ತುಮಕೂರು
ಸಾರ್ವಜನಿಕರು,ವಿದ್ಯಾರ್ಥಿಗಳು ಓಡಾಡುವ ರಸ್ತೆಯ ಗೋಡೆಗಳ ಮೇಲೆ ತಪ್ಪು, ತಪ್ಪಾಗಿ ಕನ್ನಡ ಪದಗಳನ್ನು ಬರೆದು, ಕನ್ನಡ ಭಾಷೆಗೆ ಅಪಮಾನ ಮಾಡಿರುವ ತುಮಕೂರು ಸ್ಮಾರ್ಟ್ಸಿಟಿ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆತೀಕ್ ಅಹಮದ್ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಸರಕಾರಿ ಎಸ್ಸಿ,ಎಸ್ಟಿ ಮೇಟ್ರಿಕ್ ನಂತರದ ವಿದ್ಯಾರ್ಥಿನಿಯರ ಹಾಸ್ಟಲ್, ಬಿ.ಸಿ.ಎಂ.ಹಾಸ್ಟಲ್ ಕಾಂಪೌಂಡ್ ಗೋಡೆಗಳ ಮೇಲೆ ವಿವಿಧ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮಧ್ಯಪಾನ, ಧೂಮಪಾನ,ಪರಿಸರ ಮಾಲಿನ್ಯ, ಮಹಿಳಾ ಶಿಕ್ಷಣ ಕುರಿತಂತೆ ಹಲವು ಘೋಷವಾಕ್ಯಗಳನ್ನು ಬೆರೆಸಿದ್ದು, ಅವುಗಳಲ್ಲಿ ಹಲವಾರು ತಪ್ಪುಗಳು ಕಂಡುಬಂದಿವೆ.
ಸ್ಮಾರ್ಟ್ಸಿಟಿ ಅಧಿಕಾರಿಗಳು ಕನ್ನಡ ಉಳಿಸಿ, ಬೆಳೆಸುವ ಬದಲಾಗಿ, ಕನ್ನಡವನ್ನು ಕೊಲ್ಲುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಇಲ್ಲಿ ಕನ್ನಡಭಾಷೆಗೆ ಯಾರೇ ಅಪಮಾನ ಮಾಡಿದರು ಸಹಿಸುವುದಿಲ್ಲ.ಜಾಗೃತಿ ಸಂದೇಶಗಳನ್ನು ಬರೆಯಲು ಕನ್ನಡ ಭಾಷೆ ಗೊತ್ತಿಲ್ಲದ ಹೊರರಾಜ್ಯದ ಕೆಲಸಗಾರರಿಗೆ ಗುತ್ತಿಗೆ ನೀಡಿರುವುದೇ ಇದಕ್ಕೆ ಕಾರಣ. ಕನಿಷ್ಠ ಪಕ್ಷ ಸ್ಮಾರ್ಟಸಿಟಿ ಅಥವಾ ನಗರಪಾಲಿಕೆಯ ಅಧಿಕಾರಿಗಳಾದರೂ ಇದನ್ನು ಪರಿಶೀಲಿಸಿ,
ತಪ್ಪನ್ನು ಸರಿಪಡಿಸುವ ಕೆಲಸ ಮಾಡಬಹುದಿತ್ತು.ಆದರೆ ಇದುವರೆಗೂ ಈ ಕೆಲಸ ಆಗಿಲ್ಲ. ಈ ಭಾಗದಲ್ಲಿ ಒಂದನೇ ತರಗತಿಯಿಂದ ಪದವಿಯವರೆಗೆ ಶಾಲಾ, ಕಾಲೇಜುಗಳಿವೆ.
ಅಕ್ಷರ ಕಲಿಯುತ್ತಿರುವ ಮಕ್ಕಳು ಇಂತಹ ತಪ್ಪು ಬರಹ ನೋಡಿ ಕಲಿತರೆ, ಅವರ ಮುಂದಿನ ಭವಿಷ್ಯವೇನು ಎಂಬುದನ್ನು ಆತೀಕ್ ಅಹಮದ್ ಪ್ರಶ್ನಿಸಿದರು.
ಸ್ಮಾರ್ಟ್ಸಿಟಿ ಅಧಿಕಾರಿಗಳು, ಗೋಡೆ ಬರಹದಲ್ಲಿ ಆಗಿರುವ ತಪ್ಪನ್ನು ಸರಿಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಆತೀಕ್ ಅಹಮದ್ ತಿಳಿಸಿದರು.