವಿಸುವ ಮೂಲಕ ದೇಶಭಕ್ತಿ ಮೆರೆಯೋಣ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಮಾತನಾಡಿ, 1947 ರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದರೂ ಸಹ ಇನ್ನು ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ಮಾತ್ರ ಕರೆಯಲಾಗುತ್ತಿದೆ. ಹಾಗಾಗಿ ನಮ್ಮ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ನಾವೆಲ್ಲರೂ ಮೂಲಭೂತ ಹಕ್ಕು, ಕರ್ತವ್ಯಗಳನ್ನು ಮರೆತಿದ್ದೇವೆ. ನಮ್ಮ ಮೂಲಭೂತ ಕರ್ತವ್ಯಗಳನ್ನು ಪಾಲನೆ ಮಾಡಿದಾಗ ಮಾತ್ರ ದೇಶದ ಏಳ್ಗೆ ಸಾಧ್ಯ ಎಂದರು.
ವಿದ್ಯಾರ್ಥಿಗಳು ಪ್ರಾಮಾಣಿಕತೆ, ಆತ್ಮವಿಶ್ವಾಸ ಹೊಂದಿದ್ದರೆ ಮಾತ್ರ ಜಗತ್ತಿನಲ್ಲಿ ಎಷ್ಟು ಎತ್ತರದ ಸ್ಥಾನಕ್ಕೆ ಬೇಕಾದರೂ ಹೋಗಬಹುದು. ಅಪ್ರಾಮಾಣಿಕತೆ ಮನುಷ್ಯನನ್ನು ಉತ್ತುಂಗಕ್ಕೆ ಕೊಂಡೊಯ್ಯುವುದಿಲ್ಲ ಎಂದು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ರಾಷ್ಟ್ರ, ನಾಡು, ಗಡಿ, ನುಡಿ, ನೀರಿನ ಬಗ್ಗೆ ಮಕ್ಕಳಿಗೆ ತಿಳುವಳಿಕೆ ಮೂಡಿಸಬೇಕು. ಅವರನ್ನು ರಾಷ್ಟ್ರಪ್ರೇಮಿಗಳನ್ನಾಗಿ ರೂಪಿಸಬೇಕು ಎಂದ ಅವರು, ನಾವು ಯಾವುದೇ ಕೆಲಸ ಮಾಡುತ್ತಿದ್ದರೂ ಅದರಲ್ಲಿ ನಿಷ್ಠೆ ಇರಬೇಕು. ಆಗ ಮಾತ್ರ ರಾಷ್ಟ್ರಸೇವೆ, ರಾಷ್ಟ್ರಭಕ್ತಿಗೆ ಬೆಲೆ ಬರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ರಾಜ್ಯಪಾಲರು ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಹೊರ ತಂದಿರುವ ಸ್ಮರಣಿಕೆ ಬಿಡುಗಡೆ ಮಾಡಿ ಅಮೃತ್ ಭಾರತ್ ವೆಬ್ಸೈಟ್ನ್ನು ಲೋಕಾರ್ಪಣೆಗೊಳಿಸಿದರು. ಜತೆಗೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಪ್ರಶಂಸನಾ ಪತ್ರ ಹಾಗೂ ಬಹುಮಾನ ವಿತರಿಸಿದರು.
ಸಮಾರಂಭದಲ್ಲಿ ಕ್ಯಾಪ್ಟನ್ ನವೀನ್ ನಾಗಪ್ಪ, ಸಂಸ್ಥೆಯ ಗೌರವ ಅಧ್ಯಕ್ಷ ಎಸ್.ಪಿ.ಚಿದಾನಂದ್, ಅಧ್ಯಕ್ಷ ಜಿ.ಎಸ್.ಬಸವರಾಜು ಉಪಸ್ಥಿತರಿದ್ದರು.