ತುಮಕೂರು :
ಜನೌಷಧ ಕೇಂದ್ರದಲ್ಲಿ ಅಗ್ಗದ ದರದಲ್ಲಿ ಔಷಧಿಗಳು ಲಭ್ಯವಾಗುತ್ತವೆ ಎಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದರು.
ಜಿಲ್ಲಾಸ್ಪತ್ರೆಯಲ್ಲಿಂದು ಜನೌಷಧ ಕೇಂದ್ರವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು ಮಾಜಿ ಕೇಂದ್ರ ಸಚಿವ ದಿವಂಗತ ಅನಂತಕುಮಾರ್ ಅವರ ದೂರದೃಷ್ಟಿಯ ಫಲವಾಗಿ ಕೇಂದ್ರ ಸರ್ಕಾರವು ದೇಶದಲ್ಲಿ ಜನೌಷಧ ಕೇಂದ್ರಗಳನ್ನು ತೆರೆಯಲು ಘೋಷಿಸಿದ್ದು, ಸರ್ಕಾರಿ ಆಸ್ಪತ್ರೆಗಳ ಬಳಿ ಹಾಗೂ ಹೆಚ್ಚು ಜನದಟ್ಟಣೆ ಇರುವ ಕಡೆ ಔಷಧ ಕೇಂದ್ರಗಳನ್ನು ತೆರೆದು ಅಗ್ಗದ ದರದಲ್ಲಿ ಔಷಧಿಗಳನ್ನು ವಿತರಿಸಲಾಗುತ್ತಿದೆ ಎಂದರು.
ಔಷಧ ಉತ್ಪಾದನಾ ಕಂಪನಿಗಳು ಕಡಿಮೆ ವೆಚ್ಚದಲ್ಲಿ ಉತ್ಪಾದಿಸಿ ಅಧಿಕ ದರದಲ್ಲಿ ಮಾರುವುದನ್ನು ಮನಗಂಡ ಸರ್ಕಾರ ಬಡವರ ಕೈಗೆಟುಕುವ ಬೆಲೆಯಲ್ಲಿ ಔಷಧಗಳು ಸಿಗುವಂತಾಗಲಿ ಎನ್ನುವ ಉದ್ದೇಶದಿಂದ ದೇಶದಾದ್ಯಂತ ಈ ಜನೌಷಧ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.
ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರ ತೆರೆದು ಜನರು ಕೇಳುವ ಔಷಧಗಳನ್ನು ಪೂರೈಸುವುದು ಸರ್ಕಾರದ ಉದ್ದೇಶವಾಗಿದೆ. ಜನೌಷಧಿ ಕೇಂದ್ರದಲ್ಲಿ ಲಭ್ಯವಿರುವ ಎಲ್ಲಾ ಔಷಧಗಳು ಉತ್ತಮ ಗುಣಮಟ್ಟದಿಂದ ಕೂಡಿದೆ. ಜನರು ಜನೌಷಧಿ ಕೇಂದ್ರದ ಔಷಧಿಯು ಕಡಿಮೆ ಬೆಲೆಯೆಂದು ಉದಾಸೀನ ಮಾಡದೇ ಔಷಧಗಳನ್ನು ಪಡೆದು ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ಟಿ.ಎ. ವೀರಭದ್ರಯ್ಯ ಮಾತನಾಡಿ ಜಿಲ್ಲಾಸ್ಪತ್ರೆಯಲ್ಲಿಂದು ಕೇಂದ್ರ ಸರ್ಕಾರದ ಪ್ರಯೋಜಿತ ಜನೌಷಧ ಕೇಂದ್ರವನ್ನು ತೆರೆಯಲಾಗಿದೆ. ಈ ಮೂಲಕ ಸಾರ್ವಜನಿಕರಿಗೆ ಅತೀ ಕಡಿಮೆ ದರದಲ್ಲಿ ಔಷಧಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಇದರಿಂದ ಅವರ ಆರ್ಥಿಕ ಹೊರೆ ತಗ್ಗಲಿದೆ ಎಂದರಲ್ಲದೇ ಮಾರುಕಟ್ಟೆಯಲ್ಲಿ ದೊರೆಯುವ ಬ್ರಾಂಡೆಡ್ ಔಷಧಿಗಳμÉ್ಟೀ ಜನೌಷಧ ಕೇಂದ್ರದ ಔಷಧಿಗಳು ಸಹ ಗುಣಮಟ್ಟದಿಂದ ಕೂಡಿರುತ್ತವೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಜಿ.ಬಿ ಜ್ಯೋತಿಗಣೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಎನ್ ಮಂಜುನಾಥ್, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ|| ಕೇಶವರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ|| ಮೋಹನ್ ದಾಸ್, ಆರ್‍ಎಂಒ ಡಾ: ವೀಣಾ, ಜನೌಷಧಿ ಕೇಂದ್ರದ ರಾಜೇಂದ್ರ ಪ್ರಸಾದ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.