ತುಮಕೂರು
ಬೊಜ್ಜು ಹಾಗು ಕೊಬ್ಬಿನಾಂಶ ಕರಗಿಸಲು ಸಿರಿಧಾನ್ಯ ಸಹಕಾರಿ. ಸಿರಿ ಧಾನ್ಯಗಳಲ್ಲಿ ನಮ್ಮ ದೇಹದ ಅಗತ್ಯತೆಗೆ ತಕ್ಕಂತೆ ಬೇಕಾಗಿರುವ ಪೌಷ್ಠಿಕ ಸತ್ವಗಳಾದ ತಾಮ್ರ, ಮೆಗ್ನೀಷಿಯಂ, ಪಾಸ್ಪರಸ್, ಮ್ಯಾಂಗನೀಸ್ ಮತ್ತು ಇತರ ಪೌಷ್ಟಿಕ ಸತ್ವಗಳು ಸಾಕಷ್ಟು ಲಭ್ಯವಿವೆ ಎಂದು ಡಾ|| ಸಂಜಯ್ ನಾಯಕ್ ತಿಳಿಸಿದರು.
ಅವರು ಹನುಮಂತಪುರ ಬಳಿ ಇರುವ ಭಾಗ್ಯ ನಗರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಿರಿಧಾನ್ಯ ಬಳಕೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿಗೆ ಜನರ ಬದಲಾದ ಜೀವನ ಶೈಲಿಯಿಂದ ಒಮ್ಮೆಲೇ ಕಾಡುತ್ತಿರುವ ಹೃದಯದ ಸಮಸ್ಯೆಗಳು, ಪಾಶ್ರ್ವವಾಯು, ರಕ್ತದ ಒತ್ತಡ, ಮಧುಮೇಹ ಹೀಗೆ ಹಲವು ಬಗೆಯ ದೀರ್ಘ ಕಾಲ ಕಾಡುವ ಕಾಯಿಲೆಗಳು ಜನರ ಜೀವವನ್ನು ಮತ್ತು ಜೀವನವನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಹಾಗಾಗಿ ಈ ಸಂದರ್ಭದಲ್ಲಿ ಅಗಾಧವಾದ ಪೌಷ್ಟಿಕಾಂಶಗಳನ್ನು ಒಳಗೊಂಡ ಸಿರಿ ಧಾನ್ಯಗಳ ಅವಶ್ಯಕತೆ ಜನರಿಗೆ ತುಂಬಾ ಇದೆ.ಸಮತೋಲನವಾದ ಆಹಾರ ಪದ್ಧತಿಯಲ್ಲಿ ಸಿರಿ ಧಾನ್ಯಗಳು ನಮಗೆ ಆರೋಗ್ಯಕರವಾದ ಜೀವನವನ್ನು ಒದಗಿಸುತ್ತವೆ ಎಂದರು.
ವಕೀಲ ಗಣೇಶ್ ಪ್ರಸಾದ್ ಮಾತನಾಡಿ, ಸಕ್ಕರೆ ಕಾಯಿಲೆಯ ಪ್ರಮಾಣ ಹೆಚ್ಚಾದಂತೆ ಸಿರಿಧಾನ್ಯದಿಂದ ಮಾಡಿದ ಆಹಾರಗಳಿಗೆ ಇದಕ್ಕಿದ್ದಂತೆ ಬೇಡಿಕೆ ಕಂಡು ಬಂತು.
ಈ ಆಹಾರ ನಿಧಾನವಾಗಿ ಪಚನವಾಗುವ ಕಾರಣ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುವುದಿಲ್ಲ. ಆದ್ದರಿಂದ ಸಿರಿಧಾನ್ಯ ಮಧುಮೇಹಿಗಳ ಪಾಲಿಗೆ ವರದಾನವಾಗಿ ಪರಿಣಮಿಸಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಿಂಧು ಒಕ್ಕೂಟದ ಅಧ್ಯಕ್ಷೆ ವರಲಕ್ಷ್ಮಿ ಉಪಸ್ಥಿತರಿದ್ದರು.